ADVERTISEMENT

ಮತಗಟ್ಟೆ ಪ್ರವೇಶಿಸಿದ ಶಾಸಕ ಬೆನಕೆ: ನೀತಿ ಸಂಹಿತೆ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 7:48 IST
Last Updated 13 ಜೂನ್ 2022, 7:48 IST
ಶಾಸಕ ಅನಿಲ ಬೆನಕೆ
ಶಾಸಕ ಅನಿಲ ಬೆನಕೆ   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ವಾಯವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ತೆರೆದ ಮತದಾನ ಕೇಂದ್ರ ಪ್ರವೇಶಿಸುವ ಮೂಲಕ, ಶಾಸಕ ಅನಿಲ ಬೆನಕೆ ಅವರು ನೀತಿ ಸಂಹಿತೆ ಉಲ್ಲಂಘಿಸಿದರು.

ಸೋಮವಾರ ಬೆಳಿಗ್ಗೆ ಮತಗಟ್ಟೆ ಆವರಣಕ್ಕೆ ಬಂದ ಶಾಸಕ, ಮಾಧ್ಯಮದವರ ಜತೆ ಮಾತನಾಡಿದರು. ಬಳಿಕ ಸರದಿಯಲ್ಲಿ ನಿಂತಿದ್ದ ಮತದಾರರಿಗೆ ಕೈ ಮುಗಿಯುತ್ತ ನೇರವಾಗಿ ಮತಗಟ್ಟೆ ಒಳಗೆ ಹೋದರು. ಕೆಲಹೊತ್ತು ಅಲ್ಲಿನ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲೇ ಶಾಸಕರ ಮೊಬೈಲ್ ಫೋನ್ ರಿಂಗುಣಿಸಿತು. ತಮ್ಮೊಂದಿಗೆ ಮೊಬೈಲನ್ನೂ ಒಳಗೆ ತೆಗೆದುಕೊಂಡು ಬಂದಿದ್ದ ಶಾಸಕ ಬೆನಕೆ, ರಿಂಗ್ ಆದ ತಕ್ಷಣ ಮತಗಟ್ಟೆಯೊಳಗೇ ಕರೆ ಸ್ವೀಕರಿಸಿ ಮಾತನಾಡಿದರು.

ADVERTISEMENT

'ಮತದಾರರ ಮೇಲೆ ಪ್ರಭಾವ ಬೀರಲು ಶಾಸಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರ ಮೇಲೆ ಚುನಾವಣಾ ಅಧಿಕಾರಿಗಳು ಕ್ರಮ ಜರುಗಿಸಬೇಕು' ಎಂದು ಮತಗಟ್ಟೆ ಹೊರಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದರು.

ಜಾಮೀನುರಹಿತ ವಾರೆಂಟ್ ಜಾರಿ ಆಗಿದೆ:2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಶಾಸಕ ಅನಿಲ ಬೆನಕೆ ಅವರ ಮೇಲೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಶಾಸಕರ ವಿರುದ್ಧ ಬೆಂಗಳೂರಿನ ನ್ಯಾಯಾಲಯ ಈಚೆಗೆ ಜಾಮೀನು ರಹಿತ ಬಂಧನ ವಾರೆಂಟ್ ಕೂಡ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.