ADVERTISEMENT

‘ಇಂಟೆಲ್‌’ನ ಉನ್ನತ ಹುದ್ದೆಯಲ್ಲಿ ಬೆಳಗಾವಿ ಪ್ರತಿಭೆ ಸಚಿನ್‌ ಕತ್ತಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 2:43 IST
Last Updated 22 ಏಪ್ರಿಲ್ 2025, 2:43 IST
<div class="paragraphs"><p>ಸಚಿನ್‌ ಕತ್ತಿ</p></div>

ಸಚಿನ್‌ ಕತ್ತಿ

   

ಬೆಳಗಾವಿ: ‘ಇಂಟೆಲ್ ಕಾರ್ಪೊರೇಷನ್’ನ ಮುಖ್ಯ ತಾಂತ್ರಿಕ ಅಧಿಕಾರಿಯಾಗಿ ಹಾಗೂ ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥರಾಗಿ ಬೆಳಗಾವಿ ಮೂಲದ ಸಚಿನ್‌ ಕತ್ತಿ ನೇಮಕಗೊಂಡಿದ್ದಾರೆ.

ಸಚಿನ್ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಮೂಲದವರು. ಅವರ ತಂದೆ– ತಾಯಿ ವೈದ್ಯರಾಗಿದ್ದು, ಊರಿನಲ್ಲಿಯೇ ಸ್ವಂತ ಆಸ್ಪತ್ರೆ ನಡೆಸುತ್ತಿದ್ದಾರೆ. ಸಚಿನ್‌ ಪತ್ನಿ ಸೀಮಾ ಕೂಡ ಸಾಫ್ಟ್‌ವೇರ್‌ ಎಂಜಿನಿಯರ್‌. ಸಹೋದರ ಅಮಿತ್‌ ಹಾಗೂ ಅವರ ಪತ್ನಿ ಕೂಡ ವೈದ್ಯರಾಗಿದ್ದು, ಬೆಳಗಾವಿಯಲ್ಲಿ ವೃತ್ತಿ ಕೈಗೊಂಡಿದ್ದಾರೆ.

ADVERTISEMENT

ಸಚಿನ್ ಅವರ ಕಿರಿಯ ಸಹೋದರ ಡಾ.ಅಮಿತ್‌ ಕತ್ತಿ, ‘ಇದು ಸಚಿನ್‌ ಬುದ್ಧಿವಂತಿಕೆ, ಶ್ರಮಕ್ಕೆ ಸಂದ ಸ್ಥಾನ. ಆರು ತಿಂಗಳ ಹಿಂದಿನಿಂದಲೂ ನಿರೀಕ್ಷೆ ಇತ್ತು. ಜಾಗತಿಕ ಮಟ್ಟದಲ್ಲಿ ಸಹೋದರ ಹೆಸರು ಮಾಡಿದ್ದು ಖುಷಿ ತಂದಿದೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿನ ಸೇಂಟ್‌ ಝೇವಿಯರ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಕೆ.ಇ. ಬೋರ್ಡ್ಸ್‌ನಲ್ಲಿ ಪ್ರೌಢಶಿಕ್ಷಣ, ಕರ್ನಾಟಕ ಕಾಲೇಜಿನಲ್ಲಿ ಬಿಎಸ್‌ಸಿ, ಮುಂಬೈನ ಐಐಟಿಯಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ. 2003ರಿಂದ 2008ರವರೆಗೆ ಅಮೆರಿಕದ ಬೋಸ್ಟನ್‌ನ ಎಂಐಟಿ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸಸ್‌ನಲ್ಲಿ ಎಂ.ಎಸ್‌ ಮತ್ತು ಪಿಎಚ್‌.ಡಿ ಪಡೆದಿದ್ದಾರೆ.

ಆರಂಭದಲ್ಲಿ ಸ್ಟ್ಯಾನ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಅದರೊಂದಿಗೇ ‘ಕುಮಾ’ ಹಾಗೂ ‘ಉಹಾನ್‌’ ಎಂಬ ನೆಟ್‌ವರ್ಕ್‌ ಕಂಪನಿಗಳನ್ನು ಆರಂಭಿಸಿದ್ದರು.

2021ರಲ್ಲಿ ಇಂಟೆಲ್‌ ಕಂಪನಿ ಸೇರಿದ ಸಚಿನ್‌ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ‘ಚಿಫ್‌ ಟೆಕ್ನಾಲಜಿ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಅವರದು ಅಸಾಮಾನ್ಯ ಕೌಶಲ’ ಎಂಬುದು ಅವರ ಸ್ನೇಹಿತರು ನೀಡುವ ಮಾಹಿತಿ.

ಸಚಿನ್‌ ಅವರು ಮಾಜಿ ಸಚಿವ ದಿವಂಗತ ಉಮೇಶ ಕತ್ತಿ ಹಾಗೂ ಉದ್ಯಮಿ ರಮೇಶ ಕತ್ತಿ ಅವರ ದೂರದ ಸಂಬಂಧಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.