ADVERTISEMENT

ಬೆಳಗಾವಿ: ಸರ್ಕಾರಿ ಶಾಲೆ ಮಕ್ಕಳಿಗೆ ಬಾಕ್ಸ್‌ ಕ್ರಿಕೆಟ್‌ ಮೈದಾನ

ಪಾಳುಬಿದ್ದಿದ್ದ ಬಾಲಭವನಕ್ಕೆ ಹೊಸ ಸ್ಪರ್ಶ: ₹35 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ವ್ಯವಸ್ಥೆ

ಸಂತೋಷ ಈ.ಚಿನಗುಡಿ
Published 9 ಫೆಬ್ರುವರಿ 2026, 5:53 IST
Last Updated 9 ಫೆಬ್ರುವರಿ 2026, 5:53 IST
ಬೆಳಗಾವಿಯಲ್ಲಿ ಸರ್ಕಾರಿ ಶಾಲೆ ಮಕ್ಕಳಿಗಾಗಿ ನಿರ್ಮಿಸಿದ ಬಾಕ್ಸ್‌ ಕ್ರಿಕೆಟ್‌ ಮೈದಾನ  ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ಸರ್ಕಾರಿ ಶಾಲೆ ಮಕ್ಕಳಿಗಾಗಿ ನಿರ್ಮಿಸಿದ ಬಾಕ್ಸ್‌ ಕ್ರಿಕೆಟ್‌ ಮೈದಾನ  ಪ್ರಜಾವಾಣಿ ಚಿತ್ರ   

ಬೆಳಗಾವಿ: ಇಲ್ಲಿನ ಶ್ರೀನಗರದಲ್ಲಿ ಹಲವು ವರ್ಷಗಳಿಂದ ಪಾಳು ಬಿದ್ದಿದ್ದ ಬಾಲ ಭವನ ಕಟ್ಟಡ ಈಗ ಮಕ್ಕಳ ಆಕರ್ಷಣೆ ಕೇಂದ್ರವಾಗಿದೆ. ಇಲ್ಲಿ ಬಾಕ್ಸ್‌ ಕ್ರಿಕೆಟ್‌ ಮೈದಾನ ನಿರ್ಮಿಸಿ, ಸರ್ಕಾರಿ ಶಾಲೆಯ ಪ್ರತಿಭೆಗಳಿಗೆ ಹೊಸ ಅವಕಾಶ ಕಲ್ಪಿಸಲಾಗಿದೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಶಾಸಕ ಆಸಿಫ್‌ ಸೇಠ್‌ ಅವರು ಶುಕ್ರವಾರ ಕ್ರಿಕೆಟ್‌ ಆಡುವ ಮೂಲಕ ಈ ಮೈದಾನ ಉದ್ಘಾಟಿಸಿದರು.

1997ರಲ್ಲಿ ಎರಡು ಎಕರೆಯಲ್ಲಿ ನಿರ್ಮಿಸಿದ ಬಾಲ ಭವನ ಪಾಳು ಬಿದ್ದಿರುವುದು ಕಂಡು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರು ಸರ್ಕಾರಿ ಶಾಲೆ ಮಕ್ಕಳಿಗಾಗಿ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿಪಡಿಸಲು ಮುಂದಾದರು.

ADVERTISEMENT

‘₹35 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಾಕ್ಸ್‌ ಕ್ರಿಕೆಟ್‌ ಮೈದಾನ ನಿರ್ಮಿಸಲಾಗಿದೆ. ಇದಕ್ಕೆ ಬಾಲ ಭವನದ ₹20 ಲಕ್ಷ ಮತ್ತು ಶಾಸಕರ ಅನುದಾನದ ₹15 ಲಕ್ಷ ಬಳಸಲಾಗಿದೆ. ಸರ್ಕಾರಿ ಶಾಲೆ ಮಕ್ಕಳಿಗಾಗಿ ರಾಜ್ಯದಲ್ಲಿ ಬೇರೆ ಎಲ್ಲೂ ಇಂಥ ವಿಶೇಷ ಮೈದಾನ ನಿರ್ಮಿಸಿಲ್ಲ’ ಎಂದು ರಾಹುಲ್‌ ಶಿಂಧೆ ಮಾಹಿತಿ ನೀಡಿದರು.

