
ಕಳೆದ ಆರು ದಿನಗಳಿಂದ ಸಚಿವ, ಶಾಸಕರ ವಾಹನಗಳ ಓಡಾಟ, ಸಂಘಟನೆಗಳ ಪ್ರತಿಭಟನೆ, ಜನಜಂಗುಳಿಯಿಂದ ತುಂಬಿಹೋಗಿದ್ದ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣ, ಶನಿವಾರ ಕಲಾಪಗಳಿಗೆ ರಜೆ ಇದ್ದ ಕಾರಣ ಬಿಕೋ ಎಂದಿತು
ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ಮಂತ್ರಿಗಳ ಓಡಾಟ, ಶಾಸಕರ ಆಡಂಬರ, ಅಧಿಕಾರಿಗಳ ಗಡಿಬಿಡಿ, ಸಂಘಟನೆಗಳ ಪ್ರತಿಭಟನೆ... ಹೀಗೆ ಯಾವಾಗಲೂ ಜನಜಂಗುಳಿಯಿಂದ ತುಂಬಿಹೋಗಿದ್ದ ಇಲ್ಲಿನ ಸುವರ್ಣ ವಿಧಾನಸೌಧ ಶನಿವಾರ ಹಾಗೂ ಭಾನುವಾರ ದಿಕ್ಕೇ ಇಲ್ಲದಂತೆ ಬಿಕೋ ಎಂದಿತು.
ಡಿ.8ರಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅದಕ್ಕೂ ಒಂದು ವಾರ ಮುಂಚಿನಿಂದಲೂ ಸೌಧದ ಸುತ್ತ ಚಟುವಟಿಕೆಗಳು ಆರಂಭವಾಗಿದ್ದವು. ಅಧಿವೇಶನ ಮುಗಿದ ಬಳಿಕ ಒಂದು ವಾರ ಮತ್ತೂ ಓಡಾಟ ಇದ್ದೇ ಇರುತ್ತದೆ. ಆದರೆ, ‘ಚಾರ್ ದಿನ್ ಕಿ ಚಾಂದನಿ ಫಿರ್ ಅಂಧೇರಿ ರಾತ್ (ನಾಲ್ಕು ದಿನಗಳ ಬೆಳಕು ಮತ್ತದೇ ಕತ್ತಲು)’ ಎಂಬ ನಾಣ್ಣುಡಿಯಂತೆಸೌಧವು ಮತ್ತೆ ಹಳೆಯ ಪರಿಸ್ಥಿತಿಗೆ ಮರಳುತ್ತದೆ. ಕಳೆದ 13 ವರ್ಷಗಳಿಂದ ನಡೆಯುತ್ತ ಬಂದ ಸಂಪ್ರದಾಯವಿದು.
ಡಿ.13 ಹಾಗೂ 14ರಂದು ಅಧಿವೇಶನಕ್ಕೆ ರಜೆ. ಕಾರಣ ಯಾವುದೇ ಸಚಿವ, ಶಾಸಕ, ಜನಪ್ರತಿನಿಧಿಗಳು ಸೌಧದ ಆಸುಪಾಸು ಹಾಯಲಿಲ್ಲ. ಜತೆಗೆ ಸರ್ಕಾರಿ ರಜೆಯೂ ಇದ್ದ ಕಾರಣ ಅಧಿಕಾರಿ ವರ್ಗವೂ ಹತ್ತಿರ ಸುಳಿಯಲಿಲ್ಲ.
ಪ್ರತಿ ದಿನವೂ ಹತ್ತಕ್ಕೂ ಹೆಚ್ಚು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದವು. ಇವುಗಳ ನಿರ್ವಹಣೆಗೆ 2,500 ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಆಡಳಿತ ಯಂತ್ರಕ್ಕೆ ರಜೆ ಇದ್ದ ಕಾರಣ ಯಾವುದೇ
ಪ್ರತಿಭಟನಕಾರರೂ ಇತ್ತ ಇಣುಕಿ ಕೂಡ ನೋಡಲಿಲ್ಲ.
ಶನಿವಾರ ಹಾಗೂ ಭಾನುವಾರ ಇಡೀ ದಿನ ಸುವರ್ಣ ಸೌಧದ ಒಳಾಂಗಣ, ವಿಧಾನಸಭಾಂಗಣ, ವಿಧಾನ ಪರಿಷತ್ ಸಭಾಂಗಣ ಸೇರಿದಂತೆ ಇಡೀ ಮಹಲು ಖಾಲಿ ಖಾಲಿ ಆಗಿತ್ತು. ಹೊರಭಾಗದಲ್ಲಿ ಭದ್ರತೆ ಒದಗಿಸಿದ ಬೆರಳೆಣಿಕೆಯಷ್ಟು ಪೊಲೀಸರು ಹಾಗೂ ಸ್ವಚ್ಛತಾ ಕರ್ಮಿಗಳನ್ನು ಬಿಟ್ಟರೆ ಬೇರೆ ಯಾರೂ ಕಾಣಿಸದೇ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನೆಗೆ ಹಾಕಿದ ಶಾಮಿಯಾನಗಳು, ಅಲ್ಲಲ್ಲಿ ಅಳವಡಿಸಿದ ಕುರ್ಚಿಗಳು, ಪೊಲೀಸರು ಇಟ್ಟಿದ್ದ ಬ್ಯಾರಿಕೇಡ್‌ಗಳು ಜನರ ದಾರಿ ಕಾಯುತ್ತ ಕುಳಿತಂತೆ ಭಾಸವಾದವು.
