‘ಗಾಂಧಿ ಭಾರತ’ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಕಾಂಗ್ರೆಸ್ ನಾಯಕರ ಕಟೌಟ್‌ಗಳು ರಾರಾಜಿಸುತ್ತಿವೆ
ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್ ಗೂಡುನವರ
ಬೆಳಗಾವಿ: ಸ್ವಾತಂತ್ರ್ಯ ಚಳವಳಿಯ ಗತಿಯನ್ನೇ ಬದಲಿಸಿ ದೇಶ ವಿಮೋಚನೆಯ ಕಡೆಗೆ ಹೊರಳಲು ಬಿಂದು ಸ್ವರೂಪಿಯಾದ 1924ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಪ್ರಭಾವಳಿಯನ್ನು ‘ಶತಮಾನೋತ್ಸವ’ ನೆನಪಿನಲ್ಲಿ ಮತ್ತೆ ಆವಾಹಿಸಿಕೊಂಡು, ಕಾಂಗ್ರೆಸ್ ಪಕ್ಷವನ್ನು ದೇಶವ್ಯಾಪಿ ಬಲಿಷ್ಠಗೊಳಿಸುವ ಸಂಕಲ್ಪಕ್ಕೆ ಇಲ್ಲಿ ಎರಡು ದಿನ ನಡೆಯಲಿರುವ ಕಾರ್ಯಕ್ರಮ ನಾಂದಿ ಹಾಡಲಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಿಕ್ಕು; ಹೊಸಕಸುವು ಕೊಟ್ಟ ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ನೂರು ವರ್ಷದ ಹಿಂದೆ ಇದೇ ಬೆಳಗಾವಿಯ ನೆಲದಲ್ಲಿ ನಡೆದ ಅಧಿವೇಶನ. ಅಲ್ಲಿಂದ ಚಾಲೂಗೊಂಡ ಸ್ವಾತಂತ್ರ್ಯ ಹೋರಾಟ, ಬ್ರಿಟಿಷರನ್ನು ಓಡಿಸುವವರೆಗೂ ನಿಲ್ಲಲಿಲ್ಲ. ಅಂತಹ ಐತಿಹಾಸಿಕ ಸಮ್ಮೇಳನ ನಡೆದ ನೆಲದಲ್ಲಿಯೇ, ಶತಮಾನದ ಸಂಭ್ರಮದ ಜತೆಗೆ ಪಕ್ಷದ ಭವಿತವ್ಯಕ್ಕೆ ಅಡಿಪಾಯ ಹಾಕಲು ಕಾಂಗ್ರೆಸ್ ನಾಯಕರು ಅಣಿಯಾಗಿದ್ದಾರೆ.
ಕನ್ನಡಿಗರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಧ್ಯಕ್ಷತೆಯಲ್ಲಿ ಮೇಳೈಸಲಿರುವ ಎಐಸಿಸಿ ಅಧಿವೇಶನವು, ಪಕ್ಷದ ಭವಿಷ್ಯದ ನಡೆಗೆ ಹೊಸ ಮಾರ್ಗವನ್ನು ತೆರೆಯಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದಾಗಿದೆ. ‘ಗಾಂಧಿ ಭಾರತ’ದ ಆಶಯದಡಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್‘ ಉದ್ಘೋಷದೊಂದಿಗೆ ನಡೆಯಲಿರುವ ಎರಡು ದಿನಗಳ ಕಾರ್ಯಕ್ರಮ ಕಾಂಗ್ರೆಸ್‌ಗೆ ನವ ಚೈತನ್ಯ ತರುವ ಹೆಬ್ಬಯಕೆಯನ್ನೂ ಹೊಂದಿದೆ.
ಗತ 100 ವಸಂತಗಳನ್ನು ‘ಗಾಂಧಿ ಭಾರತ’ ಹೆಸರಿನಲ್ಲಿ ಮೆಲುಕು ಹಾಕುತ್ತಲೇ, ದೇಶ ಹಾಗೂ ರಾಜ್ಯಗಳು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸುವ ಜತೆಗೆ 2025ಕ್ಕೆ ಪಕ್ಷದ ಕಾರ್ಯಸೂಚಿಯನ್ನು ರೂಪಿಸಲು ಕಾಂಗ್ರೆಸ್ ಪಕ್ಷವು ವಿಸ್ತೃತ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯನ್ನು ‘ನವ ಸತ್ಯಾಗ್ರಹ ಬೈಠಕ್’ ಹೆಸರಿನಲ್ಲಿ ನಡೆಸಲಿದೆ.
ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಕುರಿತು ಗೃಹ ಸಚಿವ ಅಮಿತ್ ಶಾ ಅವರು ನೀಡಿರುವ ಹೇಳಿಕೆ, ಸಂವಿಧಾನದ ಮೇಲಿನ ದಾಳಿ, ಪಕ್ಷ ಸಂಘಟನೆ, ಬದಲಾದ ಕಾಲಘಟ್ಟದಲ್ಲಿ ರಾಜಕೀಯ, ಆರ್ಥಿಕ ಪರಿಸ್ಥಿತಿ ಕುರಿತು ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಚಿಂತನ - ಮಂಥನ, ನಿರ್ಣಯ ಈ ಸಭೆಯ ಉದ್ದೇಶ ಎಂದು ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ.
