ADVERTISEMENT

ವಸತಿ ಶಾಲೆ ಸ್ವಚ್ಛಗೊಳಿಸಿ, ನಂತರ ಬಳಸಿ: ಸಚಿವ ರಮೇಶ ಜಾರಕಿಹೊಳಿ ಸೂಚನೆ

ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಆರಂಭ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 6:29 IST
Last Updated 27 ಜನವರಿ 2021, 6:29 IST
ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ
ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆ   

ಬೆಳಗಾವಿ: ಕೋವಿಡ್ ಕೇರ್ ಸೆಂಟರ್ ಗಳಾಗಿ ಬಳಸಿದ ವಸತಿ ಶಾಲೆಗಳನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿ ಕೊಡಬೇಕು. ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ಸೂಚಿಸಿದ್ದಾರೆ. ಅವರು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಬೆಳಗಾವಿ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕರಾದ ಮಹೇಶ ಕುಮಠಳ್ಳಿ, ಅನಿಲ ಬೆನಕೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯ್ತಿ ಸಿಇಒ ದರ್ಶನ್ ಎಚ್.ವಿ., ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ಭಾಗಿಯಾಗಿದ್ದಾರೆ.

ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ಡಿಎಚ್‌ಒ, ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್ ಕೇರ್ ಸೆಂಟರ್‌ಗಳಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಕೋವಿಡ್ ವಾರ್ಡ್ ಇದೆ. ವಸತಿ ಶಾಲೆಗಳನ್ನು ಸ್ವಚ್ಛಗೊಳಿಸಿ, ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸಂಬಂಧಿಸಿದ ಇಲಾಖೆಗೆ ನೀಡಲಾಗಿದೆ ಎಂದು ಡಿಎಚ್ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

ADVERTISEMENT

ಶಾಸಕ ಅನಿಲ್ ಬೆನಕೆ, ಕೋವಿಡ್ ಸಂದರ್ಭದಲ್ಲಿ ಕ್ವಾರಂಟೈನ್ ಕಾರ್ಯಕ್ಕಾಗಿ ಹೋಟೆಲ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಸಮಸ್ಯೆ ಇದ್ದಾಗ ಸರ್ಕಾರಕ್ಕೆ ನೆರವಾದ ಹೋಟೆಲ್ ಗಳವರಿಗೆ ಬಿಲ್ ಬಾಕಿ ಇದೆ. ಅದನ್ನು ಕೊಡಿಸಿಕೊಡಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ 22ರಲ್ಲಿ 21 ಹೋಟೆಲ್ ಗಳವರಿಗೆ ಬಿಲ್ ಪಾವತಿಸಲಾಗಿದೆ ಎಂದು ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ತಿಳಿಸಿದರು. ಯಾರಿಗೂ ಬಾಕಿ ಉಳಿಸಿ ಕೊಳ್ಳ ಬೇಡಿ. ಕೂಡಲೇ ಪಾವತಿಸಿ ಎಂದು ಸಚಿವ ರಮೇಶ ಜಾರಕಿಹೊಳಿ ಸೂಚಿಸಿದರು.

ಬಿಲ್ ಪಾವತಿಗೆ ಅನುದಾನದ ಕೊರತೆ ಇಲ್ಲ ಎಂದು ನಗರ ಪಾಲಿಕೆ ಆಯುಕ್ತ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಮಕ್ಕಳ ಲಸಿಕಾ ಕಾರ್ಯಕ್ರಮ ಶೇ 90ರವರೆಗೆ ಆಗಿದೆ. ಕ್ಷಯ ರೋಗಕ ಪತ್ತೆ ಕಾರ್ಯಾಚರಣೆ ಶೇ 55ರಷ್ಟು ಆಗಿದೆ. ಮಲೇರಿಯಾ ಪ್ರಕರಣ ಕಂಡುಬಂದಿಲ್ಲ. ಕುಟುಂಬ ಕಲ್ಯಾಣ ಕಾರ್ಯಕ್ರಮ ಶೇ 50ರಷ್ಟು ನಡೆದಿದೆ. ಮುಂದಿನ ದಿನಗಳಲ್ಲಿ ಚುರುಕುಗೊಳಿಸಲಾಗುವುದು. ಕೆಲವು ಕಾರ್ಯಕ್ರಮ ಕೋವಿಡ್ ನಿಂದಾಗಿ ಪ್ರಗತಿಯಾಗಿಲ್ಲ ಎಂದು ಡಿಎಚ್ಒ ಮುನ್ಯಾಳ ತಿಳಿಸಿದ್ದು, ಔಷಧಿಗಳಿಗೆ ಕೊರತೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕೆಲವೇ ದಿನಗಳಲ್ಲಿ ಹಿಂಗಾರು ಬೆಳೆ ಸಮೀಕ್ಷೆಯೂ ಪೂರ್ಣಗೊಳ್ಳಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು. ಹೋದ ವರ್ಷ ₹ 15 ಕೋಟಿ ಬೆಳೆ‌ ವಿಮೆ ರೈತರಿಗೆ ಜಮೆಯಾಗಿದೆ. ಹಿಂಗಾರು ಹಂಗಾಮಿನದ್ದು ಬಂದಿಲ್ಲ ಎಂದು ಮಾಹಿತಿ ನೀಡಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿಲ್ಲೆಯಲ್ಲಿ ಹೆಚ್ಚಿನವರು ಒಂದೇ ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ಅವರಿಗೆ ಹೆಚ್ಚು ಅನುಕೂಲ ಆಗುವುದಿಲ್ಲ. ಪರ್ಯಾಯ ಬೆಳೆಗಳ ಬಗ್ಗೆ ಜಾಗೃತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಬೆಳೆ ಸಮೀಕ್ಷೆ ಪ್ರಕಾರ, ಜಿಲ್ಲೆಯಲ್ಲಿ ಕಬ್ಬು ಬೆಳೆ ಜಾಸ್ತಿ ಇದೆ. ಅದಕ್ಕೆ ಪರ್ಯಾಯ ಬೆಳೆಗಳನ್ನು ಹಾಕುವಂತೆ ರೈತರಿಗೆ ಸಲಹೆ ನೀಡಲಾಗುವುದು. ಸಿರಿಧಾನ್ಯಗಳನ್ನು ಬೆಳೆಯುವಂತೆ ಜಾಗೃತಿ ನೀಡುತ್ತಿದ್ದೇವೆ ಎಂದು ಶಿವನಗೌಡ ಪಾಟೀಲ ತಿಳಿಸಿದರು.

ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ತಾಳ-ಮೇಳ ಇಲ್ಲ. ಹೀಗಾಗಿ ರೈತರಿಗೆ ತೊಂದರೆ ಆಗುತ್ತಿದೆ‌. ಬೆಳೆ ವಿಮೆ ನೆರೆಯ ಧಾರವಾಡ ಜಿಲ್ಲೆಯವರಿಗೆ ಹೆಚ್ಚು ಸಿಕ್ಕರೆ ಬೆಳಗಾವಿಯವರಿಗೆ ಕಡಿಮೆ ಸಿಗುತ್ತಿದೆ ಎಂದು ಶಾಸಕ ಶಾಸಕ ಮಹಾಂತೇಶ ಕೌಜಲಗಿ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.