ADVERTISEMENT

ಬೈಲಹೊಂಗಲ | ಭೀಮನ ಅಮಾವಾಸ್ಯೆ: ಮನೆ ಮಾಡಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 8:32 IST
Last Updated 28 ಜುಲೈ 2022, 8:32 IST
ಭೀಮನ ಅಮಾವಾಸ್ಯೆ ಅಂಗವಾಗಿ ಬೈಲಹೊಂಗಲ ತಾಲ್ಲೂಕಿನ ಸೊಗಲ ಕ್ಷೇತ್ರದಲ್ಲಿ ಶಿವ- ಪಾರ್ವತಿ ಮೂರ್ತಿಗೆ ಗುರುವಾರ ವಿಶೇಷ ಅಲಂಕಾರ ಮಾಡಲಾಯಿತು
ಭೀಮನ ಅಮಾವಾಸ್ಯೆ ಅಂಗವಾಗಿ ಬೈಲಹೊಂಗಲ ತಾಲ್ಲೂಕಿನ ಸೊಗಲ ಕ್ಷೇತ್ರದಲ್ಲಿ ಶಿವ- ಪಾರ್ವತಿ ಮೂರ್ತಿಗೆ ಗುರುವಾರ ವಿಶೇಷ ಅಲಂಕಾರ ಮಾಡಲಾಯಿತು   

ಬೈಲಹೊಂಗಲ (ಬೆಳಗಾವಿ): ಪಟ್ಟಣವೂ ಸೇರಿದಂತೆ ತಾಲ್ಲೂಕಿನಾದ್ಯಂತ ಶ್ರಾವಣ ಮಾಸದ ಭೀಮನ ಅಮಾವಾಸ್ಯೆಯನ್ನು ಗುರುವಾರ ಭಕ್ತಿ ಭಾವದಿಂದ ಆಚರಿಸಲಾಯಿತು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣದಲ್ಲಿ ಮಾರಾಟಕ್ಕೆ ಹಚ್ಚಿದ್ದ ಹೂವು, ಕಾಯಿ, ಕರ್ಪೂರ, ಹೂಮಾಲೆ, ಹಣ್ಣುಗಳನ್ನು ಖರೀದಿಸಲು ಜನ ಮುಗಿಬಿದ್ದರು.

ಈ ಭಾಗದ ಪ್ರಮುಖ ಧಾರ್ಮಿಕ‌ ಕೇಂದ್ರಗಳಾದ ಕಾರಿಮನಿ, ಸೊಗಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದರು.

ADVERTISEMENT

ಭರ್ಜರಿ ವ್ಯಾಪಾರ:
ಬೃಹತ್ ಹೂ ಮಾಲೆಗಳು, ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯಿತು.

ಸಣ್ಣ ಹೂವಿನ ಮಾಲೆ ₹60 ರಿಂದ ₹100, ದೊಡ್ಡ ಹೂವಿನ ಮಾಲೆಗೆ ₹200 ರಿಂದ ₹300 ದರ ಇತ್ತು. ಸೇಬು ಹಣ್ಣು, ದಾಳಿಂಬೆ, ಸಂತ್ರಿ, ಮೊಸಂಬಿ, ನಿಂಬೆ ಹಣ್ಣುಗಳ ದರದಲ್ಲಿ ಹೆಚ್ಚಳ ಕಂಡುಬಂತು.

ಮನೆಗಳಲ್ಲಿ ಸಂಭ್ರಮ:
ಬೆಳಿಗ್ಗೆ ಎದ್ದು ಮನೆ ಆವರಣ, ವಾಹನಗಳನ್ನು ಶುಚಿಗೊಳಿಸಿ ದೇವರ ಪೂಜೆ ಮಾಡಿದ ಜನ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಮನೆಗಳಲ್ಲಿ ಗೃಹಿಣಿಯರು ಸಿಹಿ ಖಾದ್ಯಗಳನ್ನು ಮಾಡಿ ದೇವರಿಗೆ ನೈವೇದ್ಯ ಸಲ್ಲಿಸಿದರು.

ದೇವಸ್ಥಾನಗಳಲ್ಲಿ ಶ್ರಾವಣ ಸಂಭ್ರಮ:
ಶ್ರಾವಣ ಮಾಸದ ಭೀಮನ ಅಮಾವಾಸ್ಯೆಯ ಅಂಗವಾಗಿ ಪ್ರತಿ ದೇವಸ್ಥಾನ, ಮಠಗಳಲ್ಲಿ ಧಾರ್ಮಿಕ ಆಚರಣೆಯ ಸಡಗರ, ಸಂಭ್ರಮ ಮನೆ ಮಾಡಿತ್ತು. ಭಕ್ತರು ದೇವಸ್ಥಾನಗಳಿಗೆ ತಂಡೋಪ, ತಂಡವಾಗಿ ತೆರಳಿ ವಿಶೇಷ ಪೂಜೆ, ಮಹಾರುದ್ರಾಭಿಷೇಕ ಮಾಡಿದರು.

ಕಾರಿಮನಿ ಮಲ್ಲಯ್ಯ ದೇವಸ್ಥಾನ, ಸೊಗಲ ಸೋಮೇಶ್ವರ ದೇವಾಲಯ ಸೇರಿದಂತೆ ಎಲ್ಲೆಡೆ ಶ್ರಾವಣ ಮಾಸ ಆಚರಣೆಯ ಸಂಭ್ರಮ ಮನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.