ADVERTISEMENT

ತಾಂತ್ರಿಕ ಕೌಶಲವೇ ಭವಿಷ್ಯಕ್ಕೆ ಬುನಾದಿ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’, ಕೆಐಎಎಂಎಸ್‌ ಸಹಯೋಗದಲ್ಲಿ ವೃತ್ತಿ ಮಾರ್ಗದರ್ಶನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 9:04 IST
Last Updated 30 ಜುಲೈ 2022, 9:04 IST
ಪ್ರಣವ್‌ ಕರಜಗಿಮಠ
ಪ್ರಣವ್‌ ಕರಜಗಿಮಠ   

ಬೆಳಗಾವಿ: ‘ಉದ್ಯಮ ವಲಯದಲ್ಲಿ ಈಗ ತಂತ್ರಜ್ಞಾನವೇ ಪ್ರಧಾನ. ಆಧುನಿಕ ತಾಂತ್ರಿಕ ಕೌಶಲ ಮೈಗೂಡಿಸಿಕೊಂಡರೆ ಮಾತ್ರ ಸಮರ್ಥ ಉದ್ಯೋಗ ಪಡೆಯಲು ಸಾಧ್ಯ’ ಎಂದು ಹರಿಹರದ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್ಡ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಹಾಗೂ ಕಿರ್ಲೋಸ್ಕರ್‌ ಚಿಲ್ಲರ್ಸ್‌ನ ನಿರ್ದೇಶಕ ಡಾ.ಬಿಪ್ಲಬ್‌ ಕುಮಾರ್‌ ಬಿಸ್ವಾಲ್‌ ಕಿವಿಮಾತು ಹೇಳಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಕೆಐಎಎಂಎಸ್‌ ಸಹಯೋಗದಲ್ಲಿ ಇಲ್ಲಿನ ಮಹಾವೀರ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಜ್ಞಾನಜ್ಯೋತಿ’ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

‘ಸದ್ಯ ‘ಇಂಡಸ್ಟ್ರಿ–4.0’ ಹಂತದಲ್ಲಿ ನಾವಿದ್ದೇವೆ. ಮುಂದಿನ ಎರಡು ದಶಕಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತೊಂದು ಸ್ತರಕ್ಕೆ ಹೋಗಲಿದೆ. ಈಗಿನಿಂದಲೇ ನೀವು ತಾಂತ್ರಿಕ ನೈಪುಣ್ಯ ಗಳಿಸಬೇಕು. ಇಲ್ಲದಿದ್ದರೆ ವಿಶ್ವವು ಮುಂದೆ ಹೋಗುತ್ತದೆ, ನೀವು ಹಿಂಬಾಲಕರಾಗುತ್ತೀರಿ’ ಎಂದರು.

ADVERTISEMENT

‘ತಾಂತ್ರಿಕವಾಗಿ ಯಾರು ಉತ್ತಮ ಜ್ಞಾನ ಹೊಂದಿದ್ದಾರೋ ಅವರು ಉತ್ತಮ ಭವಿಷ್ಯ ಕಟ್ಟಿಕೊಳ್ಳಬಲ್ಲರು. ತಾಂತ್ರಿಕ ಜ್ಞಾನ ಗೊತ್ತಿಲ್ಲದ ವೈದ್ಯ, ವೈದ್ಯಕೀಯ ಜ್ಞಾನವಿಲ್ಲದ ಎಂಜಿನಿಯರ್‌ ಇಬ್ಬರೂ ಸಮರ್ಥರಲ್ಲ. ನೀವು ಯಾವುದೇ ವೃತ್ತಿ ಆಯ್ದುಕೊಂಡರೂ ತಂತಜ್ಞಾನವೇ ಅದರ ಯಶಸ್ಸನ್ನು ನಿರ್ಧರಿಸುತ್ತದೆ’ ಎಂದು ವಿಶ್ಲೇಷಿಸಿದರು.

‘ಮತ್ತೊಬ್ಬರೊಂದಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ಬಗ್ಗೆ ನೀವೇ ಕೀಳರಿಮೆ ತಾಳಿದರೆ ಇನ್ನೊಬ್ಬರು ಭರವಸೆ ಇಟ್ಟುಕೊಳ್ಳಲು ಹೇಗೆ ಸಾಧ್ಯ? 1947ರಲ್ಲಿ ರೂಪಾಯಿ ಹಾಗೂ ಪೌಂಡ್‌ನ ಮೌಲ್ಯ ಸಮನಾಗಿತ್ತು. ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ 1 ಪೌಂಡ್‌ 102 ರೂಪಾಯಿಗೆ ಸಮವಾಗಿದೆ. ನಾವು ಔದ್ಯಮಿಕ ವಲಯದಲ್ಲಿ ಬೆಳೆಯದಿರುವುದೇ ಇದಕ್ಕೆ ಕಾರಣ’ ಎಂದೂ ಹೇಳಿದರು.

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ನ ಜಾಹೀರಾತು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿವಾಕರ ಭಟ್, ಹಿರಿಯ ವ್ಯವಸ್ಥಾಪಕ ಪ್ರಮೋದ ಭಾಗವತ, ವ್ಯವಸ್ಥಾಪಕ ಕಿರಣ ಕಿರದತ್‌, ಪ್ರಸಾರಾಂಗದ ಪ್ರಾದೇಶಿಕ ವ್ಯವಸ್ಥಾಪಕ ರವಿ ಹೆಗಡೆ, ಡೆಕ್ಕನ್‌ ಹೆರಾಲ್ಡ್‌ನ ಹಿರಿಯ ವರದಿಗಾರ ರಾಜು ಗವಳಿ, ಪ್ರಜಾವಾಣಿ ಜಿಲ್ಲಾ ವರದಿಗಾರರಾದ ಸಂತೋಷ ಈ. ಚಿನಗುಡಿ ಹಾಗೂ ಇಮಾಮ್‌ಹುಸೇನ್‌ ಗೂಡುನವರ ಇದ್ದರು.
ಡೆಕ್ಕನ್‌ ಹೆರಾಲ್ಡ್ ವರದಿಗಾರ್ತಿ ಶಾಹಿನ್‌ ಮೊಕಾಶಿ ಕಾರ್ಯಕ್ರಮ ನಿರೂಪಿಸಿದರು.