ಅಧಿವೇಶನ ಎಂಬ ಪ್ರಜಾಪ್ರಭುತ್ವದ ಜಾತ್ರೆ ಮುಗಿದ ಮೇಲೆ ಇಲ್ಲಿ ಎಲ್ಲವೂ ಖಾಲಿಖಾಲಿ ಎನ್ನುವುದು ಈ ಭಾಗದ ಜನರ ಗೋಳು.
ಮುಖ್ಯಮಂತ್ರಿಗಳ ಪ್ರಾದೇಶಿಕ ಕಚೇರಿ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿ ಸಂರಕ್ಷಣಾ ಆಯೋಗ, ನೀರಾವರಿ, ಸಹಕಾರ ಮತ್ತಿತರ ಇಲಾಖೆಗಳ ಕಚೇರಿಗಳನ್ನು ಬೆಂಗಳೂರಿನ ವಿಧಾನಸೌಧದಿಂದ ಬೆಳಗಾವಿಗೆ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಇದರಿಂದ ಆಡಳಿತ ಯಂತ್ರದಲ್ಲಿ ಸಮಾನತೆ ಕಂಡುಬರುತ್ತೆ ಎಂಬ ಒತ್ಯಾಯ ದಶಕಗಳಿಂದಲೂ ಇದೆ.
ಈ ಹಿಂದೆ ಮಠಾಧೀಶರು, ವಿವಿಧ ಸಂಘಟನೆಗಳ ಮುಖಂಡರ ಒತ್ತಾಸೆ ತೀವ್ರಗೊಂಡಾಗ, ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯನ್ನು ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಕಚೇರಿ ಸ್ಥಳಾಂತರದ ಬಗ್ಗೆ ವರದಿ ನೀಡುವಂತೆ ತಿಳಿಸಿತ್ತು. ಬೆಳಗಾವಿಗೆ ಬಂದು ಪರಿಶೀಲನೆ ನಡೆಸಿದ ಸಮಿತಿ, ‘ಕಚೇರಿಗಳ ಸ್ಥಳಾಂತರ ಕಾರ್ಯಸಾಧುವಲ್ಲ’ ಎಂದು ವರದಿ ಕೊಟ್ಟಿತ್ತು. ಇದನ್ನೇ ನೆಪವಾಗಿಟ್ಟುಕೊಂಡ ಅಂದಿನ ಸರ್ಕಾರ ಸ್ಥಳಾಂತರ ವಿಚಾರವನ್ನೇ ಕೈಬಿಟ್ಟಿದೆ.
2018ರಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ, 9 ಪ್ರಮುಖ ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಆದೇಶ ಹೊರಡಿಸಿದರು. ಆ ಪೈಕಿ ಒಂದು ಕಚೇರಿ (ಮಾಹಿತಿ ಹಕ್ಕು ಆಯುಕ್ತರು) ಮಾತ್ರ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರವಾಗಿದೆ. ನಂತರ ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಗಳು ಕಚೇರಿ ಸ್ಥಳಾಂತರ ವಿಚಾರವಾಗಿ ಯಾವುದೇ ದೃಢ ನಿಲುವು ತೆಗೆದುಕೊಳ್ಳಲಿಲ್ಲ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಕೆಲವು ಸಚಿವರು ಬೆಂಗಳೂರಿನತ್ತ ಮರಳಿದರೆ; ಹಲವರು ಗೋವಾ ಹಾಗೂ ಮಹಾರಾಷ್ಟ್ರದ ಕಡೆಗೆ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸಚಿವರ ಆಪ್ತ ಮೂಲಗಳು ತಿಳಿಸಿವೆ.
ಪ್ರತಿ ವರ್ಷ ಅಧಿವೇಶನ ನಡೆದಾಗಲೂ ಸಚಿವರು, ಶಾಸಕರು, ಅಧಿಕಾರಿಗಳಿಗೆ ಶನಿವಾರ ಹಾಗೂ ಭಾನುವಾರ ಪ್ರವಾಸದ ದಿನಗಳೇ ಆಗಿರುವುದು ರೂಢಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.