
ಚಿಕ್ಕೋಡಿ: ‘ಪ್ರಶಸ್ತಿಗಳು ಸಮಾಜ ಸೇವೆಗೆ ಪ್ರೇರಣೆಯಾಗುತ್ತವೆ. ಕಾಲು ಎಳೆಯುವ ಜನರ ನಡುವೆ ದಿಟ್ಟತನದಿಂದ ಬೆಳೆದರೆ ಇಂತಹ ಪ್ರಶಸ್ತಿಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ’ ಎಂದು ಚಿಂಚಣಿಯ ಅಲ್ಲಮಪ್ರಭು ಸಿದ್ದಸಂಸ್ಥಾನ ಮಠದ ಶಿವಪ್ರಸಾದ ದೇವರು ಹೇಳಿದರು.
ತಾಲ್ಲೂಕಿನ ಚಿಂಚಣಿ ಗ್ರಾಮದಲ್ಲಿ 2025ನೇ ವರ್ಷದ ರಾಷ್ಟ್ರೀಯ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಅಪ್ಪಾಸಾಹೇಬ ಚೌಗಲಾ ಅವರನ್ನು ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸತ್ಕರಿಸಿ, ಪೂರ್ವಿ ಗಣೇಶ ಫೌಂಡೇಷನ್ ಉದ್ಘಾಟಿಸಿ ಮಾತನಾಡಿ, ‘ಸಮಾಜಸೇವೆ ಮಾಡುವ ಮೂಲಕ ಭಗವಂತ ಕೊಟ್ಟ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಕಷ್ಟದಲ್ಲಿ ಸಹಕಾರಿಯಾಗಿ ಬಾಳುವ ಗುಣವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು’ ಎಂದರು.
ಚಿಂಚಣಿ ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಹೇಬ ಚೌಗಲಾ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಯಾವುದೇ ವ್ಯಕ್ತಿಯು ತಾನೊಬ್ಬನೇ ಏಕಾಂಗಿಯಾಗಿ ಬೆಳೆಯಲು ಸಾಧ್ಯವಿಲ್ಲ. ಸಮಾಜದ ನೋವು, ನಮ್ಮ ನೋವೆಂದು ತಿಳಿದು ಎಲ್ಲರೊಡಗೂಡಿ ಬೆಳೆಯಬೇಕು’ ಎಂದು ತಿಳಿಸಿದರು.
ಮುಖಂಡ ಕಲ್ಲಪ್ಪ ಚೌಗಲಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ ಅಪ್ಪಾಜಿಗೋಳ, ಪವನ ಮಹಾಜನ, ಅಣ್ಣಾಸಾಹೇಬ ಮಗದುಮ್ಮ, ತಾತ್ಯಾಸಾಹೇಬ ನಿಲಜಗಿ, ವಿಮಲಾ ಚಿನಕೇಕರ, ಬಿ.ಎ.ತಳವಾರ, ಎಸ್.ಎಲ್.ಕಾಮನೆ, ಸಂಜು ಪಾಟೀಲ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.