ADVERTISEMENT

ಬೈಲಹೊಂಗಲ: ಕೆರೆಯ ಅಂದ ಹೆಚ್ಚಿಸಿದ ಬಾತುಕೋಳಿ

ಚಿತ್ತಾಕರ್ಷಕ ತಾಣವಾದ ಬೈಲಹೊಂಗಲ ದೊಡ್ಡ ಕೆರೆ

ರವಿ ಎಂ.ಹುಲಕುಂದ
Published 1 ಫೆಬ್ರುವರಿ 2025, 5:15 IST
Last Updated 1 ಫೆಬ್ರುವರಿ 2025, 5:15 IST
<div class="paragraphs"><p>ಬೈಲಹೊಂಗಲ ದೊಡ್ಡ ಕೆರೆಯಲ್ಲಿ ಬಿಟ್ಟಿರುವ ಬಾತುಕೋಳಿ ಮರಿಗಳಿಗೆ ಪುರಸಭೆ ಸಿಬ್ಬಂದಿ ಆಹಾರ ಪೂರೈಸುತ್ತಿರುವುದು.</p></div>

ಬೈಲಹೊಂಗಲ ದೊಡ್ಡ ಕೆರೆಯಲ್ಲಿ ಬಿಟ್ಟಿರುವ ಬಾತುಕೋಳಿ ಮರಿಗಳಿಗೆ ಪುರಸಭೆ ಸಿಬ್ಬಂದಿ ಆಹಾರ ಪೂರೈಸುತ್ತಿರುವುದು.

   

ಬೈಲಹೊಂಗಲ: ಹಕ್ಕಿಗಳ ಚಿಲಿಪಿಲಿ ನಾದವು ಮನಸ್ಸಿಗೆ ಉಲ್ಲಾಸವನ್ನು ಒದಗಿಸುತ್ತದೆ. ಪ್ರಕೃತಿಯಲ್ಲಿ ಪ್ರಾಣಿ, ಪಕ್ಷಿಗಳ ಕಲರವ ಕಣ್ಣು ತುಂಬಿಕೊಳ್ಳುವುದೆ ಚೆಂದ. ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರುವ ಸ್ಥಳೀಯ ಪುರಸಭೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಹಳೆಯ ಹನುಮಂತ ದೇವರ ದೇವಸ್ಥಾನ ಹಿಂಬದಿಯ ಇತಿಹಾಸ ಪ್ರಸಿದ್ದ ದೊಡ್ಡ ಕೆರೆಯಲ್ಲಿ ಸುಮಾರು 300ಕ್ಕೂ ಅಧಿಕ ಸಂಖ್ಯೆಯಲ್ಲಿ ಬಾತುಕೋಳಿ ಮರಿಗಳನ್ನು ಕೆರೆಗೆ ಬಿಟ್ಟಿರುವುದು ನೋಡುಗರ ಆಕರ್ಷಣೆಗೆ ಒಳಗಾಗಿದೆ. ಇದರಿಂದ ಪಶು, ಪಕ್ಷಿ, ಪ್ರಾಣಿ ಪ್ರಿಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಆಕರ್ಷಣೆ ಹೆಚ್ಚಿಸಿದ ಬಾತುಕೋಳಿಗಳು: ಕಳೆದ ಎರಡು ತಿಂಗಳು ಹಿಂದೆ ಕೆರೆಗೆ ಬಿಟ್ಟಿರುವ ಒಂದು ತಿಂಗಳಿನ ಬಾತುಕೋಳಿ ಮರಿಗಳು ಪಿಸುಗುಟ್ಟುತ್ತ ಕೆರೆಯಲ್ಲಿ ಹೆಜ್ಜೆ ಹಾಕುತ್ತ ಎಲ್ಲರ ಕಣ್ಸೆಳೆಯುವಂತೆ ಮಾಡಿವೆ. ಇದೇ ಮೊದಲ ಬಾರಿಗೆ ಕೆರೆಗೆ ಬಾತುಕೋಳಿ ಮರಿಗಳು ಬಂದಿರುವುದನ್ನು ನೋಡಲು ಸಾಕಷ್ಟು ಜನ ಕೆರೆಗೆ ಧಾವಿಸುತ್ತಿದ್ದಾರೆ. ಕೆರೆಯಲ್ಲಿ ಸಾಲು, ಸಾಲಾಗಿ ಮುಂದೆ ಸಾಗುತ್ತಿರುವ ಬಾತುಕೋಳಿ ಮರಿಗಳೊಂದಿಗೆ ಸೆಲ್ಫಿ ಪೋಟೋ ಕ್ಲಿಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ವಾಯುವಾರಿಗಳು, ಪ್ರವಾಸಿಗಳು, ಕೆರೆ ಸುತ್ತಮುತ್ತಲಿನ ನಿವಾಸಿಗಳು ಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ಬಾತುಕೋಳಿ ಮರಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಮರಿಗಳ ಪಾಲನೆ: ಇದೇ ಮೊದಲ ಬಾರಿಗೆ ಪುರಸಭೆ ಹಾಗೂ ಕೆಲವು ದಾನಿಗಳ ಸಹಕಾರದಿಂದ ಕೆರೆಯಲ್ಲಿ ಬಿಟ್ಟಿರುವ ಬಾತುಕೋಳಿ ಮರಿಗಳನ್ನು ಪುರಸಭೆ ಸಿಬ್ಬಂದಿಯಾದ ಸುರೇಶ ನಿಂಗನ್ನವರ, ಭೀಮಪ್ಪ ಹರಿಜನ ಪಾಲನೆ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಮೂರು ಬಾರಿ ಅಕ್ಕಿ, ಜೋಳ, ನವನಿ, ಚೂರಮರಿ, ವಿವಿಧ ತರಕಾರಿ, ಇನ್ನೂ ಹಲವು ಬಗೆಯ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿದ್ದಾರೆ. ದಾನಿಗಳು ಕೂಡ ಆಹಾರ ಸಾಮಗ್ರಿ ನೀಡುತ್ತಿದ್ದಾರೆ. ಇವರಿಬ್ಬರೂ ಕರೆದರೆ ಕೆರೆಯ ಯಾವ ದಿಕ್ಕಿನಲ್ಲಿದ್ದರೂ ಎಲ್ಲ ಬಾತುಕೋಳಿ ಮರಿಗಳು ಒಂದೆಡೆ ಸೇರಿ ಆಹಾರ ಸಾಮಾಗ್ರಿ ಸೇವಿಸುತ್ತವೆ. ಇದು ನೋಡುಗರ ಕಣ್ಣಿಗೆ ಮುದ ನೀಡುತ್ತದೆ.

