ADVERTISEMENT

ಅದ್ಧೂರಿ ರಾಜ್ಯೋತ್ಸವಕ್ಕೆ ಬೆಳಗಾವಿ ಸಜ್ಜು: ಗಡಿ ಕನ್ನಡಿಗರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 15:42 IST
Last Updated 31 ಅಕ್ಟೋಬರ್ 2025, 15:42 IST
<div class="paragraphs"><p>ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ರಾತ್ರಿ ಝಗಮಗಿಸುವ ವಿದ್ಯುದ್ದೀಪಾಲಂಕಾರ ಮಾಡಲಾಯಿತು </p></div>

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ರಾತ್ರಿ ಝಗಮಗಿಸುವ ವಿದ್ಯುದ್ದೀಪಾಲಂಕಾರ ಮಾಡಲಾಯಿತು

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ದೂರಿ ರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಬೆಳಗಾದರೆ ಸಾಕು ಎಂದು ಲಕ್ಷಾಂತರ ಕನ್ನಡ ಮನಸ್ಸುಗಳು ಕಾದು ಕುಳಿತಿವೆ. ಈ ಬಾರಿ ಕೂಡ ಗಡಿಯಲ್ಲಿ ಕನ್ನಡಮ್ಮನ ವೈಭವೋಪೇತ ತೇರು ಎಳೆಯಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಮುಖ ರಸ್ತೆಗಳೆಲ್ಲ ಹಳದಿ–ಕೆಂಪು ಬಣ್ಣದ ಬಾವುಟಗಳಿಂದ ಕಂಗೊಳಿಸುತ್ತಿವೆ.

ADVERTISEMENT

ಇಲ್ಲಿನ ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ಕಾಕತಿ ವೇಸ್‌, ಕಾಲೇಜು ರಸ್ತೆ, ಅಂಬೇಡ್ಕರ್‌ ಮಾರ್ಗ, ಡಾ.ರಾಜ್‌ಕುಮಾರ್ ಮಾರ್ಗ, ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ ಕಚೇರಿ, ಕಾಂಗ್ರೆಸ್‌ ರಸ್ತೆ ಹೀಗೆ ಎಲ್ಲ ಕಡೆಯೂ ಕನ್ನಡನ ಹಾಸುಹೊಕ್ಕಾಗಿದೆ.

ಕಳೆದೊಂದು ವಾರದಿಂದ ತಯಾರಿ ನಡೆಸಿರುವ ಕನ್ನಡ ಯುವಜನರು ಇನ್ನಿಲ್ಲದ ಹುಮ್ಮಸ್ಸಿನಲ್ಲಿದ್ದಾರೆ. ವೃತ್ತಗಳಲ್ಲಿ ನಾಲ್ಕೂ ದಿಕ್ಕಿನ ರಸ್ತೆಗಳಿಗೆ ಭವ್ಯ ಸ್ವಾಗತ ಕಮಾನು ಹಾಕಲಾಗಿದೆ. ರಸ್ತೆಯ ವಿಭಜಗಕಳಲ್ಲಿ ಕಂಬಗಳನ್ನು ನೆಟ್ಟು ಕೆಂಪು– ಹಳದಿ ಬಾವುಗಳನ್ನು ಹಾರಿಸಲಾಗಿದೆ. ಕನ್ನಡ ಆದಿ ಕವಿಗಳು, ಜ್ಞಾನಪೀಠ ಪ್ರಶಸ್ತಿ ‍ಪುರಸ್ಕೃತರು, ಚಲನಚಿತ್ರ ನಟರು, ದಾಸರು, ಶರಣರ ಚಿತ್ರಪಟಗಳು ರಾರಾಜಿಸುತ್ತಿವೆ.

ರಾಣಿ ಚನ್ನಮ್ಮ ವೃತ್ತದ ನಾಲ್ಕೂ ದಿಕ್ಕಿನಲ್ಲಿ ಕನ್ನಡ ಸಂಘಟನೆಗಳ ಯುವಕರು, ಹಿರಿಯರು ಹಾಗೂ ಹೋರಾಟಗಾರರು ತಮ್ಮ ತಮ್ಮ ಮಂಟ‍ಪಗಳನ್ನು ಹಾಕಿದ್ದಾರೆ. ಈ ಮಂಟಪಗಳಿಗೂ ಕನ್ನಡದ ಕಂಪು ಸೂಸಿದ್ದು ಕೆಂಪು– ಹಳದಿ ಬಣ್ಣದಲ್ಲೇ ಕಂಗೊಳಿಸುತ್ತಿವೆ.

