ADVERTISEMENT

ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ; ಸ್ವಾಮಿಗೆ 35 ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 23:50 IST
Last Updated 20 ಡಿಸೆಂಬರ್ 2025, 23:50 IST
ಹಠಯೋಗಿ ಲೋಕೇಶ್ವರ ಸ್ವಾಮಿ
ಹಠಯೋಗಿ ಲೋಕೇಶ್ವರ ಸ್ವಾಮಿ   

ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೇಕಳಿ‌ ಗ್ರಾಮದ ರಾಮಲಿಂಗ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿಗೆ (30) ಇಲ್ಲಿನ ಜಿಲ್ಲಾ ಪೋಕ್ಸೊ ನ್ಯಾಯಾಲಯ 35 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ಲೋಕೇಶ್ವರ ಸಾಬಣ್ಣ ಜಂಬಗಿ ಎಂಬಾತ ಮೇಕಳಿ ಗ್ರಾಮದಲ್ಲಿ ಮಠ ಕಟ್ಟಿಕೊಂಡು ಸ್ವಾಮೀಜಿ ಎಂದು ಘೋಷಿಸಿಕೊಂಡಿದ್ದ. ಇದೇ ವರ್ಷದ ಮೇ 13ರಂದು ಪಿಯು ಓದುತ್ತಿದ್ದ ಬಾಲಕಿಯನ್ನು ತನ್ನ ಕಾರಿನಲ್ಲಿ ಮನೆಗೆ ಬಿಡುವ ನೆಪದಲ್ಲಿ ಅಪಹರಿಸಿದ್ದ. ಬಾಗಲಕೋಟೆ ಮೂಲಕ ಮಂತ್ರಾಲಯಕ್ಕೆ ಕರೆದೊಯ್ದು ಮೇ 14ರಂದು ಲಾಡ್ಜ್‌ನಲ್ಲಿ ಅತ್ಯಾಚಾರ ಮಾಡಿದ್ದ. ಮೇ 16ರಂದು ಬಾಗಲಕೋಟೆಗೆ ಕರೆತಂದು ಮತ್ತೆ ಲಾಡ್ಜ್‌ನಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಆಕೆಯನ್ನು ಮಹಾಲಿಂಗಪುರ ಬಸ್‌ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದ.

ಈ ಸಂಬಂಧ ಬಾಲಕಿ ಪಾಲಕರು ಮೂಡಲಗಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖಾಧಿಕಾರಿ ಶ್ರೀಶೈಲ ಬ್ಯಾಕೋಡ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು ಶನಿವಾರ (ಡಿ.20) ತೀರ್ಪು ಪ್ರಕಟಿಸಿದ್ದಾರೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ₹4 ಲಕ್ಷ ಪರಿಹಾರ ನೀಡುವಂತೆ ಮತ್ತು ಆ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 5 ವರ್ಷ ಠೇವಣಿ ಇಡುವಂತೆಯೂ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್‌.ವಿ.ಪಾಟೀಲ ವಾದ ಮಂಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.