ADVERTISEMENT

ಟಿಟಿಡಿ ಮಾದರಿಯಲ್ಲಿ ಯಲ್ಲಮ್ಮನಗುಡ್ಡ ಅಭಿವೃದ್ಧಿ: ಸಚಿವ ಎಚ್‌.ಕೆ.ಪಾಟೀಲ

ಫೆ.12ರಂದು ನಡೆಯುವ ಭರತ ಹುಣ್ಣಿಮೆ ಜಾತ್ರೆಯಲ್ಲಿ ಭಕ್ತರಿಗೆ ಅಗತ್ಯ ವ್ಯವಸ್ಥೆ: ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 8:47 IST
Last Updated 5 ಫೆಬ್ರುವರಿ 2025, 8:47 IST
<div class="paragraphs"><p>ಪ್ರವಾಸೋದ್ಯಮ ಇಲಾಖೆಯು ಬೆಳಗಾವಿ ಜಿಲ್ಲೆಯ ಪ್ರವಾಸಿತಾಣಗಳ ಕುರಿತು ಹೊರತಂದ ಮಾಹಿತಿ ಪುಸ್ತಕವನ್ನು ಸಚಿವ ಎಚ್‌.ಕೆ.ಪಾಟೀಲ ಬೆಳಗಾವಿಯಲ್ಲಿ ಬುಧವಾರ ಬಿಡುಗಡೆಗೊಳಿಸಿದರು.&nbsp;ಗೀತಾ ಕೌಲಗಿ, ಮೊಹಮ್ಮದ್ ರೋಷನ್, ಸೌಮ್ಯಾ ಬಾಪಟ್,&nbsp;ಡಾ.ಭೀಮಾಶಂಕರ ಗುಳೇದ ಚಿತ್ರದಲ್ಲಿದ್ದಾರೆ</p></div>

ಪ್ರವಾಸೋದ್ಯಮ ಇಲಾಖೆಯು ಬೆಳಗಾವಿ ಜಿಲ್ಲೆಯ ಪ್ರವಾಸಿತಾಣಗಳ ಕುರಿತು ಹೊರತಂದ ಮಾಹಿತಿ ಪುಸ್ತಕವನ್ನು ಸಚಿವ ಎಚ್‌.ಕೆ.ಪಾಟೀಲ ಬೆಳಗಾವಿಯಲ್ಲಿ ಬುಧವಾರ ಬಿಡುಗಡೆಗೊಳಿಸಿದರು. ಗೀತಾ ಕೌಲಗಿ, ಮೊಹಮ್ಮದ್ ರೋಷನ್, ಸೌಮ್ಯಾ ಬಾಪಟ್, ಡಾ.ಭೀಮಾಶಂಕರ ಗುಳೇದ ಚಿತ್ರದಲ್ಲಿದ್ದಾರೆ

   

ಬೆಳಗಾವಿ: ‘ತಿರುಪತಿ ತಿರುಮಲ ದೇವಸ್ಥಾನಂ(ಟಿಟಿಡಿ) ಮಾದರಿಯಲ್ಲೇ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭರತ ಹುಣ್ಣಿಮೆ ಅಂಗವಾಗಿ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಫೆ.12ರಂದು ಬೃಹತ್‌ ಜಾತ್ರೆ ನಡೆಯಲಿದ್ದು, 10 ಲಕ್ಷಕ್ಕೂ ಅಧಿಕ ಭಕ್ತರು ಸೇರಲಿದ್ದಾರೆ. ಈ ಬಾರಿ ಜಿಲ್ಲಾಡಳಿತದ ವತಿಯಿಂದ ಭಕ್ತರಿಗೆ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ವಿವಿಧ ಕಾಮಗಾರಿ ಕೈಗೊಳ್ಳಲಾಗುವುದು. ಜನಸಂದಣಿ ನಿರ್ವಹಿಸುವ ಜತೆಗೆ, ದೇವಿ ದರ್ಶನಕ್ಕಾಗಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುವುದು’ ಎಂದರು. 

ADVERTISEMENT

‘ಶುಚಿತ್ವ ಕೊರತೆಯಿಂದ ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆಯೇ’ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಈಗಷ್ಟೇ ನಡೆಸಿದ ರೇಣುಕಾ ಯಲ್ಲಮ್ಮ ಕ್ಷೇತ್ರದ ಪ್ರವಾಸೋದ್ಯಮ  ಅಭಿವೃದ್ಧಿ ಮಂಡಳಿ ಸಭೆಯಲ್ಲೂ ಈ ವಿಚಾರವಾಗಿಯೇ ವಿಸ್ತೃತವಾಗಿ ಚರ್ಚಿಸಿದ್ದೇವೆ. ಗುಡ್ಡದಲ್ಲಿ ಭಕ್ತರು ಬಯಲು ಶೌಚಕ್ಕೆ ಹೋಗುವ  ಸಮಸ್ಯೆ ಗಂಭೀರವಾಗಿ ಪರಿಗಣಿಸಿದ್ದೇವೆ. ಭಕ್ತರ ಸಂಖ್ಯೆಗೆ ತಕ್ಕಂತೆ ಶೌಚಗೃಹ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಯಲ್ಲಮ್ಮನಗುಡ್ಡದಲ್ಲಿ ದಾಸೋಹ ಭವನ, ಮೇವು ದಾಸೋಹ ಭವನ ನಿರ್ಮಾಣಕ್ಕೆ ಒಂದು ತಿಂಗಳಲ್ಲೇ ಶಂಕುಸ್ಥಾಪನೆ ನೆರವೇರಿಸಲು ಪ್ರಯತ್ನ ನಡೆದಿದೆ’ ಎಂದರು.

