ADVERTISEMENT

ಬೆಳಗಾವಿ: CETಯಲ್ಲಿ ಸಾಧನೆಗೈದ ಸರ್ಕಾರಿ PU ಕಾಲೇಜುಗಳ ವಿದ್ಯಾರ್ಥಿಗಳಿಗೆ ಸನ್ಮಾನ

ಸಾಧನೆಗೆ ಇಬ್ಬರಲ್ಲೂ ಇಚ್ಛಾಶಕ್ತಿ ಇರಲಿ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 27 ಮೇ 2025, 10:26 IST
Last Updated 27 ಮೇ 2025, 10:26 IST
<div class="paragraphs"><p>ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸಚಿವ ಸತೀಶ ಜಾರಕಿಹೊಳಿ ಸತ್ಕರಿಸಿದರು</p></div>

ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸಚಿವ ಸತೀಶ ಜಾರಕಿಹೊಳಿ ಸತ್ಕರಿಸಿದರು

   

ಬೆಳಗಾವಿ: ‘ಕಲಿಯುವ ಮತ್ತು ಕಲಿಸುವ ಇಬ್ಬರಲ್ಲೂ ಇಚ್ಛಾಶಕ್ತಿ ಇದ್ದರಷ್ಟೇ ಸಾಧನೆ ಮಾಡಬಹುದು. ಈ ದಿಸೆಯಲ್ಲಿ ಉಪನ್ಯಾಸಕರು ಮತ್ತು ಶಿಕ್ಷಕರು ಹೆಜ್ಜೆ ಇರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಇಟಿ–ಸಕ್ಷಮ್‌ ನೆರವಿನಿಂದ ಕೆ–ಸಿಇಟಿಯಲ್ಲಿ ಸಾಧನೆಗೈದ ಜಿಲ್ಲೆಯ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ADVERTISEMENT

‘ಮೂಲಸೌಕರ್ಯ ಹೆಚ್ಚಿರುವ ಕಾರಣಕ್ಕೆ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಸಿಇಟಿಯಲ್ಲಿ ಸಾಧನೆ ಮೆರೆಯುತ್ತಾರೆ. ಆದರೆ, ಜಿಲ್ಲಾ ಪಂಚಾಯಿತಿ ಮತ್ತು ‍ಪದವಿಪೂರ್ವ ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿದ ಸಿಇಟಿ–ಸಕ್ಷಮ್‌ ಯೋಜನೆ ನೆರವಿನಿಂದ ಬೆಳಗಾವಿಯಲ್ಲಿ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಸಾಧನೆಗೈದಿದ್ದು ಸಂತಸದ ವಿಚಾರ. ಸಾಧಕ ವಿದ್ಯಾರ್ಥಿಗಳು ಪ್ರಾಮಾಣಿಕತೆ ಬೆಳೆಸಿಕೊಂಡು ಮುನ್ನಡೆಯಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು’ ಎಂದರು.

‘ಈ ಬಾರಿ ಬೈಲಹೊಂಗಲ ಮತ್ತು ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಕೆ–ಸಿಇಟಿಯಲ್ಲಿ ಇಡೀ ರಾಜ್ಯದ ಗಮನಸೆಳೆಯುವಂತೆ ಸಾಧನೆ ಮಾಡಿದ್ದಾರೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಇಂಥ ಒಂದೊಂದು ಕಾಲೇಜು ಬೆಳೆಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯ ಎಲ್ಲ ಸರ್ಕಾರಿ ಕಾಲೇಜುಗಳು ಶಿಕ್ಷಣ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು. ಅಗತ್ಯ ಮೂಲಸೌಕರ್ಯ ಒದಗಿಸಿ, ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.  

‘ಬೆಳಗಾವಿಯ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆ, ಪಿಯು ಕಾಲೇಜುಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ ₹10 ಕೋಟಿ ನೀಡಲಾಗುವುದು’ ಎಂದರು.

‘ಯಮಕನಮರಡಿ ಕ್ಷೇತ್ರದಲ್ಲಿ 100ಕ್ಕೂ ಅಧಿಕ ಶಾಲೆಗಳ ಕಟ್ಟಡ ನಿರ್ಮಾಣವಾಗಿವೆ. ಇನ್ನೂ 50 ಕಟ್ಟಡ ನಿರ್ಮಾಣವಾದರೆ, ಮುಂದಿನ 30 ವರ್ಷ ತೊಂದರೆ ಇಲ್ಲ. ಯಾವುದೇ ಶಾಲೆಯಲ್ಲಿ ಒಂದೇ ಮಗು ಇದ್ದರೂ, ಪಾಠ ಮಾಡಲು ಒಬ್ಬ ಶಿಕ್ಷಕ ಇರಬೇಕು. ಆಗ ಶಿಕ್ಷಣದ ಆಶಯ ಈಡೇರುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಆಸಿಫ್‌ ಸೇಠ್‌, ‘ವಿದ್ಯಾರ್ಥಿಗಳು ಸತತ ಪರಿಶ್ರಮ, ಶಿಸ್ತುಬದ್ಧ ಅಧ್ಯಯನದ ಮೂಲಕ ಶೈಕ್ಷಣಿಕವಾಗಿ ಸಾಧನೆ ಮಾಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಾಸಕರಾದ ದುರ್ಯೋಧನ ಐಹೊಳೆ, ಬಾಬಾಸಾಹೇಬ ಪಾಟೀಲ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌, ಬೆಳಗಾವಿ ಡಿಡಿಪಿಯು ಎಂ.ಎಂ.ಕಾಂಬಳೆ, ಚಿಕ್ಕೋಡಿ ಡಿಡಿಪಿಯು ಪಿ.ಐ.ಭಂಡಾರೆ ಇತರರಿದ್ದರು.

––––––––––

ಉತ್ತಮ ಫಲ ಸಿಕ್ಕಿದೆ: ಸಿಇಒ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ, ‘ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಗ್ರಾಮೀಣ ಪ್ರದೇಶದ ಮತ್ತು ಬಡ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಅನುಷ್ಠಾನಗೊಳಿಸಿದ ‘ಸಿಇಟಿ–ಸಕ್ಷಮ್‌’ ಯೋಜನೆಗೆ ಉತ್ತಮ ಫಲ ಸಿಕ್ಕಿದೆ. ಕಳೆದ ವರ್ಷದ ಸಿಇಟಿಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳು 50 ಸಾವಿರ ರ್‍ಯಾಂಕ್‌ನೊಳಗೆ ಸ್ಥಾನ ಪಡೆದಿದ್ದರು. ಈ ಬಾರಿ ಆ ಸಂಖ್ಯೆ 18ಕ್ಕೆ ಏರಿದೆ. ಕಳೆದ ಸಲ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 26 ವಿದ್ಯಾರ್ಥಿಗಳು 50 ಸಾವಿರ ರ್‍ಯಾಂಕ್‌ನೊಳಗೆ ಸ್ಥಾನ ಪಡೆದಿದ್ದರೆ, ಈ ಬಾರಿ 43 ವಿದ್ಯಾರ್ಥಿಗಳು ಪಡೆದಿದ್ದಾರೆ. 50,001ರಿಂದ 1 ಲಕ್ಷ ರ್‍ಯಾಂಕ್‌ನೊಳಗೆ 156 ವಿದ್ಯಾರ್ಥಿಗಳು ಸ್ಥಾನ ಗಿಟ್ಟಿಸಿದ್ದಾರೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.