ADVERTISEMENT

ಆರೋಗ್ಯದಲ್ಲಿ ಏರು–ಪೇರು; ಸದನ ಕಲಾಪಗಳಿಂದ ದೂರ ಉಳಿದ ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 13:36 IST
Last Updated 17 ಡಿಸೆಂಬರ್ 2025, 13:36 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರಾದ ಕಾರಣ, ಬುಧವಾರ ಅವರು ಸದನ ಕಲಾಪಗಳಿಂದ ದೂರ ಉಳಿದರು. ನಗರದ ಪ್ರವಾಸಿ ಮಂದಿರದಲ್ಲೇ ಇಡೀ ದಿನ ವಿಶ್ರಾಂತಿ ಪಡೆದರು.

‘ನ್ಯಾಷನಲ್‌ ಹೆರಾಲ್ಡ್‌’ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ಬೆಂಬಲಿಸಿ, ಕೇಂದ್ರ ಸರ್ಕಾರ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಸುವರ್ಣ ವಿಧಾನಸೌಧದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಂಡರು. ಒಂದು ತಾಸು ಧರಣಿ ಕುಳಿತರು. ಸದನದೊಳಗೆ ಹೋದ ಅವರು, ಕೆಲ ಸಮಯದ ನಂತರ ಪ್ರವಾಸಿ ಮಂದಿರಕ್ಕೆ ಮರಳಿದರು.

ADVERTISEMENT

ಆರೋಗ್ಯ ವಿಚಾರಿಸಿದ ರಮೇಶ ಜಾರಕಿಹೊಳಿ

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಕೂಡ ಪ್ರವಾಸಿ ಮಂದಿರಕ್ಕೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು.

‘ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಲು ಮಾತ್ರ ಬಂದಿದ್ದೇನೆ. ರಾಜಕೀಯ, ಅಭಿವೃದ್ಧಿ ಯಾವುದೇ ಚರ್ಚೆ ಮಾಡಿಲ್ಲ. ಅವರಿಗೆ ಧೈರ್ಯ ಹೇಳೋಣ ಎಂದು ಬಂದಿದ್ದೆ. ಅವರೇ ನಮಗೆ ಧೈರ್ಯ ಹೇಳುವಷ್ಟು ಆರೋಗ್ಯವಾಗಿದ್ದಾರೆ’ ಎಂದು ರಮೇಶ ಜಾರಕಿಹೊಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ನಂತರ ಬಂದ ಸಚಿವ ಭೈರತಿ ಸುರೇಶ್‌, ‘ಸಿ.ಎಂ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರೊಂದಿಗೆ ನಾನೂ ಊಟ ಮಾಡಿ ಬಂದಿದ್ದೇನೆ. ಆರೋಗ್ಯ ಸುಧಾರಿಸಿದೆ. ನಾಳೆ ಸದನದಲ್ಲಿ ಉತ್ತರ ಕೊಡಬೇಕಾದ ವಿಷಯಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ’ ಎಂದರು.

ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.