ರಸ್ತೆಯ ಇಕ್ಕೆಲಗಳಲ್ಲಿರುವ ಮಳಿಗೆ, ಮನೆಗಳಿಗೂ ದೀಪಾಲಂಕಾರ ಮಾಡಲಾಗಿದೆ. ಮಹಾನಗರ ಪಾಲಿಕೆಯಿಂದ ರಾಣಿ ಚನ್ನಮ್ಮ ವೃತ್ತ, ರಾಯಣ್ಣ ವೃತ್ತಗಳಲ್ಲಿ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ. ನಗರದ ಪ್ರಮುಖ ರಸ್ತೆಗಳೆಲ್ಲವೂ ಈಗ ಕನ್ನಡಮಯವಾಗಿ ಕಂಗೊಳಿಸುತ್ತಿವೆ.

ಸಿಡಿಮದ್ದಿನ ಪ್ರದರ್ಶನ: ಇದೇ ಮೊದಲ ಬಾರಿಗೆ ರಾಣಿ ಚನ್ನಮ್ಮ ವೃತ್ತದಲ್ಲಿ ಸಿಡಿಮದ್ದಿನ ಪ್ರದರ್ಶನ ಆಯೋಜಿಸಿದ್ದು ಮತ್ತಷ್ಟು ಮೆರಗು ತಂದಿದೆ. ಅ.31 ರಾತ್ರಿ 12ಕ್ಕೆ ರಾಜ್ಯೋತ್ಸವಕ್ಕೆ ಚಾಲನೆ ದೊರೆಯಲಿದೆ. ಅದರ ಅಂಗವಾಗಿ ರಾತ್ರಿಯೇ ಸಿಡಿಮದ್ದಿನ ವೈಭವ ತರಲು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಸನ್ನದ್ಧವಾಗಿದ್ದಾರೆ.

ಟಿ ಶರ್ಟ್‌, ಟವಲ್‌ಗಳ ಬಿಕರಿ

ನಗರದ ಮೂಲೆ ಮೂಲೆಯಲ್ಲೂ ಕರ್ನಾಟಕದ ನಕ್ಷೆ ಇರುವ ಟಿ–ಶರ್ಟ್‌ಗಳ ಮಾರಾಟ ಭರ್ಜರಿಯಾಗಿ ನಡೆದಿದೆ. ಕೆಂಪು–ಹಳದಿಯ ಬಾವುಟಗಳಂತೂ ಇನ್ನಿಲ್ಲದಂತೆ ಬಿಕರಿಯಾಗುತ್ತಿವೆ. ಟಿ–ಶರ್ಟ್‌, ಬಾವುಟ ಹಾಗೂ ಶಾಲುಗಳನ್ನು ಕೊಳ್ಳಲು ಜನ ಮುಗಿಬಿದ್ದಿದ್ದಾರೆ.

ಕಳೆದ ಎರಡು ತಿಂಗಳ ಹಿಂದಿನಿಂದಲೇ ಈ ವ್ಯಾಪಾರ ಶುರು ಮಾಡಿದ್ದೇನೆ. ಈಗಾಗಲೇ ಅಪಾರ ಸಂಖ್ಯೆಯ ಟಿ ಶರ್ಟ್‌ಗಳು ಮಾರಾಟವಾಗಿವೆ ಎಂದು ಸಾಹಿತ್ಯ ಭವನದ ಮುಂದೆ ಮಾರಾಟಕ್ಕೆ ಕುಳಿತ ಯುವಕರು ಹೇಳುತ್ತಾರೆ.

ಇನ್ನೇನು ನವೆಂಬರ್‌ 1 ಬಂದರೆ ಸಾಕು ಹಾಡು, ಕುಣಿತ, ಸಂಭ್ರಮ, ಜೈಕಾರ, ಭುವನೇಶ್ವರಿಯ ಐತಿಹಾಸಿಕ ಮೆರವಣಿಗೆ ಆರಂಭವಾಗಲಿದೆ.

