ಬೆಳಗಾವಿ: ಇಲ್ಲಿನ ವ್ಯಾಕ್ಸಿನ್ ಡಿಪೋ ಆವರಣದಲ್ಲಿ ಕೆಟ್ಟು ನಿಂತಿರುವ ಹಳೆಯ ಆಂಬುಲೆನ್ಸ್‌ಗಳು ದೂಳು ತಿನ್ನುತ್ತಿವೆ. ಕೆಲವು ವಾಹನಗಳ ಕಿಟಕಿ, ಬಾಗಿಲು ಮುರಿದಿದ್ದರೆ, ಹಲವು ವಾಹನಗಳು ತುಕ್ಕು ಹಿಡಿಯುತ್ತಿವೆ.
50 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಬೆಳಗಾವಿ ಜಿಲ್ಲೆಯಲ್ಲಿ ಜನರಿಗೆ ಈ ಆಂಬುಲೆನ್ಸ್‌ಗಳು ಉತ್ತಮ ಸೇವೆ ಒದಗಿಸಿದ್ದವು. ತ್ವರಿತವಾಗಿ ರೋಗಿಗಳು ಆಸ್ಪತ್ರೆ ಸೇರಲು ನೆರವಾಗಿದ್ದವು. ಇದರೊಂದಿಗೆ ಬೇರೆ ಐದು ವಾಹನಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬಳಸಲಾಗುತ್ತಿತ್ತು. ಆದರೆ, ‘15 ವರ್ಷ ಮೀರಿದ ವಾಹನ ಬಳಸುವಂತಿಲ್ಲ’ ಎಂಬ ಕೇಂದ್ರ ಸರ್ಕಾರದ ನಿಯಮದಿಂದಾಗಿ ಮೂಲೆ ಸೇರಿವೆ.
ಈ ವಾಹನಗಳು ಬಳಕೆಯಾಗದೆ ಇಲ್ಲಿಯೇ ನಿಂತಿರುವುದು ಇಂದು, ನಿನ್ನೆಯಿಂದಲ್ಲ. ಹಲವು ವರ್ಷಗಳಿಂದ ಅವು ಸ್ಥಳವನ್ನೇ ಬಿಟ್ಟು ಕದಲಿಲ್ಲ. ಒಂದಿಷ್ಟು ವಾಹನಗಳ ಸುತ್ತ ಹೇರಳವಾಗಿ ಗಿಡಗಂಟಿ ಬೆಳೆದಿವೆ. ಇಷ್ಟೊತ್ತಿಗೆ ಅವುಗಳನ್ನು ಗುಜರಿಗೆ ಹಾಕಬೇಕಿತ್ತು. ಸರ್ಕಾರಿ ನಿಯಮಾನುಸಾರ ಆಗಾಗ ಹರಾಜು ಪ್ರಕ್ರಿಯೆ ಕೈಗೊಳ್ಳಬೇಕಿತ್ತು. ಆದರೆ, ಅಧಿಕಾರಿಗಳು ಆ ಗೋಜಿಗೆ ಹೋಗಿಲ್ಲ.
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಒಳಗೊಂಡ ಆವರಣವು ಇಲ್ಲಿಗೆ ಬರುವವರಿಗೆ ಆರೋಗ್ಯದ ಮಹತ್ವ ಸಾರಬೇಕಿತ್ತು. ಆದರೆ, ಇಲ್ಲಿ ಎಲ್ಲೆಂದರಲ್ಲಿ ಕೆಟ್ಟುನಿಂತ ವಾಹನಗಳು ಅನಾರೋಗ್ಯ ಬಿಂಬಿಸುವಂತಿದ್ದು, ಅವ್ಯವಸ್ಥೆ ದರ್ಶನ ಮಾಡಿಸುತ್ತಿವೆ. ಹಲವು ವರ್ಷಗಳಿಂದ ಹರಾಜಾಗದ್ದರಿಂದ ವಾಹನಗಳಿಗೆ ವ್ಯಯಿಸಿದ ಹಣವೂ ವ್ಯರ್ಥವಾಗುತ್ತಿದೆ’ ಎಂದು ಜನರು ಆರೋಪಿಸುತ್ತಾರೆ.
ಆಸಕ್ತಿ ತೋರಲಿಲ್ಲ: ‘ಕೆಟ್ಟುನಿಂತ ವಾಹನಗಳನ್ನು ಹರಾಜು ಮಾಡಲು ಇತ್ತೀಚೆಗೆ ಜಿಲ್ಲಾಮಟ್ಟದಲ್ಲಿ ಪ್ರಕ್ರಿಯೆ ಕೈಗೊಂಡಿದ್ದೆವು. ಒಂದಿಬ್ಬರು ವಾಹನ ಪಡೆದಿದ್ದು ಬಿಟ್ಟರೆ, ಉಳಿದವರು ಆಸಕ್ತಿ ತೋರಲಿಲ್ಲ. ಈಗ ರಾಜ್ಯಮಟ್ಟದಲ್ಲೇ ಹರಾಜು ಪ್ರಕ್ರಿಯೆ ನಡೆಯಬೇಕಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಕೆಟ್ಟುನಿಂತ ವಾಹನಗಳನ್ನು ಶೀಘ್ರವೇ ಹರಾಜು ಮಾಡಲು ಕ್ರಮ ವಹಿಸಲಾಗುವುದು
-ಡಾ.ಮಹೇಶ ಕೋಣಿ ಜಿಲ್ಲಾ ಆರೋಗ್ಯಾಧಿಕಾರಿ ಬೆಳಗಾವಿ
ಅಂಕಿ–ಅಂಶಕೆಟ್ಟು ನಿಂತ ವಾಹನಗಳ ವಿವರ9ಆಂಬುಲೆನ್ಸ್‌ಗಳು1ಲಸಿಕೆ ವಾಹನ4 ಜೀಪುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.