ADVERTISEMENT

ಖಾನಾಪುರ: ಮಲಪ್ರಭೆಯ ರಭಸಕ್ಕೆ ಕೊಚ್ಚಿಹೋದ ಸೇತುವೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 16:06 IST
Last Updated 15 ಜೂನ್ 2025, 16:06 IST
ಖಾನಾಪುರ ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಭಾನುವಾರ ಮಲಪ್ರಭಾ ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ 
ಖಾನಾಪುರ ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಭಾನುವಾರ ಮಲಪ್ರಭಾ ನದಿಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ    

ಖಾನಾಪುರ: ತಾಲ್ಲೂಕಿನ ಕುಸಮಳಿ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ್ದ ತಾತ್ಕಾಲಿಕ ಸೇತುವೆ ಭಾನುವಾರ ಮಲಪ್ರಭಾ ನದಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.

ಜೂ.8ರಂದು ಇದೇ ಸೇತುವೆಯ ಪಕ್ಕದ ರಸ್ತೆಯಲ್ಲಿ ಭೂಕುಸಿತ ಉಂಟಾಗಿತ್ತು. ಅಲ್ಲದೇ ಕಳೆದ ಮೇ.25ರಂದು ಸೇತುವೆಯ ಮೇಲಿನ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಮಲಪ್ರಭಾ ನದಿಯಲ್ಲಿ ಪ್ರವಾಹ ಏರ್ಪಟ್ಟು ಸೇತುವೆಯ ಪಕ್ಕದಲ್ಲಿ ನೀರು ಹರಿದು ಹೋಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗಿನಿಂದಲೇ ಈ ಸೇತುವೆ ಮೇಲೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈಗ ಸೇತುವೆ ಕೊಚ್ಚಿಕೊಂಡು ಹೋಗಿದ್ದರಿಂದ ಮೋರನೇ ಬಾರಿ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

ಭಾನುವಾರ ಮುಂಜಾನೆಯಿಂದ ಈ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳು ಸಾಗುವುದನ್ನು ತಡೆಹಿಡಿಯಲಾಗಿದೆ. ಮಲಪ್ರಭಾ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನಗಳು ಸಂಚರಿಸಿದರೆ ಅಪಾಯ ಉಂಟಾಗುವ ಸಂಭವ ಇರುವ ಕಾರಣ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೇತುವೆ ಬಳಿ ಬ್ಯಾರಿಕೇಡ್ ಅಳವಡಿಸಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಕುಸಮಳಿ ಬಳಿ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದರಿಂದ ಬೆಳಗಾವಿ-ಚೋರ್ಲಾ ರಾಜ್ಯ ಹೆದ್ದಾರಿಯ ಮೂಲಕ ಸಂಚರಿಸುವ ವಾಹನಗಳಿಗೆ ಬೈಲೂರು ಕ್ರಾಸ್-ಬೈಲೂರು-ಹಬ್ಬನಹಟ್ಟಿ-ಜಾಂಬೋಟಿ ಮೂಲಕ ಸಾಗುವಂತೆ ಸೂಚಿಸಲಾಗಿದೆ. ಬೆಳಗಾವಿಯಿಂದ ಗೋವಾ ಕಡೆ ಸಾಗುವ ವಾಹನಗಳು ಖಾನಾಪುರ-ರಾಮನಗರ-ಅನಮೋಡ ಮಾರ್ಗವಾಗಿ ಸಾಗುವಂತೆ ಸೂಚಿಸಲಾಗಿದೆ ಎಂದು ತಾಲ್ಲೂಕು ಆಡಳತದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.