ಬೆಳಗಾವಿ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಪರಿಷತ್ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಮಾತನಾಡಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ‘ನಗರದ ಹಲವು ರಸ್ತೆಗಳಲ್ಲಿನ ಗುಂಡಿಗಳನ್ನು ತ್ವರಿತವಾಗಿ ಮುಚ್ಚದಿದ್ದರೆ ಮತ್ತು ಮಳೆಗಾಲದಲ್ಲಿ ಅಪಘಾತಗಳು ವರದಿಯಾದರೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಕೆ ಕೊಟ್ಟರು.
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು.
‘ಮಳೆ ನೀರಿನಿಂದ ತುಂಬಿರುವುದರಿಂದ ರಸ್ತೆಯಲ್ಲಿನ ಗುಂಡಿಗಳು ಸವಾರರಿಗೆ ಕಾಣುವುದಿಲ್ಲ. ಇದರಿಂದ ಅಪಘಾತ ಹೆಚ್ಚಿವೆ. ಮಳೆಗಾಲದಲ್ಲಿ ಸವಾರರ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ, ತ್ವರಿತವಾಗಿ ಆ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ಹೂಡುತ್ತೇವೆ. ಒಂದುವೇಳೆ ಪ್ರಕರಣ ದಾಖಲಿಸಲು ಜನರು ಮುಂದೆ ಬಾರದಿದ್ದರೆ, ಬಿಜೆಪಿ ಕಾರ್ಯಕರ್ತರೇ ದಾಖಲಿಸುತ್ತಾರೆ’ ಎಂದು ಹೇಳಿದರು.
‘ಬೆಳಗಾವಿ ನಗರದ ರಸ್ತೆಗಳ ಅಭಿವೃದ್ಧಿ ವಿಷಯವಾಗಿ ಪಾಲಿಕೆ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ’ ಎಂದು ಆರೋಪಿಸಿದ ಅವರು, ‘ಕಳೆದ ವರ್ಷ ಗಣೇಶೋತ್ಸವ ಮತ್ತು ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಸಚಿವರು, ಅಧಿಕಾರಿಗಳು ಸಂಚರಿಸುವ ಉತ್ತರ ಕ್ಷೇತ್ರದಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ದಕ್ಷಿಣ ಕ್ಷೇತ್ರದಲ್ಲಿ ಒಂದೆರಡು ರಸ್ತೆ ಬಿಟ್ಟು ಉಳಿದವುಗಳನ್ನು ನಿರ್ಲಕ್ಷಿಸಲಾಗಿದೆ’ ಎಂದು ದೂರಿದರು.
‘ವೇಗಾ ಹೆಲ್ಮೆಟ್ಸ್‌ನಿಂದ ₹7.54 ಕೋಟಿ ತೆರಿಗೆ ಬಾಕಿ ವಸೂಲಿಗೆ ಸಂಬಂಧಿಸಿ, ಈಗಾಗಲೇ ನೋಟಿಸು ಕಳುಹಿಸಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜೂನ್ 18ರಂದು ಗಡುವು ಮುಕ್ತಾಯಗೊಳ್ಳಲಿದ್ದು, ಅದರ ನಂತರ ಮುಂದಿನ ಕ್ರಮ ವಹಿಸುತ್ತೇವೆ’ ಎಂದು ಅಧಿಕಾರಿಗಳು ಹೇಳಿದರು.
ತೆರಿಗೆ ಪಾವತಿಗೆ ಸಮಯ ನೀಡುವ ವಿಷಯದ ಕುರಿತು ಚರ್ಚಿಸಿದ ನಂತರ, ಆ ಕಂಪನಿ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ನಿರ್ಣಯ ಕೈಗೊಳ್ಳಲಾಯಿತು.
ಉಪಮೇಯರ್ ವಾಣಿ ಜೋಶಿ, ಶಾಸಕ ಆಸಿಫ್ ಸೇಠ್, ಆಯುಕ್ತೆ ಬಿ.ಶುಭ ಹಾಗೂ ಸದಸ್ಯರೂ ಚರ್ಚೆಯಲ್ಲಿ ಪಾಲ್ಗೊಂಡರು.
ಎಲ್ ಅಂಡ್ ಟಿ ಕಂಪನಿ ಕಚೇರಿಗೇ ಬೀಗ
‘ಬೆಳಗಾವಿಯ ವಿವಿಧ ರಸ್ತೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಗುಂಡಿಗಳನ್ನು ಮಂಗಳವಾರದೊಳಗೆ(ಜೂನ್ 24) ಮುಚ್ಚದಿದ್ದರೆ, ಎಲ್ ಅಂಡ್ ಟಿ ಕಂಪನಿ ಕಚೇರಿಗೆ ಬೀಗ ಹಾಕಲಾಗುವುದು’ ಎಂದು ಅಭಯ ಪಾಟೀಲ ಎಚ್ಚರಿಕೆ ನೀಡಿದರು.
