ADVERTISEMENT

ಭಂಡಾರದ ಹೊಳೆಯಲ್ಲಿ ಮಿಂದೆದ್ದ ಜನ

ಕೇರೂರಿನ ಅರಣ್ಯಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 9:45 IST
Last Updated 27 ಫೆಬ್ರುವರಿ 2026, 9:45 IST
ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಅರಣ್ಯ ಸಿದ್ದೇಶ್ವರ, ಮಲಕಾರಿ ಸಿದ್ದೇಶ್ವರ ಜಾತ್ರೆಯ ಕೊನೆ ದಿನದ ಅಂಗವಾಗಿ ಗುರುವಾರ ನಡೆದ ನಿವ್ವಾಳಕಿಯಲ್ಲಿ ಭಕ್ತರು ಭಂಡಾರದ ಓಕುಳಿಯಲ್ಲಿ ಮಿಂದೆದ್ದರು
ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಅರಣ್ಯ ಸಿದ್ದೇಶ್ವರ, ಮಲಕಾರಿ ಸಿದ್ದೇಶ್ವರ ಜಾತ್ರೆಯ ಕೊನೆ ದಿನದ ಅಂಗವಾಗಿ ಗುರುವಾರ ನಡೆದ ನಿವ್ವಾಳಕಿಯಲ್ಲಿ ಭಕ್ತರು ಭಂಡಾರದ ಓಕುಳಿಯಲ್ಲಿ ಮಿಂದೆದ್ದರು   

ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮ ಗುರುವಾರ ಅಕ್ಷರಶಃ ಭಂಡಾರದ ಓಕುಳಿಯಲ್ಲಿ ಮಿಂದೆದ್ದಿತು. ಎಲ್ಲಿ ನೋಡಿದರೂ, ಎತ್ತ ನೋಡಿದರೂ ಭಂಡಾರವೇ ಕಾಣಿಸಿತು. ಜಾತ್ರೆಯಲ್ಲಿ ಸೇರಿದ ಎಲ್ಲ ಬಟ್ಟೆಗಳ ಬಣ್ಣವೂ ಬಂಗಾರದಂತೆ ಹೊಳೆದವು. ಊರಿನ ಪ್ರತಿ ಓಣಿಗಳಲ್ಲೂ ಭಂಡಾರದ್ದೇ ರಂಗೋಲಿ.

ಕೇರೂರಿನ ಅರಣ್ಯಸಿದ್ದೇಶ್ವರ ಹಾಗೂ ಮಲಕಾರಿ ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಟನ್ನುಗಟ್ಟಲೇ ಭಂಡಾರ ತೂರುವ ಮೂಲಕ ಜಾತ್ರೆ ಸಂಪನ್ನಗೊಂಡಿತು.

‘ಹಂಡ ಕುದರಿ ಪುಂಡ ಅರಣ್ಯಸಿದ್ದಗ ಜಾಂಗ್ ಬಲೋ... ಬಿಳಿಗುಡಿ ಅರಣ್ಯಸಿದ್ಧಗ ಚಾಂಗ್ ಬಲೋ...’ ಎಂಬ ಉದ್ಘೋಷದೊಂದಿಗೆ ಜಾತ್ರೆಗೆ ಆಗಮಿಸಿದ ಸಹಸ್ರಾರು ಭಕ್ತರು ಸಂಭ್ರಮಿಸಿದರು. ದೇವರ ಪಲ್ಲಕ್ಕಿ ಬನಕ್ಕೆ ಆಗಮಿಸುತ್ತಲೇ ಭಂಡಾರವನ್ನು ತೂರಿ ತಮ್ಮ ಹರಕೆಯನ್ನು ತೀರಿಸಿದರು. ಎಂಟೂ ದಿಕ್ಕುಗಳಿಂದ ಭಂಡಾರ ತೂರಿ ಬರುವ ದೃಶ್ಯ ನಯನ ಮನೋಹರವಾಗಿತ್ತು.

ADVERTISEMENT

ಫೆ.21ರಿಂದ ಫೆ.26ರ ವರೆಗೆ ಅತ್ಯಂತ ವೈಭವದಿಂದ ನಡೆದ ಜಾತ್ರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು. ಚಮ್ಮಾಳಿಗೆ ತರುವುದು, ಕರಿಕಟ್ಟುವುದು, ಮಹಾನೈವೇದ್ಯ ಸಮರ್ಪಿಸುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರು ದಿನಗಳ ಕಾಲ ಸಾಂಗವಾಗಿ ನಡೆದವು.

ಕೊನೆಯ ದಿನ ನಿವ್ವಾಳಕಿ, ದೇವವಾಣಿ, ಭಂಡಾರ ತೂರುವುದು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಹಿಂಬದಿಯಲ್ಲಿ ದೇವರ ಎತ್ತು, ದೇವರ ಕುದುರೆ, ದೇವರ ಪಲ್ಲಕ್ಕಿ ಆಗಮಿಸುತ್ತಿದ್ದಂತೆಯೇ ಜನ ತಾ ಮುಂದು ನಾ ಮುಂದು ಅಂತಾ ಭಂಡಾರ, ಖಾರೀಕು, ಬಾಳೆಹಣ್ಣು, ಕೊಬ್ಬರಿ ಮುಂತಾದವುಗಳನ್ನು ತೂರಿ ದೇವರಿಗೆ ನಮಿಸಿದರು.

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಭಕ್ತರು 30 ರಿಂದ 40 ಟನ್‌ಗೂ ಹೆಚ್ಚು ಭಂಡಾರವನ್ನು ತೂರಿದ್ದರಿಂದ ಗ್ರಾಮ ಹಳದಿಮಯವಾಯಿತು.

ಚಮ್ಮಾಳಿಗೆ (ಚರ್ಮದ ಪಾದರಕ್ಷೆ) ತಯಾರಿಸಿ ದೇವರಿಗೆ ಅರ್ಪಿಸುವ ಮೂಲಕ ಪ್ರಾರಂಭಗೊಂಡ ಜಾತ್ರೆ ಭಂಡಾರ ತೂರುವ ಮೂಲಕ ಸಂಪನ್ನಗೊಂಡಿತು.
ರವಿ ಪಾಟೀಲ, ಭಕ್ತ ಕೇರೂರ
ಕೇರೂರ ಜಾತ್ರೆಯ ಕೊನೆಯ ದಿನದ ದೇವವಾಣಿಯಲ್ಲಿ ವರ್ಷದ ಮಳೆ ಬೆಳೆ ಸೌಖ್ಯ ಕೇಡನ್ನು ಕೇಳಲು ಸಹಸ್ರಾರು ಜನರ ಆಗಮಿಸುತ್ತಾರೆ.
ಸೀಮಾ ಮಾಳಿ ಭಕ್ತೆ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.