ADVERTISEMENT

ಬೆಳಗಾವಿ| ಶಟರ್‌ ಮುರಿದು ಅಂಗಡಿ ಕಳವು: ಕಳ್ಳತನ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 3:11 IST
Last Updated 28 ನವೆಂಬರ್ 2025, 3:11 IST
ಬೆಳಗಾವಿಯ ಪಾಂಗೂಳ ಗಲ್ಲಿಯಲ್ಲಿ ಬುಧವಾರ ತಡರಾತ್ರಿ ಕಳವಾದ ಅಂಗಡಿಗಳಲ್ಲಿ ಪೊಲೀಸರು ಬುಧವಾರ ಪರಿಶೀಲಿಸಿದರು
ಬೆಳಗಾವಿಯ ಪಾಂಗೂಳ ಗಲ್ಲಿಯಲ್ಲಿ ಬುಧವಾರ ತಡರಾತ್ರಿ ಕಳವಾದ ಅಂಗಡಿಗಳಲ್ಲಿ ಪೊಲೀಸರು ಬುಧವಾರ ಪರಿಶೀಲಿಸಿದರು   

ಬೆಳಗಾವಿ: ಇಲ್ಲಿನ ಪಾಂಗುಳ ಗಲ್ಲಿಯಲ್ಲಿ ಬುಧವಾರ ತಡರಾತ್ರಿ ಅಂಗಡಿಗಳ ಶಟರ್‌ ಮುರಿದು ₹26 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. 

ಒಂದು ಅಂಗಡಿ ಶಟರ್‌ ಮುರಿದು ಒಳ ನುಗ್ಗಿದ ಕಳ್ಳರು ₹10 ಸಾವಿರ ನಗದು, ₹12 ಸಾವಿರ ಬೆಲೆಬಾಳು ಬೆಳ್ಳಿ ಸಾಮಗ್ರಿಗಳನ್ನು ಕದ್ದಿದ್ದಾರೆ. ಇನ್ನೊಂದು ಅಂಗಡಿಯಲ್ಲಿ ಶಟರ್‌ ಮುರಿಯಲಾಗದೇ ಕೀಲಿ ಮುರಿದ ಒಳಗಿದ್ದ ₹4 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಆರ್ಯನ್ ಅಂಗಡಿ ಮಾಲೀಕ ಪುಖರಾಜ್ ದೇವಸಿ, ಹಿಂದೂಸ್ತಾನ ಟ್ರೇಡಿಂಗ್ ಅಂಗಡಿ ಮಾಲೀಕ ಪರಶುರಾಮ ತೇರದಾಳ ಎಂಬುವರ ಅಂಗಡಿಗಳು ಕಳ್ಳತನವಾಗಿವೆ. ಇವರು ಬುಧವಾರ ಸಂಜೆ ವ್ಯಾಪಾರ ನಡೆಸಿ, ಅಂಗಡಿಗಳ ಶಟರ್ ಹಾಕಿಕೊಂಡು ಹೋಗಿದ್ದರು.

ADVERTISEMENT

ಆರ್ಯನ್ ಅವರ ಅಂಡಿಯಲ್ಲಿನ ₹10 ಸಾವಿರ ನಗದು ಹಾಗೂ ₹12 ಸಾವಿರ ಮೊತ್ತದ 100 ಗ್ರಾಂ ತೂಕದ ಬೆಳ್ಳಿ ಚಾಳ್‌ ಕಳವಾಗಿವೆ. ಹಿಂದೂಸ್ತಾನ ಟ್ರೇಡಿಂಗ್ ಅಂಗಡಿಯಲ್ಲಿನ ₹4 ಸಾವಿರ ನಗದನ್ನು ದೋಚಲಾಗಿದೆ.

ಕಳವು ಮಾಡುತ್ತಿರುವ ದೃಶ್ಯಗಳು ಅಂಗಡಿಗಳ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬುಧವಾರ ಬೆಳಿಗ್ಗೆ ಮಾಲೀಕರು ಅಂಗಡಿ ಬಳಿ ಬಂದಾಗಲೇ ಕಳವಾಗಿದ್ದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ತನಿಖೆ ಕೈಗೊಂಡಿದ್ದಾರೆ.

