
ಬೆಳಗಾವಿ: ನಗರದಲ್ಲಿ ಶುಕ್ರವಾರ ಮಧ್ಯರಾತ್ರಿಯೇ ರಾಜ್ಯೋತ್ಸವ ವೈಭವ ಕಳೆಗಟ್ಟಿತು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸರಿಯಾಗಿ ಮಧ್ಯರಾತ್ರಿ 12ಕ್ಕೆ ಜೈಕಾರಗಳು ಮುಗಿಲು ಮುಟ್ಟಿದವು. ಅಪಾರ ಸಂಖ್ಯೆಯಲ್ಲಿ ಸೇರಿದ ಜನ ಕುಣಿದು ಕುಪ್ಪಳಿಸಿದರು. ಬಾನಲ್ಲಿ ಸಿಡಿ ಮದ್ದುಗಳ ಚಿತ್ತಾರ ಮೂಡಿತು. ಕಣ್ಣು ಕೋರೈಸುವ ವಿದ್ಯುದ್ದೀಪಾಲಂಲಾರ, ಕನ್ನಡ ಬಾವುಟಗಳ ಹಾರಾಟ, ಎಲ್ಲೆಲ್ಲೂ ಕನ್ನಡ ಝೇಂಕಾರ ಮೊಳಗಿತು.
ಪ್ರತಿವರ್ಷದಂತೆ ಈ ಬಾರಿಯೂ ಗಡಿನಾಡ ಕನ್ನಡಿಗರು ರಾತ್ರಿಯೇ ಉತ್ಸವಕ್ಕೆ ಸಮಾವೇಶಗೊಂಡರು. ರಾತ್ರಿ 10ರ ನಂತರ ಏಕಾಏಕಿ ಸೇರಿದ ಕನ್ನಡಿಗರು ಇನ್ನಿಲ್ಲದಂತೆ ಸಂಭ್ರಮಿಸಿದರು. ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರದ ಜನರಿಂದ ಇಡೀ ವೃತ್ತ ಕಿಕ್ಕಿರಿದು ತುಂಬಿತು. ಪರಿಣಾಮ ವೃತ್ತದ ನಾಲ್ಕೂ ದಿಕ್ಕಿನ ಸಂಚಾರ ಸಂಪೂರ್ಣ ಬಂದ್ ಆಯಿತು.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇತರ ಕನ್ನಡ ಸಂಘಟನೆಗಳ ಕಾರ್ಯಕರ್ತರು ಇದೇ ಮೊದಲ ಬಾರಿಗೆ ಸಿಡಿ ಮದ್ದಿನ ಪ್ರದರ್ಶನ ಚಿತ್ತಾಪಹಾರಿಯಾಗಿತ್ತು.
ಇಳಿಸಂಜೆಯಿಂದಲೇ ವೃತ್ತದಲ್ಲಿ ಡಿಜೆ ಸಂಗೀತಕ್ಕೆ ಯುವಕ, ಯುವತಿಯರು ಹುಚ್ಚೆದ್ದು ನರ್ತಿಸಿದರು. ಸರಿಯಾಗಿ ರಾತ್ರಿ 12ಕ್ಕೆ ಕರ್ನಾಟಕ ರಾಜ್ಯೋತ್ಸವಕ್ಕೆ ಜಯವಾಗಲಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣರಿಗೆ ಜಯವಾಗಲಿ, ಯಾರಪ್ಪಂದು ಏನೈತಿ- ಬೆಳಗಾವಿ ನಮ್ಮದೈತಿ, ಪ್ರಾಣ ಕೊಟ್ಟೇವು- ಬೆಳಗಾವಿ ಬಿಡೆವು... ಮುಂತದ ಘೋಷಣೆಗಳು ಭೋರ್ಗೆದವು.
ತಕ್ಷಣ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಆರಂಭವಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಕನ್ನಡ ಹೃದಯಗಳು ಅಭಿಮಾನದಿಂದ ಹೆಜ್ಜೆ ಹಾಕಿದವು.
ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು, ಹಿರಿಯರು ಕೂಡ ಇನ್ನಿಲ್ಲದಂತೆ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.