ADVERTISEMENT

ಬೆಳಗಾವಿ: ರಾಯಣ್ಣ ಪ್ರತಿಮೆ ಸ್ಥಳಕ್ಕೆ ‘ಶಿವಾಜಿ ವೃತ್ತ’ ಫಲಕ

ಕನ್ನಡ ಕಡೆಗಣನೆ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 13:02 IST
Last Updated 3 ಸೆಪ್ಟೆಂಬರ್ 2020, 13:02 IST
ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಳದಲ್ಲಿ ಶಿವಾಜಿ ವೃತ್ತವೆಂದು ಗುರುವಾರ ಫಲಕ ಹಾಕಲಾಗಿದೆ
ಬೆಳಗಾವಿಯ ಪೀರನವಾಡಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಳದಲ್ಲಿ ಶಿವಾಜಿ ವೃತ್ತವೆಂದು ಗುರುವಾರ ಫಲಕ ಹಾಕಲಾಗಿದೆ   

ಬೆಳಗಾವಿ: ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ಕನ್ನಡ ಪರ ಹೋರಾಟಗಾರರು ಈಚೆಗೆ ಪ್ರತಿಷ್ಠಾಪಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಳದಲ್ಲಿ ಅಲ್ಲಿನ ಮರಾಠಿ ಭಾಷಿಗ ನಿವಾಸಿಗಳು ‘ಛತ್ರಪತಿ ಶಿವಾಜಿ ಮಹಾರಾಜ್ ಚೌಕ, ಪೀರನವಾಡಿ (ಚಿನ್ನಪಟ್ಟಣ)’ ಎಂಬ ಫಲಕವನ್ನು ಗುರುವಾರ ಸಂಭ್ರಮದಿಂದ ಅನಾವರಣಗೊಳಿಸಿದರು.

ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಮರ್‌ಕುಮಾರ್‌ ಪಾಂಡೆ ಹಾಗೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧ್ಯಕ್ಷತೆಯಲ್ಲಿ ಗ್ರಾಮಸ್ಥರು ಹಾಗೂ ಹೋರಾಟಗಾರರೊಂದಿಗೆ ನಡೆದಿದ್ದ ಸಂಧಾನ ಸಭೆಯಲ್ಲಿ ಆಗಿದ್ದ ಒಪ್ಪಂದದಂತೆ, ಮರಾಠಿ ಭಾಷಿಗ ಮುಖಂಡರು ಫಲಕ ಅಳವಡಿಸಿದ್ದಾರೆ. ಮರಾಠಿ ಹಾಗೂ ಕನ್ನಡ (2ನೇ ಸಾಲಿನಲ್ಲಿ) ಎರಡು ಭಾಷೆಯನ್ನೂ ಬಳಸಲಾಗಿದೆ.

ನೂರಾರು ಶಿವಾಜಿ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿ ಸಂಭ್ರಮ ಆಚರಿಸಿದರು. ರಾಯಣ್ಣ ಹಾಗೂ ಶಿವಾಜಿ ಪ್ರತಿಮೆಗಳಿಗೆ ಮಾಲಾರ್ಪಣೆ ನೆರವೇರಿಸಿದರು.

ADVERTISEMENT

ಸಂಧಾನ ಸಭೆಯ ನಿರ್ಣಯದಂತೆ ಪ್ರತಿಮೆಗಳಿರುವ ಸ್ಥಳದಲ್ಲಿ ಒಂದೊಂದು ಭಾವುಟವನ್ನು ಮಾತ್ರವೇ ಉಳಿಸಲಾಯಿತು. ರಾಯಣ್ಣ ಪ್ರತಿಮೆ ಸ್ಥಳದಲ್ಲಿ ಕನ್ನಡ ಧ್ವಜ ಮತ್ತು ಶಿವಾಜಿ ಪ್ರತಿಮೆ ಬಳಿ ಭಗವಾಧ್ವಜ ಹಾಕಲಾಯಿತು. ಇತರ ಧ್ವಜಗಳನ್ನು ತೆರವುಗೊಳಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ರಮೇಶ ಗೋರಲ, ಸ್ಥಳೀಯ ಮುಖಂಡರಾದ ಜ್ಯೋತಿಬಾ ಲೋಹಾರ, ಸುಶಾಂತ್‌, ನಾರಾಯಣ ಇದ್ದರು.

ಕರವೇ ಆಕ್ಷೇಪ:

‘ಫಲಕದಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ. ಮರಾಠಿ ಭಾಷೆಗೆ ಪ್ರಾಧಾನ್ಯತೆ ನೀಡಿ ಕನ್ನಡವನ್ನು ಅವಮಾನಿಸಿದ್ದಾರೆ. ಎಂಇಎಸ್‌ (ಮಹಾರಾಷ್ಟ್ರ ಏಕೀಕರಣ ಸಮಿತಿ)ನವರ ಕೃತ್ಯ ಇದಾಗಿದೆ. ಇದನ್ನು ನಾವು ಸಹಿಸುವುದಿಲ್ಲ. ಜಿಲ್ಲಾಡಳಿತ ತಕ್ಷಣವೇ ಆ ಫಲಕವನ್ನು ತೆರವುಗೊಳಿಸಬೇಕು. ವೃತ್ತಕ್ಕೆ ಶಿವಾಜಿ ಮಹಾರಾಜರ ಹೆಸರಿಡಲು ನಮ್ಮ ವಿರೋಧವಿಲ್ಲ. ಆದರೆ, ಸರ್ಕಾರದ ಆದೇಶದಂತೆ ಫಲಕದಲ್ಲಿ ಕನ್ನಡಕ್ಕೆ ಶೇ 80ರಷ್ಟು ಆದ್ಯತೆ ನೀಡಬೇಕು. ಈ ಕಾರ್ಯಕ್ರಮ ಜಿಲ್ಲಾಡಳಿತದಿಂದ ಅಧಿಕೃತವಾಗಿ ನಡೆಯಬೇಕು’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.