ADVERTISEMENT

28ರಿಂದ ಬೆಳವಡಿ ಮಲ್ಲಮ್ಮ ಉತ್ಸವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:05 IST
Last Updated 6 ಫೆಬ್ರುವರಿ 2026, 7:05 IST
ಮಲ್ಲಮ್ಮನ ಬೆಳವಡಿಯಲ್ಲಿ ಗುರುವಾರ ನಡೆದ ಬೆಳವಡಿ ಮಲ್ಲಮ್ಮ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡರು
ಮಲ್ಲಮ್ಮನ ಬೆಳವಡಿಯಲ್ಲಿ ಗುರುವಾರ ನಡೆದ ಬೆಳವಡಿ ಮಲ್ಲಮ್ಮ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡರು   

ಮಲ್ಲಮ್ಮನ ಬೆಳವಡಿ (ಬೈಲಹೊಂಗಲ ತಾ.): ‘ಪ್ರತಿ ವರ್ಷದಂತೆ ಈ ಬಾರಿಯೂ ಫೆ.28 ಹಾಗೂ ಮಾರ್ಚ್‌ 1ರಂದು ವೀರ ರಾಣಿ ಬೆಳವಡಿ ಮಲ್ಲಮ್ಮ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು’ ಎಂದು ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಮಲ್ಲಮ್ಮ‌ನ ಬೆಳವಡಿಯ ಸ್ಮಾರಕ‌ ಭವನದಲ್ಲಿ ಗುರುವಾರ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ–2026ರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಬೆಳವಡಿ ಮಲ್ಲಮ್ಮನ ಇತಿಹಾಸವನ್ನು ರಾಷ್ಟ್ರಕ್ಕೆ ತಿಳಿಸುವ ಕಾರ್ಯವಾಗಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆಗೆ ಈ ಕುರಿತು ಹೆಚ್ಚಿನ ಮಾಹಿತಿ ನೀಡುವ ಕಾರ್ಯವಾಗಬೇಕಾಗಿದೆ’ ಎಂದರು.

‘ಬೆಳವಡಿ ವ್ಯಾಪ್ತಿಯ ಎಲ್ಲ ಶಾಲೆಗಳಿಂದ ವೀರರಾಣಿ ಬೆಳವಡಿ ಮಲ್ಲಮ್ಮನ ಕುರಿತು ರೂಪಕ ತಯಾರಿಸಲು ಸೂಚಿಸಲಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಬೆಳವಡಿ ಮಲ್ಲಮ್ಮ ಪ್ರಶಸ್ತಿಗಳನ್ನು ವಿತರಿಸಲಾಗಿವುದು. ಉತ್ಸವಕ್ಕೆ ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರಿಗೆ ಆಮಂತ್ರಣ ನೀಡಲಾಗುವುದು. ಎರಡು ದಿನ ಜರುಗಲಿರುವ ಎಲ್ಲ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗಿಯಾಗುವ ಮೂಲಕ‌ ಉತ್ಸವವನ್ನು ಯಶಸ್ವಿಗೊಳಿಸುವಂತೆ’  ಅವರು ಕೋರಿದರು.

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ‘ಧೈರ್ಯ ಹಾಗೂ ಶೌರ್ಯದ ಪ್ರತೀಕವಾದ ಬೆಳವಡಿ ಮಲ್ಲಮ್ಮನ ಉತ್ಸವವನ್ನು ಕಳೆದ ಬಾರಿಗಿಂತಲೂ ಈ ಬಾರಿ ಅದ್ದೂರಿಯಾಗಿ ಆಚರಿಸಲಾಗುವುದು. ಕಾರ್ಯಕ್ರಮ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವವು ಅತಿ ಪ್ರಮುಖವಾಗಿದೆ. ಉತ್ಸವದ ಕುರಿತು ಸ್ಥಳೀಯರು ಹೆಚ್ಚಿನ ಉತ್ಸುಕತೆ ಹೊಂದಬೇಕು. ಉತ್ಸವದ ಯಶಸ್ವಿಗಾಗಿ ರಚಿಸಲಾದ ಉಪ ಸಮಿತಿಗಳು ಪರಸ್ಪರ‌ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ಉತ್ಸವ ಯಶಸ್ವಿಗೊಳಿಸಬೇಕು’ ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಕಾರಿಮನಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್, ಡಿ.ವೈ.ಎಸ್.ಪಿ. ವೀರಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಹನುಮಂತ ಶಿರಹಟ್ಟಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ಗ್ರಾಮಸ್ಥರ ಸಲಹೆಗಳೇನು?

ಪ್ರತಿ ವರ್ಷದಂತೆ ಬೆಳವಡಿ ಗ್ರಾಮದಲ್ಲಿ ದೀಪಾಲಂಕಾರ ಮಾಡಬೇಕು. ವೀರಜ್ಯೋತಿ ಮಾರ್ಗ ಬದಲಾವಣೆ ಮಾಡಬೇಕು. ಬೆಳವಡಿ ಮಲ್ಲಮ್ಮನ ಸಂಕ್ಷಿಪ್ತ‌ ಇತಿಹಾಸವುಳ್ಳ ಕರ ಪತ್ರ‌ಮುದ್ರಿಸಿ ವೀರಜ್ಯೋತಿ‌ ಮಾರ್ಗದಲ್ಲಿ ಸಾರ್ವಜನಿಕರಿಗೆ ವಿತರಿಸುವ‌ ಕಾರ್ಯವಾಗಬೇಕು ಎಂದು ಸಭೆಯಲ್ಲಿದ್ದ ಜನ ಸಲಹೆ ನೀಡಿದರು. ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸೇರಿದಂತೆ ಎಲ್ಲ‌ ಸಚಿವರನ್ನು ಆಹ್ವಾನಿಸಬೇಕು. ಬೆಳವಡಿ ಮಲ್ಲಮ್ಮ ಪ್ರಾಧಿಕಾರ ಸ್ಥಾಪಿಸಬೇಕು. ವಿಚಾರ ಸಂಕಿರಣಗಳಲ್ಲಿ‌ ಮಹಿಳೆಯರಿಗೂ ಸ್ಥಾನಮಾನ ನೀಡಬೇಕು. ಉತ್ಸವದ ಕುರಿತು ವ್ಯಾಪಕ ಪ್ರಚಾರ ಮರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ‌ ಹಾಗೂ ಕಲಾತಂಡಗಳಿಗೆ ಆದ್ಯತೆ ನೀಡಬೇಕು ಎಂದೂ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.