ಗಾಂಧೀಜಿಯವರ ನೇತೃತ್ವದಲ್ಲಿ ವೀರಸೌಧದ ಬಳಿ ನಡೆದಿದ್ದ ಸಭೆಯಂತೆಯೇ ಗುರುವಾರ ಅದೇ ಸಮಯಕ್ಕೆ ಅದೇ ಜಾಗದಲ್ಲಿ ಸಿಡಬ್ಲ್ಯುಸಿ ಸಭೆ ನಿಗದಿಯಾಗಿದೆ.
ನೂರು ವರ್ಷಗಳ ನಂತರ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ‘ಗಾಂಧಿ ಪರಿವಾರ’ ಭಾಗಿಯಾಗುತ್ತಿದೆ. ಸಿಡಬ್ಲ್ಯುಸಿಯ 150 ಸದಸ್ಯರು ಸೇರಿ ದೇಶದ ಮೂಲೆಮೂಲೆಗಳಿಂದ ಪಕ್ಷದ 300ಕ್ಕೂ ಹೆಚ್ಚು ನಾಯಕರು ‘ಕುಂದಾ ನಗರಿ’ಯಲ್ಲಿ ಒಟ್ಟುಗೂಡುತ್ತಿದ್ದಾರೆ. ರಾಜ್ಯಸಭೆ ಸದಸ್ಯೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ, ಎಐಸಿಸಿ ಎಲ್ಲ ಮುಂಚೂಣಿ ನಾಯಕರು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಶಾಸಕಾಂಗ ಪಕ್ಷಗಳ ನಾಯಕರು, ಎಲ್ಲ ರಾಜ್ಯಗಳ ಪ್ರದೇಶದ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರು ಭಾಗವಹಿಸಲಿದ್ದಾರೆ.
ಇಂದಿನ ಪರಿಸ್ಥಿತಿಯಲ್ಲಿ ದೇಶವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು. ದೇಶಕ್ಕೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚಿಸುತ್ತೇವೆಡಿ.ಕೆ.ಶಿವಕುಮಾರ್ ಅಧ್ಯಕ್ಷ ಕೆಪಿಸಿಸಿ
ಪಕ್ಷದಲ್ಲಿ ಬದಲಾವಣೆ ನಿರಂತರವಾದ ಪ್ರಕ್ರಿಯೆ. ನೂರು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ. ರಾಜಕೀಯ ಬದಲಾವಣೆ ಬೆಳವಣಿಗೆಗಳು ಆಗುತ್ತಿರುತ್ತವೆಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿಡಬ್ಲ್ಯುಸಿ ಸಭೆಯಲ್ಲಿ ಇಡೀ ದೇಶಕ್ಕೆ ಮಹತ್ವದ ಸಂದೇಶ ನೀಡುವ ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ಚಿಂತನ ಮಂಥನ ನಡೆಸಿದ್ದಾರೆ. ‘ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನ ಮಾಡಿದ್ದಾರೆಂದು ದೇಶವ್ಯಾಪಿ ಜನಾಂದೋಲನ ಹಮ್ಮಿಕೊಳ್ಳುವುದು ‘ಒಂದು ದೇಶ ಒಂದು ಚುನಾವಣೆ’ ಕುರಿತು ಪಕ್ಷದ ಸ್ಪಷ್ಟ ನಿಲುವು ವ್ಯಕ್ತಪಡಿಸುವ ಕುರಿತು ಚರ್ಚೆ ಸಂವಿಧಾನದ ರಕ್ಷಣೆ ದೇಶದಲ್ಲಿರುವ ಆರ್ಥಿಕ ಅಸಮಾನತೆ ಪಕ್ಷ ಸಂಘಟನೆಯ ಪುನರಾಚನೆ ಬಗ್ಗೆಯೂ ಚರ್ಚಿಸಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ’ ಎಂದು ಮೂಲಗಳು ತಿಳಿಸಿವೆ.
ಗುರುವಾರ (ಡಿ. 26) ಬೆಳಿಗ್ಗೆ 10: ವೀರಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ ಛಾಯಾಚಿತ್ರ ಪ್ರದರ್ಶನ.
ಬೆಳಿಗ್ಗೆ 10.45: ಖಾದಿ ಮೇಳ ಉದ್ಘಾಟನೆ
ಬೆಳಿಗ್ಗೆ 11.15: ಗಂಗಾಧರ ದೇಶಪಾಂಡೆ ಸ್ಮಾರಕ ಅನಾವರಣ ಛಾಯಾಚಿತ್ರ ಪ್ರದರ್ಶನ
ಮಧ್ಯಾಹ್ನ 3: ಸಿಡಬ್ಲ್ಯುಸಿ ಸಭೆ
ಶುಕ್ರವಾರ (ಡಿ. 27) ಬೆಳಿಗ್ಗೆ 10.30: ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣ
ಮಧ್ಯಾಹ್ನ 1: ‘ಜೈ ಬಾಪು ಜೈ ಭೀಮ್ ಜೈ ಸಂವಿಧಾನ’ ಸಾರ್ವಜನಿಕ ಸಮಾವೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.