
ಬೆಳಗಾವಿಯಲ್ಲಿ ಭಾನುವಾರ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಶಾಸಕ ಲಕ್ಷ್ಮಣ ಸವದಿ ಗೆಲುವು ಸಾಧಿಸಿದಾಗ ಅವರ ಬೆಂಬಲಿಗರು ವಿಜಯೋತ್ಸವ ಮೆರವಣಿಗೆ ಮಾಡಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಏಳು ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಮತದಾನ ನಡೆಯಿತು. ಮೂರು ಕ್ಷೇತ್ರಗಳ ವಿಜೇತರನ್ನು ಘೋಷಣೆ ಮಾಡಲಾಗಿದ್ದು, ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ನಾಲ್ಕು ಕ್ಷೇತ್ರಗಳ ಫಲಿತಾಂಶ ಘೋಷಣೆ ಮಾಡಲಿಲ್ಲ. ಇದರೊಂದಿಗೆ ಜಾರಕಿಹೊಳಿ ಸಹೋದರರ ಬಣಕ್ಕೆ ಬಲ ಬಂದಂತಾಗಿದೆ.
ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ 122 ಮತ ಪಡೆದು ಗೆದ್ದರೆ ಅವರ ವಿರುದ್ಧ ಮಾಜಿ ಶಾಸಕ ಮಹೇಶ ಕುಮಠಳ್ಳಿ ಕೇವಲ ಮೂರು ಮತ ಪಡೆದರು. ರಾಮದುರ್ಗದಲ್ಲಿ ಮಲ್ಲಣ್ಣ ಯಾದವಾಡ 19 ಮತ ಪಡೆದು ಶ್ರೀಕಾಂತ ಢವಣ (16 ಮತ) ಅವರನ್ನು ಸೋಲಿಸಿದರು. ರಾಯಬಾಗದಲ್ಲಿ ಬ್ಯಾಂಕಿನ ಹಾಲಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗೂಡೆ 120 ಮತ ಗಿಟ್ಟಿಸಿದರೆ ಬಸಗೌಡ ಆಸಂಗಿ 64 ಮತ ಮಾತ್ರ ಪಡೆದರು.
ನಿಪ್ಪಾಣಿ, ಚನ್ನಮ್ಮನ ಕಿತ್ತೂರು, ಬೈಲಹೊಂಗಲ ಹಾಗೂ ಹುಕ್ಕೇರಿ ಕ್ಷೇತ್ರದ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಅ.28ರವರೆಗೆ ಫಲಿತಾಂಶ ಘೋಷಣೆ ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ (ನಿಪ್ಪಾಣಿ), ರಮೇಶ ಕತ್ತಿ (ಹುಕ್ಕೇರಿ), ಮಾಜಿ ಶಾಸಕ ಮಹಾಂತೇಶ ದೊಡ್ಡಗಡರ (ಬೈಲಹೊಂಗಲ), ನಾನಾಸಾಹೇಬ ಪಾಟೀಲ (ಚನ್ನಮ್ಮನ ಕಿತ್ತೂರು) ಅವರ ಫಲಿತಾಂಶ ಪ್ರಕಟಿಸದಿದ್ದರೂ ಅವರ ಬೆಂಗಲಿಗರು ವಿಜಯೋತ್ಸವ ಆಚರಿಸಿದರು.
ಇದರೊಂದಿಗೆ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಬಣ 10 ನಿರ್ದೇಶಕ ಸ್ಥಾನ ಗೆದ್ದು ಮೇಲುಗೈ ಸಾಧಿಸಿತು. ಒಟ್ಟು 16 ಸ್ಥಾನಗಳ ಪೈಕಿ 9 ಕಡೆ ಅವಿರೋಧ ಆಯ್ಕೆಯಾಗಿದೆ.
ರಾಯಬಾಗದ ಅಭ್ಯರ್ಥಿ ಬಸಗೌಡ ಆಸಂಗಿ ಅವರ ಪರವಾದ 40 ಮತದಾನ ಹಕ್ಕುಪತ್ರ (ಡೆಲಿಗೇಷನ್) ಪ್ರತಿಗಳನ್ನು ಕದಿಯಲಾಗಿದೆ. ಇದರಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಅಪ್ಪಾಸಾಹೇಬ ಕುಲಗೂಡೆ ಕೈವಾಡ ಇದೆ ಎಂದು ಆರೋಪಿಸಿ ಡೆಲಿಗೇಟರ್‌ಗಳು ತಂಟೆ ತೆಗೆದರು. ಈ ವೇಳೆ ಮಾತಿಗೆ ಮಾತು ಬೆಳದು ಜಾರಕಿಹೊಳಿ ಬಣ ಹಾಗೂ ರಮೇಶ ಕತ್ತಿ ಬಣದ ಮುಖಂಡರು ಕೈಕೈ ಮಿಲಾಯಿಸಿದರು. ಈ ಬಗ್ಗೆ ಮಾರ್ಕೆಟ್ ಠಾಣೆಗೆ ದೂರು ಕೂಡ ನೀಡಲಾಗಿದೆ.
ವಿರೋಧಿ ಅಭ್ಯರ್ಥಿಯ ಡೆಲಿಗೇಷನ್ ಪ್ರತಿಗಳನ್ನು ಕದ್ದು ಇಟ್ಟುಕೊಂಡ ಬಗ್ಗೆ ದಾಖಲೆ ಇದ್ದರೆ ತೋರಿಸಲಿ. ದೂರು ದಾಖಲಿಸಿದ್ದಾರೆ. ಎಫ್‌ಐಆರ್ ಆಗಿಲ್ಲಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.