ADVERTISEMENT

ಕಿತ್ತೂರು ಉತ್ಸವ: ಮೌಢ್ಯ ನಿವಾರಣೆಗೆ ಮುಂದಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 7:29 IST
Last Updated 22 ಅಕ್ಟೋಬರ್ 2021, 7:29 IST

ಚನ್ನಮ್ಮನ ಕಿತ್ತೂರು (ಬೆಳಗಾವಿ): 1997ರಲ್ಲಿ ಸರ್ಕಾರದ ವತಿಯಿಂದ ನಡೆದ ಕಿತ್ತೂರು ಉತ್ಸವಕ್ಕೆ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಚಾಲನೆ ನೀಡಿದ್ದರು. ಕಾಕತಾಳೀಯ ಎನ್ನುವಂತೆ ಉತ್ಸವದ ಬೆಳ್ಳಿಹಬ್ಬವನ್ನೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.23ರ ಸಂಜೆ 7ಕಕೆ ಇಲ್ಲಿನ ಕೋಟೆ ಆವರಣದಲ್ಲಿ ಉದ್ಘಾಟಿಸಲಿದ್ದಾರೆ.

1997ರಲ್ಲೂ ಎರಡು ದಿನ ಉತ್ಸವ ನಡೆದಿತ್ತು ಎನ್ನುವುದನ್ನು ಇಲ್ಲಿಯ ಸಾರ್ವಜನಿಕರು ನೆನಪಿಸುತ್ತಾರೆ.

1997ರ ಅ. 23 ಮತ್ತು 24ರಂದು ಉತ್ಸವ ನಿಗದಿಯಾಗಿತ್ತು. ಅಂದು ಸ್ವಲ್ಪ ದಿನಗಳ ಮುಂಚೆ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ನಿಧನದಿಂದಾಗಿ ಮುಂದಕ್ಕೆ ಹೋಗಿತ್ತು. ಡಿಸೆಂಬರ್ ತಿಂಗಳಲ್ಲಿ ಉತ್ಸವ ಆಚರಣೆ ಮಾಡಲಾಗಿತ್ತು ಎಂದು ತಿಳಿಸುತ್ತಾರೆ.

ADVERTISEMENT

2012ರಲ್ಲಿ ಅ.25ರಂದು ಉತ್ಸವದ ಸಮಾರೋಪ ಸಮಾರಂಭಕ್ಕೆ ಅಂದಿನ ಮುಖ್ಯಮಂತ್ರಿ ಆಗಿದ್ದ ಜಗದೀಶ ಶೆಟ್ಟರ ಅವರನ್ನು ಕರೆತರುವಲ್ಲಿ ಅಂದಿನ ಶಾಸಕ ಸುರೇಶ ಮಾರಿಹಾಳ ಯಶಸ್ವಿಯಾಗಿದ್ದರು. ನೂತನ ಕಿತ್ತೂರು ತಾಲ್ಲೂಕು ಇದೇ ಉತ್ಸವದ ವೇದಿಕೆಯಲ್ಲಿ ಘೋಷಣೆಯಾಗಿತ್ತು.

‘ಜೆ.ಎಚ್. ಪಟೇಲರ ನಂತರ, ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿ ಆಗಮಿಸಬೇಕು ಎಂಬ ಬೇಡಿಕೆಯಿದ್ದರೂ ಇದಕ್ಕೆ ಯಾರೂ ಸ್ಪಂದಿಸಿರಲಿಲ್ಲ. ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರುವ ಧೈರ್ಯ ತೋರಿರುವುದು ಅವರ ಮೇಲೆ ಅಭಿಮಾನ ಹೆಚ್ಚಾಗುವಂತೆ ಮಾಡಿದೆ’ ಎಂದು ಇಲ್ಲಿನ ನಾಗರಿಕ ಸಂಜೀವ ಪಾಟೀಲ ಹೇಳುತ್ತಾರೆ.

