ADVERTISEMENT

ಲಂಚದ ಆರೋಪ: ಮುಖ ಮುಚ್ಚಿಕೊಂಡು ಜೈಲಿಗೆ ಹೋದ ಕಿತ್ತೂರು ತಹಶೀಲ್ದಾರ್

ಮೂರು ದಿನ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 7:08 IST
Last Updated 26 ನವೆಂಬರ್ 2022, 7:08 IST
ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ
ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ   

ಬೆಳಗಾವಿ: ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಸಿಕ್ಕಿಬಿದ್ದ ಚನ್ನಮ್ಮನ ಕಿತ್ತೂರಿನ ತಹಶೀಲ್ದಾರ್ ಸೋಮಲಿಂಗ ಹಾಲಗಿ ಹಾಗೂ ಗುಮಾಸ್ತ ಜಿ.ಪ್ರಸನ್ನ ಅವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ಇಲ್ಲಿನ ಹಿಂಡಲಗಾ ಜೈಲಿಗೆ ತಂದು ಬಿಟ್ಟರು.

ಖೋದಾನಪುರ ರೈತ ರಾಜೇಂದ್ರ ಇನಾಮದಾರ ಅವರ ಜಮೀನು ಖಾತಾ ಮಾಡಲು ಆರೋಪಿಗಳು ₹5 ಲಕ್ಷ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ಶುಕ್ರವಾರ ರಾತ್ರಿ ₹2 ಲಕ್ಷ ಲಂಚ ತೆಗೆದುಕೊಳ್ಳುವ ವೇಳೆ ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸಿದರು.

ಆರೋಪಿಗಳನ್ನು ಶನಿವಾರ ಬೆಳಿಗ್ಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ADVERTISEMENT

ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು ಸೋಮವಾರ (ನ.28) ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಸೋಮವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಪೊಲೀಸ್ ವಾಹನದಲ್ಲಿ ಜೈಲಿಗೆ ಬಂದ ಇಬ್ಬರೂ ಆರೋಪಿಗಳು ಮಾಧ್ಯಮದವರನ್ನು ಕಂಡ ತಕ್ಷಣ ತಮ್ಮ ಬ್ಯಾಗುಗಳನ್ನು ಮುಖಕ್ಕೆ ಮುಚ್ಚಿಕೊಂಡು ಒಳಗೆ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.