ADVERTISEMENT

ಮೈಸೂರಿನ ನಂತರದ ಅತ್ಯಂತ ಸುಸಜ್ಜಿತ ಮೃಗಾಲಯ ಬೆಳಗಾವಿಯಲ್ಲಿ: ಸತೀಶ ಜಾರಕಿಹೊಳಿ

ಮೃಗಾಲಯ ಮಹಾದ್ವಾರ ಉದ್ಘಾಟಿಸಿದ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 9:03 IST
Last Updated 29 ಡಿಸೆಂಬರ್ 2022, 9:03 IST
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿ ಕಿರು ಮೃಗಾಲಯ ಮಹಾದ್ವಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿ ಕಿರು ಮೃಗಾಲಯ ಮಹಾದ್ವಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು   

ಬೆಳಗಾವಿ: ತಾಲ್ಲೂಕಿನ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಕಿರು ಮೃಗಾಲಯದ ಪ್ರವೇಶದ್ವಾರ ಹಾಗೂ ವಿವಿಧ ಪ್ರಾಣಿಗಳ ಆವರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು.

ನಂತರ ಮೃಗಾಲಯದ ಪ್ರಾಣಿಗಳನ್ನು ವೀಕ್ಷಿಸಿದ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

‘ಮೈಸೂರು ಮೃಗಾಲಯದ ನಂತರ ಅತ್ಯಂತ ಸುಸಜ್ಜಿತ ಮೃಗಾಲಯವನ್ನು ಬೆಳಗಾವಿಯ ಭೂತರಾಮನ ಹಟ್ಟಿಯಲ್ಲಿ ನಿರ್ಮಾಣವಾಗಿದೆ. ಮೃಗಾಲಯದ ಅಭಿವೃದ್ಧಿ ಕಾಮಗಾರಿಗಳನ್ನು ಐದು ಹಂತಗಳಲ್ಲಿ ಮಾಡಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಮೊದಲನೇ ಹಂತದಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಉಳಿದ ಹಂತಗಳಲ್ಲಿ ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದು’ ಎಂದುಶಾಸಕ ಸತೀಶ ಜಾರಕಿಹೊಳಿ ಮಾಹಿತಿ ನೀಡಿದರು.

ADVERTISEMENT

‘ವಿಶೇಷವಾಗಿ ₹2 ಕೋಟಿ ಅನುದಾನದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದೆ. ಮೃಗಾಲಯದ ಅಭಿವೃದ್ಧಿ ಕಾಮಗಾರಿಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಶಾಸಕ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್, ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ವಿ. ದರ್ಶನ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.