ಉದ್ಘಾಟನೆಗೆ ಬರುವ ಮೂಲಕ ಮುಖ್ಯಮಂತ್ರಿಯು ಉತ್ಸವದ ಬಗೆಗಿನ ಮೌಢ್ಯ ಹೋಗಲಾಡಿಸಲು ಮುಂದಾಗಿದ್ದಾರೆ.

‘ಕಿತ್ತೂರಿಗೆ ಬಂದರೆ ಸಿ.ಎಂ. ಸ್ಥಾನ ಹೋಗುತ್ತಾ?’

‘ಮುಖ್ಯಮಂತ್ರಿಯಾದವರು ಕಿತ್ತೂರಿಗೆ ಬಂದರೆ ಸಿ.ಎಂ. ಪಟ್ಟ ಹೋಗುತ್ತಾ ಬ್ರದರ್...’ ಎಂದು ಅಂದಿನ ಶಾಸಕ ಸುರೇಶ ಮಾರಿಹಾಳ ಅವರನ್ನು ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದರು’ ಎನ್ನುವುದನ್ನು ಇಲ್ಲಿನ ಜನರು ನೆನಪಿಟ್ಟುಕೊಂಡಿದ್ದಾರೆ.

‘ಮುಖ್ಯಮಂತ್ರಿ ಆದವರು ಕಿತ್ತೂರಿಗೆ ಬರಲು ಹಿಂಜರಿಯುವ ಪ್ರಸಂಗಗಳು ಅನೇಕ ನಡೆದಿವೆ. ಬಿ.ಎಸ್. ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅ.23ರಂದೇ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೊರಟಿದ್ದರು. ಆದರೆ, ಅವರು ಹೆದ್ದಾರಿ ಬದಿಗಿರುವ ರಾಣಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋದರು. ಸಂಜೆ ಉತ್ಸವಕ್ಕೆ ಬಂದಿರಲಿಲ್ಲ’ ಎಂದು ತಿಳಿಸುತ್ತಾರೆ ಸ್ಥಳೀಯರು.

‘ಮಂತ್ರಿಪಟ್ಟ ಸಿಗದಿದ್ದಾಗ ಮತ್ತು ಸಿಗಬೇಕೆಂದಾಗ ‘ನಾವು ರಾಣಿ ಚನ್ನಮ್ಮ ನಾಡಿನವರು’ ಎಂದು ಘರ್ಜಿಸುತ್ತಾರೆ. ಕೆಲವು ದಿನಗಳ ಹಿಂದೆ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇಲ್ಲಿ ನಿರ್ಮಿಸಲಾಗಿದ್ದ ಪೊಲೀಸ್ ವಸತಿ ಸಮುಚ್ಛಯ ಉದ್ಘಾಟನೆ ಬಂದಿದ್ದರು. ಬಳಿಕ ಅವರು ಮುಖ್ಯಮಂತ್ರಿಯಾದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಗಮಿಸಿದ್ದ ನರೇಂದ್ರ ಮೋದಿ ಈಗ ನಂತರ ಪ್ರಧಾನಿಯಾದರು. ಎಚ್‌.ಡಿ. ದೇವೇಗೌಡ ಅವರು ಇಲ್ಲಿಗೆ ಬಂದು ಹೋದ ನಂತರವೇ ಪ್ರಧಾನಿಯಾದರು. ಈ ಸಂಗತಿಯನ್ನು, ಕಿತ್ತೂರಿನ ಬಗ್ಗೆ ಅಪಪ್ರಚಾರ ಮಾಡುವವರು ಅಥವಾ ಮೌಢ ಬಿತ್ತುವವರು ತಿಳಿದುಕೊಳ್ಳಬೇಕು’ ಎಂದು ಇಲ್ಲಿನ ನಿವಾಸಿ ಶಿವು ನಿಂಗಣ್ಣವರ ಖಾರವಾಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.