ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಉಪಾಧ್ಯಕ್ಷರಾಗಿ ಶಿವನಗೌಡ ಪಾಟೀಲ ಗುರುವಾರ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ಹಟ್ಟಿಹೊಳಿ, ರೈತರ ಮತ್ತು ಕಾರ್ಖಾನೆ ಅಭಿವೃದ್ಧಿಯೇ ನಮ್ಮ ಗುರಿ. ಕಾರ್ಖಾನೆ ಪುನಶ್ಚೇತನ ಭರವಸೆ ನೀಡಿ ಗೆದ್ದು ಬಂದಿದ್ದೇವೆ. ಕೊಟ್ಟ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ. ಪ್ರಸಕ್ತ ಹಂಗಾಮಿನಲ್ಲಿ 4 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಬೇಕಿದ್ದು, ಅದಕ್ಕಾಗಿ ಈಗಾಗಲೇ 250 ಕಬ್ಬು ಕಟಾವು ತಂಡಗಳನ್ನು ಕಾಯ್ದಿರಿಸಿದ್ದೇವೆ. ಕಾರ್ಖಾನೆ ಆರಂಭಕ್ಕೆ ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದು, ದೀಪಾವಳಿಗೆ ಕಾರ್ಖಾನೆ ಹಂಗಾಮು ಆರಂಭಿಸುತ್ತೇವೆ ಎಂದರು.
ಕಾರ್ಖಾನೆ ಹಳೆಯದ್ದಾಗಿರುವುದರಿಂದ ಸಾಕಷ್ಟು ಸವಾಲುಗಳಿವೆ. ಸರ್ಕಾರದ ಸಹಾಯ, ಸಹಕಾರ ಪಡೆದು ಪುನಶ್ಚೇತನಗೊಳಿಸಲಾಗುವುದು. ಕೊಟ್ಟ ಭರವಸೆಯಂತೆ ಕಾರ್ಖಾನೆಯನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಕಾರ್ಖಾನೆಯ ಸದಸ್ಯರೆಲ್ಲರೂ ಪುನಃಚೇತನ ಬಣದ ಮೇಲೆ ನಂಬಿಕೆಯಿಟ್ಟು ಬಣದ ಎಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಆಡಳಿತ ಮಂಡಳಿ ಉತ್ತಮ ಆಡಳಿತ ನಡೆಸಲಿದೆ ಎಂದರು.
ಚುನಾವಣಾಧಿಕಾರಿಯಾಗಿ ಪ್ರಭಾವತಿ ಫಕ್ಕೀರಪುರ ಕಾರ್ಯನಿರ್ವಹಿಸಿದರು. ಕಾರ್ಖಾನೆ ಉಪಾಧ್ಯಕ್ಷ ಶಿವನಗೌಡ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಮೋಹನ ಹಿರೇಮಠ ಮಾತನಾಡಿದರು. ನಿರ್ದೇಶಕರಾದ ಫಕ್ಕೀರಪ್ಪ ಸಕ್ರೆಣ್ಣವರ, ಶಂಕರೆಪ್ಪ ಹೊಳಿ, ಶ್ರೀಕಾಂತ ಇಟಗಿ, ಶಂಕರ ಕಿಲ್ಲೇದಾರ, ಶ್ರೀಶೈಲ ತುರಮರಿ, ರಾಮನಗೌಡ ಪಾಟೀಲ, ರಘು ಪಾಟೀಲ, ಶಿವಪುತ್ರಪ್ಪ ಮರಡಿ, ಸುರೇಶ ಹುಲಿಕಟ್ಟಿ, ಲಲಿತಾ ಪಾಟೀಲ, ಸುನೀತಾ ಲಂಗೋಟಿ, ಬಳಪ್ಪ ಪೂಜಾರ, ಭರಮಪ್ಪ ಶಿಗೆಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.