ಹಿರಿಯರು ನಿರ್ಮಿಸಿದ ಕೆರೆ: ಸುಮಾರು 30 ಎಕರೆ ಜಮೀನಿನಲ್ಲಿ ಅರ್ಧ ಭಾಗ ಜನರಿಗೆ, ಇನ್ನರ್ಧ ಭಾಗ ದನಕರುಗಳಿಗೆ ಕುಡಿಯುವ ನೀರಿಗಾಗಿ ಎನ್ನುವ ಉದ್ದೇಶದಿಂದ ಈ ಹಿಂದೆ ಹಿರಿಯರು ದೊಡ್ಡ ಕೆರೆ ನಿರ್ಮಾಣ ಮಾಡಿದ್ದರು. ಕೆರೆ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿದ್ದರೂ, ಹಿಂದಿನ ಪುರಸಭೆ ಅಧಿಕಾರಿಗಳು ಕ್ರಿಯಾಯೋಜನೆಯನ್ನು ಸಮರ್ಪಕವಾಗಿ ರೂಪಿಸದೇ ಇರುವುದರಿಂದ ಕೆರೆ ಅಭಿವೃದ್ಧಿಗೆ ಸಾಕಷ್ಟು ಹೋರಾಟ ನಡೆಸಲಾಗಿತ್ತು.

ಕಳೆದ ಒಂದು ವರ್ಷದ ಹಿಂದೆ ಕೆರೆಗೆ ಹೊಸ ರೂಪ ನೀಡಿ ಪಾದಚಾರಿ ಮಾರ್ಗ, ಗಿಡಮರ ನೆಟ್ಟು ಉದ್ಯಾನ ಮಾಡಲಾಗಿದೆ. ಇದರಿಂದ ಕೆರೆಗೆ ಹೊಸ ಹೊಳಪು ಬಂದಿದೆ. ಬಾತುಕೋಳಿ ಮರಿಗಳಿಂದ ಮತ್ತಷ್ಟು ಆಕರ್ಷಣೆ ಹೆಚ್ಚಾಗಿದೆ.

‘ಬರಗಾಲ ಪರಿಸ್ಥಿತಿಯಲ್ಲಿ ಜನರಿಗೆ ಕೆರೆ ಆಸರೆಯಾಗಿತ್ತು. ದನಕರುಗಳಿಗೆ ನೀರಿನ ದಾಹ ನೀಗಿಸುತ್ತಿದ್ದ ಕೆರೆ ಪದೇ, ಪದೇ ಕಲುಷಿತಗೊಳ್ಳುವುದನ್ನು ತಡೆಯಬೇಕು. 30 ಎಕರೆ ವಿಸ್ತೀರ್ಣದ ಕೆರೆ ನುಂಗಣ್ಣರ ಪಾಲಾಗಿದೆ. ಕೂಡಲೇ ಕೆರೆಯ ಒತ್ತುವರಿ ತೆರವುಗೊಳಿಸಿ ಕೆರೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು. ಕೆರೆಯಲ್ಲಿ ಉದ್ಯಾನ, ಬೋಟಿಂಗ್, ವಾಯುವಿಹಾರಿಗಳಿಗೆ ಸೌಲಭ್ಯ ಸೇರಿದಂತೆ ಇನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕೆರೆಗೆ ಬಿಟ್ಟಿರುವ ಬಾತುಕೋಳಿ ಮರಿಗಳ ಸಂಪೂರ್ಣ ರಕ್ಷಣೆ ಮಾಡಬೇಕು. ಪೂರ್ಣ ಪ್ರಮಾಣದಲ್ಲಿ ಆಹಾರ ಪೂರೈಸಿ ಪಾಲನೆ ಮಾಡಬೇಕು. ಅಂತರ್ಜಲ ಹೆಚ್ಚಿಸಲು ಮುಂದಾಗಬೇಕು’ ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ಬೈಲಹೊಂಗಲ ದೊಡ್ಡ ಕೆರೆಯಲ್ಲಿ ಬಿಟ್ಟಿರುವ ಬಾತುಕೋಳಿ ಮರಿಗಳು ನೋಡುಗರನ್ನು ಆಕರ್ಷಿಸುತ್ತಿವೆ