‘ಯಲ್ಲಮ್ಮನಗುಡ್ಡದಲ್ಲಿ ವಿವಿಧ ಅಭಿವೃದ್ಧಿ ಕೆಲಸಕ್ಕೆ ಕೇಂದ್ರ ಸರ್ಕಾರದಿಂದ ₹100 ಕೋಟಿ ಅನುದಾನ ಮಂಜೂರಾಗಿದೆ. ಪ್ರಸಾದ ಯೋಜನೆಯಡಿಯೂ ₹20 ಕೋಟಿ ಅನುದಾನ ಸಿಕ್ಕಿದೆ. ಇದರೊಂದಿಗೆ ರಾಜ್ಯ ಸರ್ಕಾರವು ವಿವಿಧ ಯೋಜನೆಗಳಡಿ ಸಾಕಷ್ಟು ಅನುದಾನ ಕೊಟ್ಟು, ಗುಡ್ಡದ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ಹೇಳಿದರು. 

‘ಯಲ್ಲಮ್ಮನಗುಡ್ಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ವಸತಿ ಗೃಹ, ದಾಸೋಹ ಭವನ ಮತ್ತಿತರ ಮೂಲಸೌಕರ್ಯ ಒಳಗೊಂಡ ಮಾಸ್ಟರ್ ಪ್ಲ್ಯಾನ್ ಬಹುತೇಕ ಸಿದ್ಧಗೊಂಡಿದೆ. ಅದನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರಿಂದಲೂ ಸಲಹೆ ಸ್ವೀಕರಿಸುತ್ತೇವೆ’ ಎಂದರು.

‘ದಾಸೋಹ ಭವನ ನಿರ್ಮಾಣ ಕಾಮಗಾರಿ ಆರಂಭವಾದ ನಂತರ ಪ್ರಾಯೋಗಿಕವಾಗಿ ದಾಸೋಹ ಆರಂಭಿಸುತ್ತೀರಾ’ ಎಂಬ ಪ್ರಶ್ನೆಗೆ, ‘ಸದ್ಯಕ್ಕೆ ಇಲ್ಲ. ಈ ಕಾಮಗಾರಿ ಮುಗಿದ ನಂತರವೇ ದಾಸೋಹ ಆರಂಭಿಸುತ್ತೇವೆ’ ಎಂದು ತಿಳಿಸಿದರು.

ಇದೇವೇಳೆ, ಪ್ರವಾಸೋದ್ಯಮ ಇಲಾಖೆ ಬೆಳಗಾವಿ ಜಿಲ್ಲೆಯ ಪ್ರವಾಸಿತಾಣಗಳ ಕುರಿತು ಹೊರತಂದಿರುವ ಮಾಹಿತಿ ಪುಸ್ತಕವನ್ನು ಸಚಿವರು ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ರೇಣುಕಾ ಯಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಂಡಳಿ ಆಯುಕ್ತೆ ಗೀತಾ ಕೌಲಗಿ, ಪ್ರವಾಸೋದ್ಯಮ ಇಲಾಖೆ ಜಂಟಿನಿರ್ದೇಶಕಿ ಸೌಮ್ಯಾ ಬಾಪಟ್ ಇತರರಿದ್ದರು.

‘ಗೋಕಾಕದಲ್ಲಿ ರೋಪ್‌ವೇ ಯೋಜನೆ’

‘ಗೋಕಾಕ ಜಲಪಾತದಲ್ಲಿ ರೋಪ್‌ವೇ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಸರ್ವೆ ನಡೆದಿದೆ’ ಎಂದು ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

‘ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯದಲ್ಲಿ 18 ಕಿ.ಮೀ. ಪ್ರದೇಶವನ್ನು ಸಫಾರಿಗಾಗಿ ಮುಕ್ತಗೊಳಿಸಲಾಗುತ್ತಿದೆ. ಅಲ್ಲಿ ಸಫಾರಿ ಆರಂಭವಾದ ನಂತರ, ಭೀಮಗಡ ಅತ್ಯಾಕರ್ಷಕ ಪ್ರವಾಸಿತಾಣವಾಗಿ ಪ್ರವಾಸಿಗರನ್ನು ಸೆಳೆಯಲಿದೆ’ ಎಂದು ತಿಳಿಸಿದರು.

‘ಗಾಂಧಿ ಭಾರತ ಕಾರ್ಯಕ್ರಮಗಳು ಅಕ್ಟೋಬರ್ 2ರವರೆಗೆ ನಡೆಯಲಿವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.