
ಬೆಳಗಾವಿ: ‘12ನೇ ಶತಮಾನದ ಸಮಾಜದಲ್ಲಿ ಬಸವಣ್ಣವರು ಹಾಗೂ ಎಲ್ಲ ಶರಣರು ಜಾತೀಯತೆ ಹೋಗಲಾಡಿಸಿದರು. ಮಾನವ ಕುಲ ಒಂದೇ ಎಂದು ಕಾಯಕ ಶರಣರು ಸಾರಿದರು. ಹೀಗಾಗಿ, ಅವರಿಗೆ ಶಿವನನ್ನೂ ಪ್ರಶ್ನೆ ಮಾಡುವ ಶಕ್ತಿ ಇತ್ತು’ ಎಂದು ಅಂಜುಮನ್ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ಎಚ್.ಐ. ತಿಮ್ಮಾಪುರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಮಂಗಳವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಕಾಯಕ ಶರಣರಾದ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಕುದುರೆಗಳಿಗೆ ಹುಲ್ಲು ತರುವ ಕೆಲಸ ಮಾಡುತ್ತಿದ್ದರು ಮಾದರ ಚನ್ನಯ್ಯ. ಕಾಯಕವೇ ಕೈಲಾಸ ಎಂಬ ಮಂತ್ರ ರೀತಿ ಜೀವನ ಮಾಡಿದರು. ಚೋಳ ಅರಸನ ಮನೆಯ ಮುಂದೆ ಅರಸನ ಭೋಜನ ಬಿಟ್ಟು ಚನ್ನಯ್ಯನ ಭಕ್ತಿ ಮೆಚ್ಚಿ ಅಂಬಲಿಯನ್ನು ಶಿವ ಸೇವಿಸುತ್ತಾನೆ. ಇದನ್ನು ಕಂಡ ಚೋಳ ಅರಸ ಚನ್ನಯ್ಯನ ಮನೆಗೆ ಹೋಗಿ ಅವನ ಕಾಲಿಗೆ ನಮಸ್ಕರಿಸುತ್ತಾನೆ. ಇದು ಚನ್ನಯ್ಯರವರ ನಿಜವಾದ ಭಕ್ತಿ’ ಎಂದು ಹೇಳಿದರು.
‘ಹುಟ್ಟಿನಿಂದ ಯಾರೂ ನೀಚರಲ್ಲ. ಅವನ ನಡತೆಯಿಂದ ಅವರ ಕುಲ ನಿರ್ಧಾರವಾಗುತ್ತದೆ ಎಂದು ಶರಣರು ಪ್ರತಿಪಾದಿಸಿದ್ದರು. ಕಾಯಕವಿಲ್ಲದ, ಶ್ರಮವಿಲ್ಲದವರು ಶರಣರಲ್ಲ ಎಂದರು. ದೇವರಿಗೆ ಹತ್ತಿರವಾಗಬೇಕಾದರೆ ತಮ್ಮ ಕಾಯಕವನ್ನು ಪ್ರಾಮಾಣಿಕತೆಯಿಂದ ಮಾಡಬೇಕು’ ಎಂದು ಹೇಳಿದರು.
‘ದೇವ ಮಾನವ ಎಂದು ಕರೆಯಿಸಿಕೊಂಡ ಮಹಾನ್ ಶರಣರು ಎಲ್ಲ ಸಮುದಾಗಳಿಗೆ ಸೇರಿದವರು. ಅವರನ್ನು ಕೇವಲ ಒಂದೇ ಕುಲಕ್ಕೆ ಸೀಮಿತ ಮಾಡಬಾರದು. ಶರಣರಲ್ಲಿಯೇ ಮಹಾನ್ ಶರಣ್ ಡೋಹರ ಕಕ್ಕಯ್ಯ ಗುಡಿಯನ್ನು ಧಿಕ್ಕರಿಸಿ ದೇಹವೇ ದೇಗುಲ ಎಂದು ನಿರ್ಧರಿಸಿದರು. ಮಾನವನಿಗೆ ಗೌರವ ಕೊಡುವುದೇ ನಿಜವಾದ ಭಕ್ತಿ ಎಂದು ಸಾಮಾಜಿಕ ಕೆಡುಕನ್ನು ಟೀಕಿಸಿದರು’ ಎಂದೂ ವಿವರಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡ ಮಲ್ಲೇಶ್ ಚೌಗುಲೆ, ಅನಂತ ಕುಮಾರ ಬ್ಯಾಕೂಡ, ಭೀಮರಾವ್ ಪವಾರ್, ವಿಠ್ಠಲ ಪೋಳ, ಕರೆಪ್ಪ ಗುಡೆನ್ನವರ, ಶರಣ ಸಮುದಾಯದ ಇದ್ದರು.
ಮನುಕುಲ ಉಳಿಯಲು ಎಲ್ಲರೂ ಕಾಯಕ ಶರಣರ ವಚನಗಳನ್ನು ಪಾಲಿಸಬೇಕು. ಸಮ ಸಮಾಜದ ನಿರ್ಮಾಣ ವಾಗಬೇಕು.ಬಸವರಾಜ ರೊಟ್ಟಿ ಅಧ್ಯಕ್ಷ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ
ಎಲ್ಲ ಸಮಾಜಗಳ ಜನ ಶುದ್ಧೀಕರಣವಾಗಬೇಕು ಏಕೀಕರಣವಾಗಬೇಕು ನವೀಕರಣವಾಗಬೇಕು ಸಬಲೀಕರಣ ಆಗಬೇಕು ಮುಖ್ಯವಾಗಿ ಒಂದಾಗಬೇಕು.ಪ್ರೊ.ಎಚ್.ಐ.ತಿಮ್ಮಾಪುರ ನಿವೃತ್ತ ಪ್ರಾಚಾರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.