ಬೆಳಗಾವಿ: ‘ಮಹಿಳೆಯರ ಸ್ವಾಭಿಮಾನ ಎತ್ತಿಹಿಡಿದು, ಆರ್ಥಿಕ ಸ್ವಾವಲಂಬನೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಮಹಿಳೆ ಅಭಿವೃದ್ಧಿಯಾದರೆ ಮನೆ, ಗ್ರಾಮ, ದೇಶ ಅಭಿವೃದ್ಧಿಯಾದಂತೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ನಡೆದ ಮಹಿಳಾ ಸಾಧನಾ ಸಮಾವೇಶ ಹಾಗೂ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆಯರನ್ನು ಸ್ವಾವಲಂಬಿಯಾಗಿಸಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾದರಿ ಕೆಲಸ ಮಾಡುತ್ತಿದ್ದಾರೆ’ ಎಂದರು.
‘ಒಳ್ಳೆಯ ಉದ್ದೇಶದಿಂದ ಗೃಹಲಕ್ಷ್ಮೀ ಗ್ಯಾರಂಟಿ ಬ್ಯಾಂಕ್ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬರೂ ಶೇರ್ ಪಡೆಯಬೇಕು. ಅದರಿಂದ ಸಾಲ ನೀಡಲಾಗುವುದು. ಇದಕ್ಕೆ ಧರ್ಮಸ್ಥಳ ಸಂಘವೇ ಆದರ್ಶ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಜೊತೆಗೆ ಶಿಕ್ಷಣ, ಉದ್ಯೋಗಕ್ಕಾಗಿ ಸಾಲ ನೀಡುವ ವ್ಯವಸ್ಥೆ ಇರಲಿದೆ’ ಎಂದರು.
‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ಮಹಿಳೆಯರಿಗೆ ಜ್ಞಾನ ನೀಡುವ ಮೂಲಕ ಅದನ್ನು ಇಡೀ ಸಮಾಜಕ್ಕೆ ವಿಸ್ತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಮಹಿಳೆಯರು ಜ್ಞಾನವನ್ನು ಪಡೆದು ತಮ್ಮ ಮಕ್ಕಳಿಗೆ ಅದನ್ನು ನೀಡುವ ಮೂಲಕ ಇಡೀ ಸಮಾಜಕ್ಕೆ ಜ್ಞಾನವನ್ನು ವಿಸ್ತಾರ ಮಾಡುವಂತಹ ಕೆಲಸವನ್ನು ಮಾಡುತ್ತಾರೆ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲ್ಲಪ್ಲ ಪಾಟೀಲ, ಜಿ.ಆರ್.ಸೊನೇರ, ಸತೀಶ ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳು, ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಮೈಸೂರು ದಸರಾದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಇಬ್ಬರು ಕುಸ್ತಿಪಟುಗಳು ವಿಜೇತರಾಗಿದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಅಭಿನಂದಿಸಿದರು. ಕೆ.ಎಚ್. ಗ್ರಾಮದ ಕಾಮೇಶ ಪಾಟೀಲ ‘ದಸರಾ ಕಂಠೀರವ ಕೇಸರಿ–2025’ ಆಗಿ ಹಾಗೂ ಪ್ರೇಮ್ ಜಾಧವ್ ಕೂಡ ಚಿನ್ನದ ಪದಕ ವಿಜೇತರಾಗಿದ್ದಾರೆ. ಬಾಲ ಹನುಮಾನ್ ತಾಲೀಮ್ ಮಂಡಳದ ತರಬೇತುದಾರರಾದ ಪ್ರಶಾಂತ ಪಾಟೀಲ ಬಾಹು ಪಾಟೀಲ ಇದ್ದರು.
ಬೆಳಗಾವಿಯ ಮರಾಠಾ ಮಂದಿರದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡ ‘ಆವಿಷ್ಕಾರ’ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಳಿಗೆಗಳಿಗೆ ಭೇಟಿ ನೀಡಿ ವಸ್ತುಗಳನ್ನು ಖರೀದಿಸಿದರು. ‘ಕಳೆದ 28 ವರ್ಷದಿಂದ ನಿರಂತರವಾಗಿ ‘ಆವಿಷ್ಕಾರ’ ಉತ್ಸವ ಮುನ್ನಡೆಯುತ್ತಿದೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾರೆ. ನಮ್ಮ ಸಮಾಜ ಮಹಿಳೆ- ಪುರುಷ ಭೇದವಿಲ್ಲದೆ ಎಲ್ಲರೂ ಸಮಾನ ಎನ್ನುವ ಭಾವನೆ ಹೊಂದಿದೆ’ ಎಂದು ಹೇಳಿದರು. ಯಶಶ್ರೀ ದೇಶಪಾಂಡೆ ಸ್ವಾತಿ ಫಡಕೆ ರೋಹಿಣಿ ಗೋಗಟೆ ಆವಿಷ್ಕಾರ ಕಮಿಟಿಯ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.