‘ಪೈಪ್‌ಲೈನ್‌ಗಾಗಿ ಅಗೆದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಈ ಹಿಂದೆ ನಡೆದ ಐದಾರು ಸಭೆಗಳಲ್ಲೂ ಈ ಸಂಬಂಧ ನಿರ್ದೇಶನ ಕೊಟ್ಟಿದ್ದರೂ, ಕಳೆದೆರಡು ವರ್ಷಗಳಿಂದ ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಎಲ್ ಅಂಡ್ ಟಿ ಕಂಪನಿಯವರ ನಿರ್ಲಕ್ಷ್ಯದಿಂದ ಜನರು ಬೇಸತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ಕಂಪನಿ ಸಿಬ್ಬಂದಿಯನ್ನು ಜನರು ಹೊಡೆಯಬಹುದು’ ಎಂದು ಎಚ್ಚರಿಸಿದರು.
‘ಮಳೆಗಾಲದಲ್ಲಿ ರಸ್ತೆಗಳು ಹಾನಿಗೆ ಒಳಗಾದರೆ ಜನರಿಗೆ ಅನಾನುಕೂಲತೆ ಉಂಟಾಗುತ್ತದೆ. ಹಾಗಾಗಿ ಗಣೇಶೋತ್ಸವ ಮುಗಿಯುವವರೆಗೆ ಹೊಸ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಬಾರದು’ ಎಂದು ಸೂಚನೆ ನೀಡಿದರು.
ನಿಯಮ ಉಲ್ಲಂಘನೆ: ಆರೋಪ
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 120 ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ’ ಎಂದು ಸದಸ್ಯರು ಆರೋಪಿಸಿದರು.
‘ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾಯಿಸಬೇಕಿತ್ತು. ಆದರೆ, ಗರಿಷ್ಠ ಬೆಲೆಗಿಂತ, ಹೆಚ್ಚಿನ ಬೆಲೆಗೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲಾಗಿದೆ’ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪ ಆಯುಕ್ತ(ಆಡಳಿತ) ಉದಯಕುಮಾರ ತಳವಾರ, ‘ಮೇಯರ್ ಕೊಠಡಿಯಲ್ಲಿ ಸದಸ್ಯರೊಂದಿಗೆ ಚರ್ಚಿಸಿದಂತೆಯೇ ಲ್ಯಾಪ್‌ಟಾಪ್ ಖರೀದಿಸಲಾಗಿದೆ’ ಎಂದು ಉತ್ತರಿಸಿದರು.
ಆದರೆ, ಖರೀದಿಯಲ್ಲಿ ಮಾರ್ಗಸೂಚಿ ಪಾಲಿಸಲಾಗಿದೆಯೇ ಅಥವಾ ನಿಯಮ ಉಲ್ಲಂಘಿಸಲಾಗಿದೆಯೇ ಎಂದು ತಿಳಿಯಲು ಸದಸ್ಯರು ಪ್ರಯತ್ನಿಸಿದರು.
ಈ ವಿಚಾರವಾಗಿ ವಿಸ್ತೃತವಾಗಿ ಚರ್ಚಿಸಿದ ನಂತರ ಅಭಯ ಪಾಟೀಲ ಮಾತನಾಡಿ, ‘ಲ್ಯಾಪ್‌ಟಾಪ್ ಖರೀದಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಬೇಕು. ಜತೆಗೆ, ಈ ವಿಷಯವಾಗಿ ತನಿಖೆ ನಡೆಸಬೇಕು’ ಎಂದರು.
ಕಾನೂನು ಅಧಿಕಾರಿಗಳ ವಿರುದ್ಧ ಆಕ್ರೋಶ
‘ಟಿಳಕವಾಡಿಯ ರಿಕ್ರಿಯೇಶನ್ ಕ್ಲಬ್‌ಗೆ ಗುತ್ತಿಗೆ ನೀಡಿದ ಭೂಮಿ ಮರಳಿ ಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ. ಬಾಡಿಗೆ ಪಾವತಿಸದೆ ಗುತ್ತಿಗೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ಹಿನ್ನಡೆ ಅನುಭವಿಸುತ್ತಿದೆ’ ಎಂದು ಸದಸ್ಯರು ಆಪಾದಿಸಿದರು.
ಪಾಲಿಕೆಯ ಕಾನೂನು ವಿಭಾಗ, ಅದರಲ್ಲೂ ಕಾನೂನು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.