ಇಲ್ಲಿ ಕನಿಷ್ಠ 25 ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನೀಡುವ ಉದ್ದೇಶವಿದ್ದು, ಐವರು ಅಂಗವಿಕಲರಿಗೆ ಅವಕಾಶವಿದೆ. ಮುಂದಿನ ದಿನಗಳಲ್ಲಿ 10 ಖಾಸಗಿ ಶಾಲೆ ಮಕ್ಕಳಿಗೂ ಅವಕಾಶ ನೀಡಲಾಗುವುದು. ಅವರು ನಿಗದಿತ ಶುಲ್ಕ ಭರಿಸಬೇಕು. ಉಚಿತ ಊಟ ಹಾಗೂ ಹಾಸ್ಟೆಲ್‌ ವ್ಯವಸ್ಥೆಯಿದೆ. ಆನಂದ ಅಕಾಡೆಮಿ ಎಂಬ ಕ್ರಿಕೆಟ್‌ ಸಂಸ್ಥೆಯ ಜತೆಗೆ ಒಡಂಬಡಿಕೆ ಆಗಿದೆ. ರಣಜಿ ಅನುಭವಿ ಆಟಗಾರರು ತರಬೇತಿ ನೀಡುವರು.

ಗುಣಮಟ್ಟದ ನೆಲಹಾಸು, ನೆಟ್‌, ಚೆಂಡು ಎಸೆಯುವ ಯಂತ್ರಗಳು, ನೆರಳು– ಬೆಳಕಿನ ವ್ಯವಸ್ಥೆ, ಮಕ್ಕಳ ಸುರಕ್ಷತಾ ಸಲಕರಣೆ, ಆಡಲು ಬೇಕಾದ ಸೌಕರ್ಯಗಳಿವೆ. ಜಿಲ್ಲಾ ಬಾಲಭವನ ಸಮಿತಿ ಇದನ್ನು ನಿರ್ವಹಿಸಲಿದೆ.

ಸತೀಶ ಜಾರಕಿಹೊಳಿ
ಲಕ್ಷ್ಮೀ ಹೆಬ್ಬಾಳಕರ
ರಾಹುಲ್‌ ಶಿಂಧೆ
ಜಿಲ್ಲೆಯಲ್ಲಿರುವ ಕ್ರಿಕೆಟ್‌ ಪ್ರತಿಭೆಗಳಿಗೆ ಇದೊಂದು ಒಳ್ಳೆಯ ಅವಕಾಶ. ಗ್ರಾಮೀಣ ಮಕ್ಕಳಿಗೆ ಇದು ಅಗತ್ಯವಾಗಿತ್ತು. ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು.
ಸತೀಶ ಜಾರಕಿಹೊಳಿ ಸಚಿವ ಲೋಕೋಪಯೋಗಿ ಇಲಾಖೆ
ಜಿಲ್ಲೆಯ ಮಕ್ಕಳೂ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಮೈದಾನ ನಿರ್ಮಿಸಲಾಗಿದೆ
ಲಕ್ಷ್ಮೀ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರತಿಭೆಗಳಿವೆ. ಕ್ರಿಕೆಟ್‌ ಮೈದಾನಗಳ ಕೊರತೆ ಇದೆ. ಅದನ್ನು ನೀಗಿಸುವುದು ಇದರ
ಉದ್ದೇಶ ರಾಹುಲ್‌ ಶಿಂಧೆ ಸಿಇಒ ಜಿಲ್ಲಾ ಪಂಚಾಯಿತಿ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.