ಉದ್ಯಾನವನದ ಆಕರ್ಷಣೆ ಬಾತುಕೋಳಿ ಮರಿಗಳು ವಾಯುವಿಹಾರಿ, ಪ್ರವಾಸಿಗರಿಂದ ಬಾತುಕೋಳಿ ವೀಕ್ಷಣೆ ಪುರಸಭೆಯ ನೂತನ ಪ್ರಯೋಗಕ್ಕೆ ಮೆಚ್ಚುಗೆ
ಕೆರೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸಲಾಗಿದೆ. ಬರುವ ದಿನಮಾನಗಳಲ್ಲಿ ಇನ್ನಷ್ಟು ಅನುದಾನ ನೀಡಿ ಕೆರೆಯನ್ನು ಮಾದರಿ ಕೆರೆಯನ್ನಾಗಿಸಲಾಗುವುದು.
ಮಹಾಂತೇಶ ಕೌಜಲಗಿ ಶಾಸಕ
ಕೆರೆ ಒತ್ತುವರಿ ತೆರುವುಗೊಳಿಸಬೇಕು. ಇನ್ನೂ ಹೆಚ್ಚಿನ ರೀತಿಯಲ್ಲಿ ಕೆರೆಯನ್ನು ಸಮಗ್ರ ಅಭಿವೃದ್ಧಿಗೊಳಿಸಿ ಮಾದರಿಯಾಗಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ದಿಟ್ಟ ಕ್ರಮ ಜರುಗಿಸಬೇಕು.
ಮೋಹನ ಚವ್ಹಾನ ನಿವಾಸಿ
ಪ್ರವಾಸಿಗರ ಸ್ಥಳೀಯ ನಾಗರಿಕರ ಆಕರ್ಷಣೆಗೆ ಒಳಗಾಗಿರುವ ದೊಡ್ಡ ಕೆರೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೆರೆಯ ನೀರು ಯಾವುದೇ ಕಾರಣಕ್ಕೂ ಕಲುಷಿತ ಆಗದಂತೆ ಪುರಸಭೆಯಿಂದ ಮುಂಜಾಗೃತಿವಹಿಸಲಾಗುತ್ತಿದೆ. ಸಾರ್ವಜನಿಕರು ಕೆರೆ ಸುತ್ತಮುತ್ತಲಿನ ನಿವಾಸಿಗಳು ಸಹಕಾರ ನೀಡಬೇಕು. ಕೆರೆ ಸುತ್ತಮುತ್ತ ಪುರಸಭೆ ಸಿಬ್ಬಂದಿಯಿಂದ ಕಾವಲುವಹಿಸಲಾಗಿದೆ. ಬರುವ ದಿನಮಾನಗಳಲ್ಲಿ ಕೆರೆಗೆ ಹೊಸ ಚೈತನ್ಯ ತುಂಬಲಾಗುವುದು.
ವಿಜಯ ಬೋಳನ್ನವರ ಅಧ್ಯಕ್ಷ
ಕೆಲ ದಾನಿಗಳು ಪುರಸಭೆಯಿಂದ ಕೆರೆಯಲ್ಲಿ 300ಕ್ಕೂ ಅಧಿಕ ಸಂಖ್ಯೆಯಲ್ಲಿ ಬಾತುಕೋಳಿ ಮರಿಗಳನ್ನು ಬಿಡಲಾಗಿದೆ. ಇದರಿಂದ ಕೆರೆಯ ಆಕರ್ಷಣೆ ಹೆಚ್ಚಿದೆ. ಪಾದಚಾರಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ ದೊಡ್ಡ ಕೆರೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬರುವ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕೆರೆ ಆಕರ್ಷಣೆಗೊಳಿಸಿ ಮಾದರಿ ಉದ್ಯಾನವಾಗಿಸಲಾಗುವುದು.
ವಿರೇಶ ಹಸಬಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.