ADVERTISEMENT

ಕುರ್ಚಿ ಉಳಿಸಿಕೊಳ್ಳಲು ಸಿಎಂ ಶಾಸಕರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ:ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:37 IST
Last Updated 12 ಫೆಬ್ರುವರಿ 2026, 6:37 IST
<div class="paragraphs"><p>ವಿಜಯೇಂದ್ರ</p></div>

ವಿಜಯೇಂದ್ರ

   

– ಪ್ರಜಾವಾಣಿ ಚಿತ್ರಗಳು

ಬೆಳಗಾವಿ: ‘ತಮ್ಮ ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಕಾಂಗ್ರೆಸ್‌ ಶಾಸಕರಿಗೆ ಸಹ ಅನುದಾನ ಸಿಗುತ್ತಿಲ್ಲ. ಆದರೆ, ಮುಖ್ಯಮಂತ್ರಿ  ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿಕೊಳ್ಳಲು ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು. 

ADVERTISEMENT

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡುವಂತೆ ಕಾಂಗ್ರೆಸ್‌ನ ಶಾಸಕರು ಗೋಗರೆಯುತ್ತಿದ್ದಾರೆ. ಬಡವರಿಗೆ ಮನೆ ಕಟ್ಟಿಕೊಡಲು ಮತ್ತು ಗಂಗಾ ಕಲ್ಯಾಣ ಯೋಜನೆಗೆ ಅನುದಾನವಿಲ್ಲ. ಮೃತ ಕುರಿ, ಮೇಕೆಗಳಿಗೆ ಅನುಗ್ರಹ ಯೋಜನೆಯಡಿ ಹಣ ಕೊಟ್ಟಿಲ್ಲ. ಕುರ್ಚಿ ಉಳಿಸಿಕೊಳ್ಳುವ ಭರಾಟೆಯಲ್ಲಿ ಸಿ.ಎಂ ಅವರಿಗೆ ಯಾರೂ ಕಾಣುತ್ತಿಲ್ಲ. ಇಂಥ ಕೆಟ್ಟ ಸರ್ಕಾರವನ್ನು ರಾಜ್ಯದ ಇತಿಹಾಸದಲ್ಲೇ ನೋಡಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದಿನ ಎರಡು ತಿಂಗಳಲ್ಲಿ ಮೂರು ವರ್ಷ ಪೂರೈಸಲಿದೆ. ಆದರೆ, ರಾಜ್ಯವು ಅಭಿವೃದ್ಧಿ ಕಂಡಿಲ್ಲ. ಸರ್ಕಾರ ಭ್ರಷ್ಟಾಚಾರಕ್ಕೆ ಸೀಮಿತವಾಗಿದೆ. ಬಡವರು, ರೈತರು, ಹಿಂದುಳಿದ ಸಮುದಾಯದವರು ಮತ್ತು ಪರಿಶಿಷ್ಟ ವರ್ಗದವರು ನಿರಾಸೆಗೊಂಡಿದ್ದಾರೆ. ಸಿದ್ದರಾಮಯ್ಯ ಅಹಿಂದ ವರ್ಗಗಳ ಪ್ರತಿಪಾದಕ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದಾರೆ’ ಎಂದು ಆಪಾದಿಸಿದರು.

‘ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಅಲ್ಪಸಂಖ್ಯಾತರು ಪಡೆದ ಸಾಲಗಳ ಬಡ್ಡಿ ಮನ್ನಾ ಮಾಡಲಾಗಿದೆ. ಆದರೆ, ಇತರೆ ವರ್ಗದವರಿಗೆ ಈ ಅವಕಾಶ ಕಲ್ಪಿಸಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಿಂದುಳಿದ ವರ್ಗಗಳ 1.41 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆಯಲಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ಹೇಳಿದರು.

‘ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸರ್ಕಾರದ ಮಟ್ಟದಲ್ಲಿ ಸುಮಾರು 2.85 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದರೆ, ಹಿಂದುಳಿದ ಮತ್ತು ಪರಿಶಿಷ್ಟ ವರ್ಗಗಳ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗುತ್ತಿತ್ತು’ ಎಂದು ವಿಜಯೇಂದ್ರ ಹೇಳಿದರು.

ಫೆ.19ರಂದು ರಾಜ್ಯ ಕಾರ್ಯಕಾರಿಣಿ

‘ಫೆಬ್ರುವರಿ 19ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಸಂಘಟನೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಪರಿಷತ್‌ ಸದಸ್ಯ ಸ್ಥಾನ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳ ಕುರಿತು ಚರ್ಚೆಗಳು ನಡೆಯಲಿವೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ, ಹಿರಿಯ ಸಚಿವರು ಪಾಲ್ಗೊಳ್ಳುವರು’ ಎಂದು ಮಾಹಿತಿ ನೀಡಿದರು.

**

‘ನೀವು ಮೈಸೂರಿಗೆ ಸೀಮಿತ ಮುಖ್ಯಮಂತ್ರಿಯೇ?’

‘ರಾಜ್ಯದಲ್ಲಿ ಹಿಂದುಗಳ ತಾಲ್ಲೂಕುಗಳ ಸಂಖ್ಯೆ ಏರಿಕೆಯಾಗಿದೆ. ಈ ಬಗ್ಗೆ ಪ್ರೊ.ಗೋವಿಂದರಾವ್ ವರದಿಯಲ್ಲಿ ಉಲ್ಲೇಖವಾಗಿದೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಹಿಂದುಳಿದ ತಾಲ್ಲೂಕುಗಳು ಹೆಚ್ಚಿವೆ. ಹಾಗಾದರೆ ಮೈಸೂರಿಗೆ ಸೀಮಿತ ಮುಖ್ಯಮಂತ್ರಿಯೇ’ ಎಂದು ಪ್ರಶ್ನಿಸಿದ ವಿಜಯೇಂದ್ರ, ‘ಕೇವಲ ನುಡಿದಂತೆ ನಡೆದಿದ್ದೇವೆ ಎಂದು ಬೀಗಿದರೆ ಸಾಲದು. ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.