ಭದ್ರತೆಗೆ 3,500 ಪೊಲೀಸರು

‘ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಬೇಕು. ಯಾರೂ ಕಾನೂನು– ಸುವ್ಯವಸ್ಥೆಗೆ ಧಕ್ಕೆ ಮಾಡಬಾರದು. ಭದ್ರತೆಗೆ 180 ಅಧಿಕಾರಿಗಳು, 2,300 ಪೊಲೀಸ್‌ ಸಿಬ್ಬಂದಿ, 400 ಹೋಮ್‌ ಗಾರ್ಡ್ಸ್‌, 10 ಕೆಎಸ್‌ಆರ್‌ಪಿ ತುಕಡಿ, 10 ಡಿ.ಆರ್. ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಭೂಷಣ ಬೊರಸೆ ತಿಳಿಸಿದ್ದಾರೆ.

‘ಈ ಬಾರಿ ಕೂಡ 10 ಡ್ರೋನ್‌ಗಳು ನಿರಂತರ ಹಾರಾಟ ನಡೆಸಲಿವೆ. ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಸರ್ದಾರ್ಸ್‌ ಮೈದಾನ, ಸಿಪಿಇಡಿ ಮೈದಾನ, ಮಹಿಳಾ ಠಾಣೆ ಹಿಂಭಾಗ ಹಾಗೂ ಕೋರ್ಟ್‌ ಕಾಂಪ್ಲೆಕ್ಸ್‌ ಆವರಣದಲ್ಲಿ ಸಣ್ಣ ವಾಹನ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ವಾಹನಗಳು ರಾಣಿ ಚನ್ನಮ್ಮ ವೃತ್ತದಲ್ಲಿ ಸಂಚರಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ವೃತ್ತಗಳಲ್ಲಿ ಕುಳಿತು ರಾಜ್ಯೋತ್ಸವ ವೀಕ್ಷಣೆಗೆ ಸ್ಥಳಾವಕಾಶ ಮಾಡಲಾಗಿದೆ. ಚನ್ನಮ್ಮ ವೃತ್ತ ಸಂಪರ್ಕಿಸುವ ಎಲ್ಲ ಮಾರ್ಗಗಳನ್ನೂ ಬದಲಾವಣೆ ಮಾಡಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಸುಪ್ರೀಂ ಕೊರ್ಟ್‌ ನಿರ್ದೇಶನದಂತೆ ರಾತ್ರಿ 10 ನಂತರ ಡಿಜೆ ಸಂಗೀತ, ಲೇಸರ್‌ ಲೈಟಿಂಗ್‌ ಬಳಕೆಯನ್ನು ನಿಷೇಧಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಮಹಾ’ ನಾಯಕರಿಗೆ ನಿರ್ಬಂಧ

ಮಹಾರಾಷ್ಟ್ರದ ಸಂಸದ ಧೈರ್ಯಶೀಲ ಮಾನೆ, ಶಿವಸೇನೆ (ಉದ್ಧವ್‌ ಠಾಕ್ರೆ ಬಣ) ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಶಾಮರಾವ್‌ ದೇವಣೆ ಹಾಗೂ ಇತರೆ ಎಂಇಎಸ್‌ ಮುಖಂಡರು ಬೆಳಗಾವಿ ಜಿಲ್ಲೆ ಗಡಿಯೊಳಗೆ ಪ್ರವೇಶಿದಂತೆ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ನಿಷೇಧಾಜ್ಞೆ ಹೊರಡಿಸಿದ್ದಾರೆ.

ರಾಜ್ಯೋತ್ಸವಕ್ಕೆ ವಿರುದ್ದವಾಗಿ ಎಂಇಎಸ್‌ ಆಚರಿಸಲು ಉದ್ದೇಶಿಸಿದ ಕರಾಳ ದಿನಾಚರಣೆಗೆ ಈ ನಾಯಕರಿಗೆ ಆಹ್ವಾನ ನೀಡಿದೆ. ಕಳೆದ ವರ್ಷ ಕೂಡ ಇವರನ್ನು ಆಹ್ವಾನಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗೃತಾ ಕ್ರಮವಾಗಿ ಇವರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.