
ಬೆಳಗಾವಿ: ಇಲ್ಲಿನ ಟಿಳಕವಾಡಿಯ ಮೊದಲ ರೈಲ್ವೆ ಗೇಟ್ ಬಳಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಕಲಾ ಮಂದಿರ ಉದ್ಘಾಟನೆಯಾಗಿ ಎಂಟು ತಿಂಗಳಾದರೂ, ಬಳಕೆಗೆ ಮುಕ್ತವಾಗಿಲ್ಲ!
ಸುಸಜ್ಜಿತವಾದ ಸೌಕರ್ಯಗಳನ್ನು ಹೊಂದಿರುವ ಈ ಕಟ್ಟಡ ಯಾವುದೇ ಖಾಸಗಿ ಮಾಲ್‌ಗೂ ಕಮ್ಮಿ ಇಲ್ಲ. ಆದರೆ, ಬಳಕೆಯಾಗದ ಹಿನ್ನೆಲೆಯಲ್ಲಿ ದೂಳು ತಿನ್ನುತ್ತಿದ್ದು, ಬೀದಿನಾಯಿಗಳು ಬೇಕಾಬಿಟ್ಟಿಯಾಗಿ ಓಡಾಡುತ್ತಿವೆ. ಕಟ್ಟಡದ ಆವರಣದಲ್ಲಿ ಕಸಕಂಟಿ ಬೆಳೆದಿದ್ದು, ಕುರ್ಚಿ ಮತ್ತಿತರ ಪರಿಕರ ತುಕ್ಕು ಹಿಡಿಯುತ್ತಿವೆ.
‘ಕತ್ತಲಾಗುತ್ತಿದ್ದಂತೆ ಇಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿವೆ’ ಎಂಬ ಆರೋಪವೂ ಕೇಳಿಬರುತ್ತಿದೆ.
ಸಿದ್ದರಾಮಯ್ಯ ಉದ್ಘಾಟಿಸಿದ್ದರು:
₹47.83 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 2025ರ ಏಪ್ರಿಲ್ 20ರಂದು ಉದ್ಘಾಟಿಸಿದ್ದರು.
‘ಕಲಾ ಮಂದಿರ ಹಾಗೂ ಅದರಲ್ಲಿನ ವಾಣಿಜ್ಯ ಮಳಿಗೆಗಳಿಂದ ಉದ್ಯೋಗ ಸೃಷ್ಟಿಯಾಗಲಿದೆ. ಜತೆಗೆ, ಆದಾಯವೂ ಬರಲಿದೆ. ಆ ಆದಾಯವನ್ನು ಬೆಳಗಾವಿ ನಗರದ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ಅವರು ಆಗ ಹೇಳಿದ್ದರು. ಆದರೆ, ಈವರೆಗೂ ಕಟ್ಟಡವೇ ಬಳಕೆಯಾಗದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
‘2019ರಲ್ಲಿ ಆರಂಭವಾದ ಕಾಮಗಾರಿ ಕುಂಟುತ್ತ, ತೆವಳುತ್ತ ಸಾಗಿ, ಪೂರ್ಣಗೊಳ್ಳಲು ಐದಾರು ವರ್ಷ ಬೇಕಾಯಿತು. ಈಗ ಉದ್ಘಾಟನೆಯಾಗಿದ್ದರೂ ಬಳಕೆಗೆ ಮುಕ್ತಗೊಳಿಸಲು ಹಿಂದೇಟು ಹಾಕುತ್ತಿರುವುದು ಸರಿಯಲ್ಲ’ ಎಂಬುದು ಸಾರ್ವಜನಿಕರ ಆರೋಪ.
ಕಲಾ ಮಂದಿರದಲ್ಲಿ ಏನೇನಿದೆ?: ಾಣಿಜ್ಯೋದ್ಯಮ ಚಟುವಟಿಕೆ ಜತೆಗೆ, ಸಾಂಸ್ಕೃತಿಕ ಚಟುವಟಿಕೆಗೂ ಉತ್ತೇಜನ ನೀಡುವುದಕ್ಕಾಗಿ ನಿರ್ಮಿಸಿದ ಕಲಾ ಮಂದಿರದ ನೆಲಮಹಡಿಯಲ್ಲಿ 19 ಮಳಿಗೆ, ಒಂದು ವಿಶಾಲವಾದ ಒಳಾಂಗಣ ವ್ಯಾಪಾರಿ ಕೇಂದ್ರವಿದೆ. ಮೊದಲ ಮಹಡಿಯಲ್ಲಿ ಏಳು ಮಳಿಗೆ, ದೊಡ್ಡ ತಿನಿಸು ಮಳಿಗೆ ಸಮುಚ್ಚಯವಿದ್ದು, ಎರಡನೇ ಮಹಡಿಯಲ್ಲಿ ಪ್ರತ್ಯೇಕವಾಗಿ ಎರಡು ಸಭಾಂಗಣಗಳಿವೆ. ಎಸ್ಕಲೇಟರ್ ಸೇರಿದಂತೆ ಆಧುನಿಕ ಸೌಕರ್ಯಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.