ADVERTISEMENT

ಸತ್ತಿಗೇರಿ ಏತ ನೀರಾವರಿ ಯೋಜನೆಗೆ ದಿವಂಗತ ಆನಂದ ಮಾಮನಿ ಹೆಸರು: ಸಿಎಂ ಬೊಮ್ಮಾಯಿ

₹300 ಕೋಟಿ ಅಂದಾಜು ವೆಚ್ಚದ ಯೋಜನೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 16:17 IST
Last Updated 28 ಮಾರ್ಚ್ 2023, 16:17 IST
   

ಸವದತ್ತಿ: ‘ಸತ್ತಿಗೇರಿ ಏತ ನೀರಾವರಿ ಯೋಜನೆಗೆ ದಿವಂಗತ ಆನಂದ ಮಾಮನಿ ಅವರ ಹೆಸರಿಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಸತ್ತಿಗೇರಿ ಏತ ನೀರಾವರಿ, ಪಟ್ಟಣಕ್ಕೆ ರೇಣುಕಾ ಸಾಗರದಿಂದ ನೀರು ಸರಬರಾಜು, ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಹಾಸಿಗೆಯ ಕಟ್ಟಡ, ತರಕಾರಿ ಮಾರುಕಟ್ಟೆ ಮತ್ತು ಜಲ ಸಂಗ್ರಹಗಾರಕ್ಕೆ ಶಿಲಾನ್ಯಾಸ ಮತ್ತು ವಿವಿಧ ಕಾಮಗಾರಿಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸತ್ತಿಗೇರಿ ಏತ ನೀರಾವರಿ ಯೋಜನೆಗೆ ₹300 ಕೋಟಿ ಮೀಸಲು, 1600 ಎಕರೆ ಭೂಮಿಗೆ ನೀರುಣಿಸುವ ಕಾರ್ಯ ಒಂದೂವರೆ ವರ್ಷದಲ್ಲಿ ಜನೋಪಯೋಗಕ್ಕೆ ಬರಲಿದೆ’ ಎಂದರು.

ADVERTISEMENT

‘ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಇದನ್ನು ಪಕ್ಷ ಹಾಗೂ ವರಿಷ್ಠರು ಗಮನಿಸಿದ್ದು ಅವರೇ ಅದನ್ನು ನಿರ್ಣಯಿಸುತ್ತಾರೆ. ಅಭಿಮಾನಿಗಳಿಗೆ ನಿರಾಶೆಯಾಗದಂತೆ ಸ್ಪಂದಿಸಲಾಗುವುದು. ಮುಂದಿನ ಅವಧಿಗೂ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ಎಲ್ಲರೂ ಸಹಕರಿಸಬೇಕು’ ಎಂದರು.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆ ರೀತಿ ಕೆಲಸ ಮಾಡಿದ್ದೇನೆ. ಎಲ್ಲ ಜನಾಂಗಕ್ಕೆ ಒಳ ಮೀಸಲಾತಿ ಮತ್ತು ಪಂಚಮಸಾಲಿಗೆ ಶೇ.2 ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ರಾಜ್ಯ ಆರ್ಥಿಕ ಸೇರಿ ಎಲ್ಲ ರಂಗದಲ್ಲಿ ಮುನ್ನುಗ್ಗುತ್ತಿದೆ ಎಂದರು.

ನಂತರ ನವಿಲುತೀರ್ಥ ಅಣೆಕಟ್ಟಿಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಸ್.ಜಿ. ಬಾಳೇಕುಂದ್ರ ಅವರ ಪ್ರತಿಮೆ ಅನಾವರಣಗೊಳಿಸಿದರು.

ವಿವಿಧ ಸಮುದಾಯಗಳ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರತ್ನಾ ಆನಂದ ಮಾಮನಿ ಅವರನ್ನು ಸನ್ಮಾನಿಸಿದರು.

ಈ ವೇಳೆ ಪ್ರಾದೇಶಿಕ ಆಯುಕ್ತ ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸಂಜೀವಕುಮಾರ ನವಲಗುಂದ, ವಿರೂಪಾಕ್ಷ ಮಾಮನಿ, ವಿನಯಕುಮಾರ ದೇಸಾಯಿ ಹಾಗೂ ಪ್ರಮುಖರು ಇದ್ದರು.

ಮಾಮನಿ ಪರ ಘೋಷಣೆ
ಸಮಾರಂಭದಲ್ಲಿ ಸೇರಿದ ಹಲವು ಬಿಜೆಪಿ ಕಾರ್ಯಕರ್ತರು ದಿವಂಗತ ಆನಂದ ಮಾಮನಿ ಅವರ ಭಾವಚಿತ್ರ ಪ್ರದರ್ಶಿಸಿ, ಅವರ ಪರ ಘೋಷಣೆ ಕೂಗಿದರು. ಈ ಬಾರಿ ಬಿಜೆಪಿ ಟಿಕೆಟ್‌ ಅನ್ನು ಮಾಮನಿ ಅವರ ಕುಟುಂಬಕ್ಕೇ ನೀಡಬೇಕು ಎಂದು ಘೋಷಣೆ ಹಾಕಿದರು.

ವೇದಿಕೆಯಲ್ಲಿ ಮಾತನಾಡಿದ ರತ್ನಾ ಮಾಮನಿ, ‘ಕ್ಷೇತ್ರದ ಜನ ನನಗೆ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.