
ಬೆಳಗಾವಿ: ನಗರದಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಾಣಕ್ಕೆ ಅನುಮತಿ ನಿರಾಕರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ತಮ್ಮ ಬೇಡಿಕೆ ಈಡೇರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಅವರಿಗೆ ಮನವಿ ಸಲ್ಲಿಸಿದರು.
‘ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾರಾಷ್ಟ್ರ ಸರ್ಕಾರ ಬಳಸಿಕೊಂಡು, ಕಳೆದ ಐದು ದಶಕಗಳಿಂದ ಗಡಿಭಾಗದಲ್ಲಿ ನಾಡವಿರೋಧಿ ಚಟುವಟಿಕೆ ಕೈಗೊಳ್ಳುತ್ತ ಬಂದಿದ್ದಾರೆ. ಈಗ ಮಹಾರಾಷ್ಟ್ರ ಗಡಿ ಭವನ ನಿರ್ಮಾಣದ ಹೆಸರಿನಲ್ಲಿ ವಿವಾದ ಸೃಷ್ಟಿಗೆ ಮುಂದಾಗಿದೆ’ ಎಂದು ದೂರಿದರು.
‘ಜನರ ಅನುಕೂಲಕ್ಕಾಗಿ ಒಂದು ರಾಜ್ಯ ಸರ್ಕಾರದವರು ಇನ್ನೊಂದು ರಾಜ್ಯದಲ್ಲಿ ಭವನ ನಿರ್ಮಿಸುತ್ತಾರೆ. ಕರ್ನಾಟಕ ಸರ್ಕಾರವೂ ದೆಹಲಿ, ಗೋವಾ ಮತ್ತಿತರ ರಾಜ್ಯಗಳಲ್ಲಿ ಕರ್ನಾಟಕ ಭವನ ನಿರ್ಮಿಸಿದೆ. ಆದರೆ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಗಡಿ ಭವನ ನಿರ್ಮಾಣದ ಹಿಂದೆ ಭಾಷಾ ವಿಷಬೀಜ ಬಿತ್ತುವ ದುರುದ್ದೇಶವಿದೆ. ಹಾಗಾಗಿ ಭವನ ನಿರ್ಮಾಣಕ್ಕೆ ಅನುಮತಿ ಕೊಡಬಾರದು’ ಎಂದು ಆಗ್ರಹಿಸಿದರು.
ಮುಖಂಡರಾದ ದಶರಥ ಬನೋಶಿ, ಸತೀಶ ಗುಡದವರ, ಭೂಪಾಲ ಅತ್ತು, ಜಯವಂತ ನಿಡಗಲಕರ, ಅರ್ಜುನ ಕಾಂಬಳೆ ಇತರರಿದ್ದರು.
‘ನರೇಗಾ ತಿದ್ದುಪಡಿ ಬೇಡ’ ಬೆಳಗಾವಿ: ಕೇಂದ್ರ ಸರ್ಕಾರವು ನರೇಗಾ ಕಾಯ್ದೆ ಬದಲಿಗೆ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆ ಜಾರಿ ಮಾಡುತ್ತಿರುವುದನ್ನು ವಿರೋಧಿಸಿ ಭಾರತೀಯ ಕೃಷಿಕ ಸಮಾಜ (ರೈತ ಸಂಘಟನೆ)ದವರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ರಾಣಿ ಚನ್ನಮ್ಮನ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ರವಾನಿಸಿದರು. ‘ವಿಬಿ–ಜಿ ರಾಮ್ ಜಿ ಮಸೂದೆಯು ರೈತರು ಕೃಷಿ ಕಾರ್ಮಿಕರು ಮತ್ತು ಬಡ ಕುಟುಂಬದವರ ಹಿತಾಸಕ್ತಿ ಕಸಿದುಕೊಳ್ಳಲಿದೆ. ಕಾರ್ಮಿಕ ವರ್ಗಕ್ಕೆ ಮಾರಕವಾದ ಈ ಕಾಯ್ದೆ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ಸಿದಗೌಡ ಮೋದಗಿ ಕವಿತಾ ಜಾರಕಿಹೊಳಿ ಸಂಜೀವ ಡೋಂಗರವಾಗಿ ಶಿವಾಜಿ ಕಾಗಣಿಕರ ಇತರರಿದ್ದರು.
ಆರ್‌ಸಿಯುನಲ್ಲಿ ಭ್ರಷ್ಟಾಚಾರ: ತನಿಖೆಯಾಗಲಿ ಬೆಳಗಾವಿ: ‘ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್(ಎಐಡಿಎಸ್‌ಒ) ಜಿಲ್ಲಾ ಸಂಚಾಲಕ ಮಹಾಂತೇಶ ಬಿಳೂರ ಆಗ್ರಹಿಸಿದ್ದಾರೆ. ‘ಆರ್‌ಸಿಯುನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ಆರೋಪ ಮಾಡಿದ್ದಾರೆ. ಅವರು ಮಾಡಿದ ಆರೋಪಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಮತ್ತು ಉನ್ನತ ಸ್ಥಾನದಲ್ಲಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ. ‘ವಿಶ್ವವಿದ್ಯಾಲಯದಲ್ಲಿ ಖರೀದಿ ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ ಇರಬೇಕು. ಭ್ರಷ್ಟಾಚಾರ ತೊಡೆದುಹಾಕಲು ಲೋಕಾಯುಕ್ತರು ಮತ್ತು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.