
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಬಳಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು– ಸಂಗ್ರಹ ಚಿತ್ರ
ಬೆಳಗಾವಿ: ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಚೆಗೆ ರೈತರು ಪ್ರತಿಭಟಿಸುತ್ತಿದ್ದಾಗ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳದ ಚನ್ನಗೌಡ ಸಸಾಲಟ್ಟಿ, ಪ್ರಶಾಂತ ಮುಗಳಿ, ವಿನಾಯಕ ಕೋಟಿವಾಲಿ, ಉಳ್ಳಾಗಡ್ಡಿ, ಖಾನಾಪುರದ ಮಲ್ಲಪ್ಪ ಘಟಗಿ, ಕಾಕತಿಯ ಶಿವಪ್ಪ ವಾಣಿ ಮತ್ತ ಬಿದ್ರೆವಾಡಿಯ ಸೋಮನಾಥ ಹಿರೇಮಠ ಬಂಧಿತರು.
‘ಪ್ರತಿ ಟನ್ ಕಬ್ಬಿಗೆ ₹3,300 ದರ ನೀಡುವಂತೆ ರೈತರು ಪ್ರತಿಭಟಿಸುತ್ತಿದ್ದರು. ಆಗ ಕೆಲವರು ಪೊಲೀಸರ ಮೇಲೆ ಕಲ್ಲುತೂರಿದರು. ಸಾರಿಗೆ ಸಂಸ್ಥೆಯ ನಾಲ್ಕು ಬಸ್, ಪೊಲೀಸ್ ಇಲಾಖೆಯ ಎರಡು ಬಸ್ ಧ್ವಂಸಗೊಳಿಸಿದರು. ಈ ಘಟನೆಯಲ್ಲಿ 12 ಮಂದಿ ಪೊಲೀಸರು ಗಾಯಗೊಂಡಿದ್ದರು. ಸಿ.ಸಿ.ಟಿ.ವಿ ದೃಶ್ಯಾವಳಿ ಮತ್ತಿತರ ಸಾಕ್ಷ್ಯಗಳ ಮೂಲಕ ತನಿಖೆ ನಡೆಸಿ ಆರು ಮಂದಿ ಬಂಧಿಸಿದ್ದು, ದೊಂಬಿ, ಗುಂಪುಗಲಭೆ, ಮಾರಣಾಂತಿಕ ಹಲ್ಲೆ ಆರೋಪಗಳಡಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
‘ಈಗ ಬಂಧನಕ್ಕೆ ಒಳಗಾದವರಲ್ಲಿ ರೈತರು, ಕೂಲಿಕಾರ್ಮಿಕರು, ಮಾಜಿ ಸೈನಿಕರು ಇದ್ದಾರೆ. ಇವರು ಕಲ್ಲುತೂರಾಟ ಏಕೆ ಮಾಡಿದರು? ಹೋರಾಟದ ದಿಕ್ಕು ತಪ್ಪಿಸಲು ಒಳಸಂಚು ಏನಾದರೂ ನಡೆದಿತ್ತೇ ಎಂದೂ ವಿವಿಧ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದೇವೆ. ಆರು ಮಂದಿ ಅಷ್ಟೇ ಅಲ್ಲದೆ; ಕಲ್ಲುತೂರಾಟ ಪ್ರಕರಣದಲ್ಲಿ ಭಾಗಿಯಾಗಿರುವ ಉಳಿದವರ ಗುರುತು ಪತ್ತೆ ಹಚ್ಚುತ್ತಿದ್ದೇವೆ. ಗಾಯಗೊಂಡ ಪೊಲೀಸರಿಗೆ ಪರಿಹಾರ ನೀಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.