ಮಾದಕವಸ್ತು ಮಾರಾಟ–ಬಂಧನ: ಇಲ್ಲಿನ ಗೂಡ್ಸ್‌ಶೆಡ್‌ ರಸ್ತೆಯಲ್ಲಿ ಬುಧವಾರ ಮಾದಕವಸ್ತು ಮಾರುತ್ತಿದ್ದ ಉಜ್ವಲ ನಗರದ ಮಹಮ್ಮದ್‌ಶಾಹೀದ್‌ ಮುಲ್ಲಾ ಎಂಬಾತನನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹15,800 ಮೌಲ್ಯದ 7.56 ಗ್ರಾಂ ಹೆರಾಯಿನ್‌ ಪೌಡರ್‌, ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಆರೋಪಿಗೆ ಮುಂಬೈ ಮೂಲದ ಸಂತೋಷ ಎಂಬಾತ ಹೆರಾಯಿನ್‌ ಪೂರೈಕೆ ಮಾಡುತ್ತಿದ್ದ ಎಂಬುದು ವಿಚಾರಣೆಯಲ್ಲಿ ಬಹಿರಂಗಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿಯ ಪಾಂಗೂಳ ಗಲ್ಲಿಯಲ್ಲಿ ಬುಧವಾರ ತಡರಾತ್ರಿ ಕಳವಾದ ಅಂಗಡಿಗಳನ್ನು ಶ್ವಾನ ದಳ ಸಿಬ್ಬಂದಿ ಪರಿಶೀಲಿಸಿದರು

ಚೆಕ್‌ ಅಮಾನ್ಯ: ಜೈಲು ಶಿಕ್ಷೆ

ಗೋಕಾಕ: ಚೆಕ್‌ ಅಮಾನ್ಯಗೊಂಡ ಕಾರಣ ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಚೆಕ್‌ ಮೊತ್ತವನ್ನು(₹178650) ದಂಡದ ರೂಪದಲ್ಲಿ ಸೊಸೈಟಿಗೆ ಪಾವತಿಸುವಂತೆ ಇಲ್ಲಿನ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ. ಆಸಿಫ್‌ ಮೊಹಮ್ಮದ್‌ಹನೀಫ್‌ ಮಿರ್ಜಾನಾಯಿಕ ಶಿಕ್ಷೆಗೆ ಒಳಗಾದವ. ಈತ ಹೊಸಪೇಟೆ ಮೂಲದ ನವ ಕರ್ನಾಟಕ ಸೌಹಾರ್ದ ಸಹಕಾರ ಸಂಘದ ಸ್ಥಳೀಯ ಶಾಖೆಯಿಂದ ಸಾಲ ಪಡೆದಿದ್ದ. ಜತೆಗೆ ಕೆಲವರ ಸಾಲದ ವ್ಯವಹಾರಕ್ಕೆ ಜಾಮೀನುದಾರನಾಗಿದ್ದ. ತಾನು ಹಾಗೂ ಜಾಮೀನುದಾರರು ಪಡೆದ ಸಾಲಕ್ಕೆ ಸಂಬಂಧಿಸಿ 2021ರ ಜೂ.30ರಂದು ₹178650 ಮೊತ್ತದ ಚೆಕ್‌ ಅನ್ನು ಸೊಸೈಟಿಗೆ ನೀಡಿದ್ದ. ಅದು ಅಮಾನ್ಯಗೊಂಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಚೈತ್ರಾ ಕುಲಕರ್ಣಿ ಅವರು ಈ ತೀರ್ಪು ಪ್ರಕಟಿಸಿದ್ದಾರೆ. ಸೊಸೈಟಿ ಪರವಾಗಿ ವಕೀಲ ರಾಮೇ‍ಶ್ವರ ಕಲ್ಯಾಣಶೆಟ್ಟಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.