*

‘ವಿಭಿನ್ನ ಆಲೋಚನೆ ಅಗತ್ಯ’

‘ಆಧುನಿಕ ಪ್ರಪಂಚದಲ್ಲಿ ಅಪಾರ ಅವಕಾಶಗಳಿವೆ. ಆದರೆ, ಯಾರು ವಿಭಿನ್ನವಾಗಿ ಆಲೋಚನೆ ಮಾಡಿ, ಮೈಗೂಡಿಸಿ ಕೊಳ್ಳುತ್ತಾರೋ ಅವರು ಯಶಸ್ವಿಯಾಗು ತ್ತಾರೆ’ ಎಂದು ಕೆಐಎಎಂಎಸ್‌ನ ಸಹಾಯಕ ಪ್ರಾಧ್ಯಾಪಕ ಹಾಗೂ ಕಾರ್ಪೊರೇಟ್‌ ರಿಲೇಷನ್ಸ್‌ ಆ್ಯಂಡ್‌ ಪ್ಲೇಸ್‌ಮೆಂಟ್ಸ್‌ ವಿಭಾಗದ ಡೀನ್‌ ಡಾ.ಅರ್ಥರ್‌ ಫರ್ನಾಂಡೀಸ್‌ ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ‘ಈಗ ನಾವು ಅರಸುತ್ತಿರುವ ಕೆಲಸಗಳನ್ನು ಮುಂದಿನ ದಿನಗಳಲ್ಲಿ ಯಂತ್ರಗಳೇ ಮಾಡುತ್ತವೆ. ಆಗ ನಾವು ನಿರುದ್ಯೋಗಿ ಆಗಬಹುದು. ಹಾಗಾಗಿ, ಯಾರೂ ಇಡಲಾಗದ ವಿಶಿಷ್ಟ ಹೆಜ್ಜೆ ನಾನು ಇಡುತ್ತೇನೆ ಎಂಬ ಭರವಸೆಯಿಂದ ಮುನ್ನಡೆಯಿರಿ’ ಎಂದರು.

*

ವಿದ್ಯಾರ್ಥಿಗಳ ಮಾತು

ಗೊಂದಲಗಳ ನಿವಾರಣೆ

ನಾನು ಸಿವಿಲ್‌ ಎಂಜಿನಿಯರ್‌ ಆಗಬೇಕೆನ್ನುವ ಕನಸು ಕಂಡಿದ್ದೇನೆ. ನನ್ನ ವೃತ್ತಿಗೆ ಪೂರಕವಾಗಿ ಬಹಳಷ್ಟು ವಿಷಯಗಳನ್ನು ಈ ಕಾರ್ಯಕ್ರಮದಲ್ಲಿ ಹೇಳಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳು ಕೆಲ ಗೊಂದಲ ಬಗೆಹರಿಸಿದರು.

–ಉಮರ್‌ ಬಿಜಾಪುರ

ಸಂವಹನ ಕೌಶಲದ ಅರಿವು

ನಮ್ಮ ಯಾವುದೇ ವೃತ್ತಿಯಲ್ಲಿ ಸಂವಹನ ಕೌಶಲ ಮುಖ್ಯ ಪಾತ್ರ ವಹಿಸುತ್ತದೆ. ಅದನ್ನು ಬೆಳೆಸಿಕೊಳ್ಳುವ ಬಗೆ, ವ್ಯಕ್ತಿತ್ವ ವಿಕಸನಕ್ಕೆ ಅನುಸರಿಸಬೇಕಿರುವ ಕ್ರಮಗಳು ಮತ್ತಿತರ ಸಂಗತಿಗಳನ್ನು ಇಲ್ಲಿ ಅರಿತುಕೊಂಡೆ.

–ಪ್ರಣವ್‌ ಕರಜಗಿಮಠ

ಸಮಗ್ರ ಮಾಹಿತಿ ಲಭ್ಯ

ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡುವ ಜೊತೆಗೆ ವೃತ್ತಿಗೆ ಸಂಬಂಧಿಸಿದ ಹಲವು ಗೊಂದಲ ಬಗೆಹರಿಸಿಕೊಳ್ಳಲು ನೆರವಾಗಿ, ಪ್ರೇರಣೆ ತುಂಬಿತು.

–ಪ್ರಾಜಕ್ತಾ ವರಾಳೆ

ತಂತ್ರಜ್ಞಾನ ಬಳಕೆಗೆ ಮಾರ್ಗದರ್ಶನ

ತಂತ್ರಜ್ಞಾನ ಹೇಗೆ ಬಳಸಿಕೊಳ್ಳಬೇಕು ಎನ್ನುವುದಕ್ಕೆ ಈ ಕಾರ್ಯಕ್ರಮ ಮಾರ್ಗದರ್ಶನ ನೀಡಿತು. ಈಗಿನಿಂದಲೇ ವೃತ್ತಿಕೌಶಲ ಬೆಳೆಸಿಕೊಳ್ಳುವತ್ತ ಗಮನ ಹರಿಸಬೇಕು ಎಂಬುದ ಅರಿತೆ.

–ವೈಷ್ಣವಿ ಪಾಟೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.