ಬೆಳಗಾವಿ: ಜಿಲ್ಲೆಯ ವಿವಿಧೆಡೆ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸುವ ಶಾವಿಗೆಗೆ ‘ಬೆಳಗಾವಿ ಸಂಜೀವಿನಿ ಶಾವಿಗೆ’ ಹೆಸರಿನಲ್ಲಿ ಮಾರುಕಟ್ಟೆ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.
ಜಿಲ್ಲೆಯಲ್ಲಿ 26 ಸಾವಿರ ಮಹಿಳಾ ಸ್ವಸಹಾಯ ಸಂಘಗಳಿವೆ. ಬೆಳಗಾವಿ, ಬೈಲಹೊಂಗಲ, ಕಾಗವಾಡ, ಅಥಣಿ, ಚಿಕ್ಕೋಡಿ, ಸವದತ್ತಿ, ರಾಮದುರ್ಗ ತಾಲ್ಲೂಕುಗಳ 204 ಸಂಘಗಳ ಸದಸ್ಯೆಯರು ಶಾವಿಗೆ ತಯಾರಿಸುತ್ತಾರೆ. ಅದರಲ್ಲೂ ಬೆಳಗಾವಿ ತಾಲ್ಲೂಕಿನ ಸಾಂಬ್ರಾ, ಶಿಂಧೊಳ್ಳಿ, ಮುತಗಾದಲ್ಲಿ ಹೆಚ್ಚಿದ್ದಾರೆ. ಶಾವಿಗೆಯನ್ನು ಸ್ಥಳೀಯವಾಗಿಯೇ ಮಾರಲಾಗುತ್ತದೆ. ವಿವಿಧ ಸಂತೆಗಳಲ್ಲೂ ಮಾರಾಟಕ್ಕೆ ಲಭ್ಯವಿದೆ.
ಹಲವು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿದ್ದರೂ, ಅವರಿಗೆ ವ್ಯವಸ್ಥಿತ, ಸೂಕ್ತ ಮಾರುಕಟ್ಟೆ ಇಲ್ಲ. ತಯಾರಾದ ಶಾವಿಗೆ ಸಾಗಣೆಗೆ ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಶಾವಿಗೆ ಮುರಿದು ಹಾಳಾಗುತ್ತಿತ್ತು.
ಇದನ್ನು ಮನಗಂಡ ಜಿಲ್ಲಾ ಪಂಚಾಯಿತಿ ಈಗ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಶಾವಿಗೆಗೆ ಮಾರುಕಟ್ಟೆ, ಇತರೆ ಸೌಲಭ್ಯ ಕಲ್ಪಿಸುವ ಮೂಲಕ ಕಾಯಕಲ್ಪ ನೀಡಲು ಮುಂದಾಗಿದೆ.
ಮೊದಲ ಹಂತದಲ್ಲಿ ಬೆಳಗಾವಿ ತಾಲ್ಲೂಕಿನಲ್ಲಿ ಸಿದ್ಧವಾದ ಶಾವಿಗೆಯನ್ನು ಪ್ಯಾಕಿಂಗ್ ಮಾಡಲು 7 ಸಾವಿರ ಬಾಕ್ಸ್‌ಗಳನ್ನು ಮಹಿಳಾ ಸ್ವಸಹಾಯ ಸಂಘದವರಿಗೆ ನೀಡಿದೆ. ಇದರಲ್ಲಿ ಅರ್ಧ ಕೆ.ಜಿ ತೂಕದ ಶಾವಿಗೆ ಹಾಕಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇರುವ ‘ಅಕ್ಕ’ ಕೆಫೆಗಳು, ಸಂಜೀವಿನಿ ಮಾರಾಟ ಮಳಿಗೆಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಹಾಗೂ ಸರ್ಕಾರಿ ಕಟ್ಟಡಗಳಲ್ಲಿನ ಮಾರಾಟ ಮಳಿಗೆಗಳಲ್ಲಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಿದೆ.
‘ಮಹಿಳಾ ಸ್ವಸಹಾಯ ಸಂಘಗಳು ರುಚಿಯಾದ ಶಾವಿಗೆ ತಯಾರಿಸಿದರೂ, ಮಾರುಕಟ್ಟೆ ಕೊರತೆಯಿಂದ ಹೆಚ್ಚಿನ ದರ ಸಿಗುತ್ತಿರಲಿಲ್ಲ. ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲಹೆ ಆಧರಿಸಿ ಹೊಸ ಯೋಜನೆ ರೂಪಿಸಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿಯ ಕೌಶಲ ಮತ್ತು ಉದ್ಯಮಶೀಲತೆ ವಿಭಾಗದ ಜಿಲ್ಲಾ ವ್ಯವಸ್ಥಾಪಕ ಕಿರಣ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಾವಿಗೆಯನ್ನು ಸ್ಥಳೀಯವಾಗಿ ಖರೀದಿಸುವರು ಅಮೆರಿಕ, ಲಂಡನ್, ಕೆನಡಾ ಸೇರಿ ವಿದೇಶಘಳ ಸಂಬಂಧಿಕರಿಗೆ ಕಳುಹಿಸುತ್ತಾರೆ ಎಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯೊಬ್ಬರು ತಿಳಿಸಿದರು.
ಮಹಿಳಾ ಸಬಲೀಕರಣ ಮತ್ತು ಸ್ಥಳೀಯವಾಗಿ ಸಿದ್ಧವಾಗುವ ಶಾವಿಗೆಗೆ ಮಾರುಕಟ್ಟೆ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಬ್ರ್ಯಾಂಡಿಂಗ್ ಮಾಡುತ್ತಿದ್ದೇವೆರಾಹುಲ್ ಶಿಂಧೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ
ಬೆಳಗಾವಿ ಸಂಜೀವಿನಿ ಶಾವಿಗೆ ಹೆಸರಿನಲ್ಲಿ ಬ್ರ್ಯಾಂಡಿಂಗ್ ಮಾಡಿರುವುದರಿಂದ ಅನುಕೂಲಕರ. ಮಾರಾಟ ಪ್ರಮಾಣವೂ ಹೆಚ್ಚುವ ನಿರೀಕ್ಷೆ ಇದೆಗೀತಾ ಚೌಗುಲೆ ಸದಸ್ಯೆ ಜನನಿ ಸ್ವಸಹಾಯ ಸಂಘ ಬೆಳಗಾವಿ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.