ADVERTISEMENT

ಸವದತ್ತಿ: ಶಿಂದೋಗಿ ಅರಣ್ಯದಲ್ಲಿ ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 12:23 IST
Last Updated 23 ಜುಲೈ 2022, 12:23 IST
ಸವದತ್ತಿ ತಾಲ್ಲೂಕಿನ ಸಿಂದೋಗಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಚಿರತೆ ಶವ
ಸವದತ್ತಿ ತಾಲ್ಲೂಕಿನ ಸಿಂದೋಗಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಚಿರತೆ ಶವ   

ಸವದತ್ತಿ: ತಾಲ್ಲೂಕಿನ ಶಿಂದೋಗಿ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆ ಶವ ಶುಕ್ರವಾರ ಪತ್ತೆಯಾಗಿದೆ. ಈ ಅರಣ್ಯದಲ್ಲಿ ಚಿರತೆ ಪತ್ತೆಯಾಗಿದ್ದು ಇದೇ ಮೊದಲು ಎಂದು ವಲಯ ಅರಣ್ಯಾಧಿಕಾರಿ ಶಂಕರ ಅಂತರಗಟ್ಟಿ ಮಾಹಿತಿ ನೀಡಿದ್ದಾರೆ.

ತಂತಿ ಬೇಲಿಗೆ ಸಿಕ್ಕುಕೊಂಡು ಚಿರತೆ ಸತ್ತಿರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ನಾಲ್ಕು ದಿನಗಳ ಹಿಂದೆಯೇ ಸತ್ತಿದ್ದರಿಂದ ದೇಹ ಕೊಳೆತಿದೆ. ಕಳೇಬರವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಮರಣೋತ್ತರ ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಚಿರತೆಯು ನರಗುಂದ, ನವಲಗುಂದ ಅರಣ್ಯ ಪ್ರದೇಶ ಭಾಗದಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಆ ಭಾಗದಲ್ಲಿ ಚಿರತೆಯೊಂದು ಆಗಾಗ ಕಾಣಿಸಿಕೊಳ್ಳುತ್ತಿರುವುದಾಗಿ ಜನ ಹೇಳಿದ್ದರು. ಸತ್ತಿರುವುದು ಅದೇ ಚಿರತೆಯೋ ಬೇರೆಯದ್ದೋ ಎಂದು ಗೊತ್ತು ಮಾಡಿಕೊಳ್ಳಬೇಕಿದೆ.

ADVERTISEMENT

ಈ ಭಾಗದಲ್ಲಿರುವ 13 ಸಾವಿರ ಹೆಕ್ಟೆರ್ ಅರಣ್ಯ ಪ್ರದೇಶದಲ್ಲಿ ಕತ್ತೆ ಕಿರುಬ, ತೋಳ, ನರಿ, ಗುಳ್ಳೆನರಿ, ಕಾಡು ಹಂದಿ, ಚಿಪ್ಪು ಹಂದಿಗಳ ಚಲನವಲನ ಹೆಚ್ಚು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಕೂಡ ಹಲವು ವನ್ಯಮೃಗಗಳು ಸೆರೆ ಸಿಕ್ಕಿವೆ. ಆದರೆ ಚಿರತೆ ಎಂದೂ ಕಂಡಿಲ್ಲ.

ಚಿರತೆ ಕಾಣಿಸಿಕೊಂಡ ಶಂಕೆ: ಶೋಧ ಆರಂಭ

ಚಿಕ್ಕೋಡಿ ತಾಲ್ಲೂಕಿನ ಚಂದೂರ ಟೇಕ್ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಪ್ರದೇಶದಲ್ಲಿ ಚಿಕ್ಕೋಡಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಗೌರಾಣಿ ನೇತೃತ್ವದಲ್ಲಿ ಸಿಬ್ಬಂದಿ ಶೋಧ ನಡೆಸಿದರು

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಚಂದೂರಟೇಕ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ತಡರಾತ್ರಿ ಚಿರತೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದರಿಂದ ಶನಿವಾರ ಬೆಳಿಗ್ಗೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದಾರೆ.

ತಾಲ್ಲೂಕಿನ ಯಡೂರ, ಚಂದೂರ,ಯಡೂರವಾಡಿ, ಚಂದೂರಟೇಕ ಗ್ರಾಮಗಳಲ್ಲಿ ಕಳೆದ ಎರಡು ವಾರಗಳಿಂದ ಚಿರತೆಯೊಂದು ಓಡಾಡುತ್ತಿದೆ ಎಂದು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿತ್ತು. ಶುಕ್ರವಾರ ರಾತ್ರಿ ಚಂದೂರಟೇಕ ಗ್ರಾಮದ ಕೆಲ ಯುವಕರು ಕಾರಿನಲ್ಲಿ ಹೊರಟಾಗ ಚಿರತೆ ರಸ್ತೆ ಅಡ್ಡ ದಾಟಿದೆ. ಇದನ್ನು ಕಂಡು ಯುವಕರು ಮೊಬೈಲ್‌ನಲ್ಲಿ ವಿಡಿಯೊ ಮಾಡಲು ಮುಂದಾದರು. ಅಷ್ಟರಲ್ಲಿ ಚಿರತೆ ಕತ್ತಲಲ್ಲಿ ಮರೆಯಾಯಿತು ಎಂದು ಯುವಕರು ಮಾಹಿತಿ ನೀಡಿದರು.

ಸುದ್ದಿ ತಿಳಿದ ಇಲ್ಲಿನ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಗೌರಾಣಿ ತಮ್ಮ ಸಿಬ್ಬಂದಿಯೊಂದಿಗೆ ಈ ಪರಿಸರದಲ್ಲಿ ಶೋಧ ನಡೆಸಿದ್ದಾರೆ.

‘ಚಿರತೆ ಓಡಾಡುತ್ತಿದೆ ಎನ್ನಲಾದ ಪ್ರದೇಶದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ, ಇದುವರೆಗೂ ಪತ್ತೆಯಾಗಿಲ್ಲ. ಚಂದೂರಟೇಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಜನ ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಪ್ರಶಾಂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.