ADVERTISEMENT

ಬೆಳಗಾವಿ | 19,969 ಪಡಿತರ ಚೀಟಿ ರದ್ದು: ₹1.89 ಕೋಟಿ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 15:32 IST
Last Updated 19 ಆಗಸ್ಟ್ 2024, 15:32 IST
ಪಡಿತರ ಚೀಟಿ (ಸಾಂಕೇತಿಕ ಚಿತ್ರ)
ಪಡಿತರ ಚೀಟಿ (ಸಾಂಕೇತಿಕ ಚಿತ್ರ)   

ಬೆಳಗಾವಿ: ಕಳೆದ ಆರು ತಿಂಗಳಿಂದ ಪಡಿತರ ಪಡೆಯದ 19,969 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಅಲ್ಲದೇ, ಸುಳ್ಳು ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ ₹1.89 ಕೋಟಿ ದಂಡ ಕೂಡ ವಸೂಲಿ ಮಾಡಲಾಗಿದೆ.

ಜಿಲ್ಲೆಯಲ್ಲಿ 557 ಅಂತ್ಯೋಂದಯ, 19,412 ಆದ್ಯತಾ ಪಡಿತರ ಚೀಟಿ ಸೇರಿ ಒಟ್ಟು 19,969 ಪಡಿತರ ಚೀಟಿದಾರರು ಕಳೆದ 6 ತಿಂಗಳು (ನವೆಂಬರ್-2023ರಿಂದ ಏಪ್ರಿಲ್-2024) ರವರೆಗೆ ಪಡಿತರ ಧಾನ್ಯ ಪಡೆದಿಲ್ಲ. ಹೀಗಾಗಿ, ಈ ಎಲ್ಲ ಪಡಿತರ ಚೀಟಿಗಳನ್ನು 2024ರ ಜುಲೈ 29ರಂದು ರದ್ದುಪಡಿಸಲಾಗಿದೆ.

ಅಲ್ಲದೇ, ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರರು ಹಾಗೂ ಅನರ್ಹರು ಹೊಂದಿರುವ ಒಟ್ಟು 45,804 ಆದ್ಯತಾ ಪಡಿತರ ಚೀಟಿಗಳನ್ನು ‘ಆದ್ಯತೇತರ ಎಂದು ಪರಿವರ್ತಿಸಲಾಗಿದೆ. ಇಷ್ಟು ದಿನ ಆದ್ಯತಾ ಪಡಿತರ ಚೀಟಿಯ ಲಾಭ ಪಡೆದ ಕಾರಣ ಆ ಎಲ್ಲ ಪಡಿತರ ಚೀಟಿದಾರರಿಂದ ಒಟ್ಟು ₹1,88,75,946 ಹಣವನ್ನು ದಂಡ ವಸೂಲಿ ಮಾಡಲಾಗಿದೆ.

ADVERTISEMENT

ಮರಣೋತ್ತರ: 11,117 ಅಂತ್ಯೋಂದಯ ಮತ್ತು ಆದ್ಯತಾ ಪಡಿತರ ಚೀಟಿದಾರರು, 1,421 ಆದ್ಯತೇತರ ಪಡಿತರ ಚೀಟಿದಾರರು ಮೃತಪಟ್ಟಿದ್ದಾರೆ. ಒಟ್ಟು 12,538 ಫಲಾನುಭವಿಗಳು ಮೃತಪಟ್ಟಿದ್ದು, ಅವರ ವಿವರವನ್ನು ಕುಟುಂಬ ದತ್ತಾಂಶದಿಂದ ತೆಗೆದು ಹಾಕಲಾಗಿದೆ.

ಸರ್ಕಾರಿ ನೌಕರರು ಹಾಗೂ ಅನರ್ಹರು ಆದ್ಯತಾ ಪಡಿತರ ಚೀಟಿ ಹೊಂದಿದ್ದಲ್ಲಿ ದಾಖಲಾತಿಗಳೊಂದಿಗೆ ಆಯಾ ತಹಶೀಲ್ದಾರ ಕಚೇರಿಗೆ ಅವುಗಳನ್ನು ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.