
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಮಧ್ಯರಾತ್ರಿ ಸಂಭ್ರಮದಿಂದ ಹೊಸ ವರ್ಷ ಸ್ವಾಗತಿಸಲಾಯಿತು.
ವಿದ್ಯುದ್ದೀಪಗಳಿಂದ ಸಿಂಗಾರಗೊಂಡಿದ್ದ ನಗರದ ವಿವಿಧ ಪ್ರತಿಷ್ಠಿತ ಹೋಟೆಲ್‌ಗಳು, ಕ್ಲಬ್‌ಗಳಲ್ಲಿ ‘ನ್ಯೂ ಇಯರ್ ಪಾರ್ಟಿ’ ಆಯೋಜಿಸಲಾಗಿತ್ತು. ಪಾಸ್ ಹೊಂದಿದವರನ್ನು ಒಳಬಿಡಲಾಯಿತು. ಜನರಿಂದ ಕಿಕ್ಕಿರಿದು ತುಂಬಿದ್ದ ಹೋಟೆಲ್‌ಗಳಲ್ಲಿ ಸಂಗೀತದ ಅಬ್ಬರವೂ ಜೋರಾಗಿತ್ತು.
ಪಾರ್ಟಿಗಳಲ್ಲಿ ಪಾಲ್ಗೊಂಡವರಿಗಾಗಿ ಸಸ್ಯಾಹಾರ ಮತ್ತು ಮಾಂಸಾಹಾರದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಕೃಷಿಭೂಮಿಗಳಲ್ಲೂ ರಾತ್ರಿ ಪಾರ್ಟಿ ನಡೆದವು.
ಓಲ್ಡ್‌ಮ್ಯಾನ್ ಪ್ರತಿಕೃತಿ ದಹಿಸಿ ಸಂಭ್ರಮ
ಹೊಸ ವರ್ಷದ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ವೈವಿಧ್ಯಮಯ ವಿನ್ಯಾಸಗಳ ಓಲ್ಡ್‌ಮ್ಯಾನ್ ಪ್ರತಿಕೃತಿಗಳನ್ನು ಇರಿಸಲಾಗಿತ್ತು. ಬುಧವಾರ ಮಧ್ಯರಾತ್ರಿ 12 ಗಂಟೆಗೆ ಓಲ್ಡ್‌ಮ್ಯಾನ್ ದಹಿಸುತ್ತಿದ್ದಂತೆ, ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಮಕ್ಕಳು, ಯುವಕ–ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಸಂಭ್ರಮದಲ್ಲಿ ಭಾಗಿಯಾದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು.
ನಾರ್ವೇಕರ್ ಗಲ್ಲಿಯಲ್ಲಿ ಸಿದ್ಧಪಡಿಸಿದ ‘ಓಲ್ಡ್ ವುಮೆನ್’ ಕಲಾಕೃತಿ ಗಮನ ಸೆಳೆಯಿತು.
ನಗರದ ವಿವಿಧ ಬೇಕರಿಗಳಲ್ಲಿ ಕೇಕ್‌ಗಳು, ಸಿಹಿ ತಿನಿಸುಗಳ ಮಾರಾಟವೂ ಜೋರಾಗಿತ್ತು. ಬಹುತೇಕ ಹೋಟೆಲ್‌ಗಳಲ್ಲಿ ಗ್ರಾಹಕರ ದಟ್ಟಣೆ ಕಂಡುಬಂತು. ಮದ್ಯದ ಅಂಗಡಿಗಳ ಎದುರು ಜನರು ಗುಂಪಾಗಿ ಸೇರಿರುವುದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.