ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ | ಕರ್ನಾಟಕದ ಮರಾಠಿಗರಿಗೆ ‘ಮಹಾ’ ಉದ್ಯೋಗ ಭರವಸೆ

ಸಂತೋಷ ಈ.ಚಿನಗುಡಿ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
   

ಬೆಳಗಾವಿ: ‘ಗಡಿ ವಿವಾದಕ್ಕೆ ಒಳಪಟ್ಟ, ಕರ್ನಾಟಕದೊಳಗಿನ 865 ಹಳ್ಳಿ–ಪಟ್ಟಣಗಳ ಯುವಜನರಿಗೂ ಮಹಾರಾಷ್ಟ್ರದಲ್ಲಿ ಉದ್ಯೋಗ ಅವಕಾಶ ನೀಡಬೇಕು’ ಎಂಬ ನಿರ್ಣಯವನ್ನು, ಅಲ್ಲಿನ ವಿಧಾನ ಪರಿಷತ್‌ ಕಲಾಪದಲ್ಲಿ ಅಂಗೀಕರಿಸಲಾಗಿದೆ.

ಈ ಮೂಲಕ ಮಹಾರಾಷ್ಟ್ರ ಸರ್ಕಾರ ಇಲ್ಲಿನ ಮರಾಠಿಗರ ಮನಸ್ಸನ್ನು ತನ್ನೆಡೆಗೆ ಸೆಳೆಯುವ ಮತ್ತು ಸುಪ್ರೀಂಕೋರ್ಟಿಗೆ ಬೇಕಾದ ದಾಖಲೆ ಸೃಷ್ಟಿಸಿಕೊಳ್ಳುವ ಹೆಜ್ಜೆ ಇಟ್ಟಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಮುಂಬೈನಲ್ಲಿ ಸೋಮವಾರ ನಡೆದ ಪರಿಷತ್‌ ಕಲಾಪದಲ್ಲಿ ಅಲ್ಲಿನ ಕಂದಾಯ ಸಚಿವ ಚಂದ್ರಶೇಖರ್‌ ಭವಾಂಕುಲೆ ‘ಗಡಿ ವಿವಾದ’ ಹಾಗೂ ಅಲ್ಲಿನ ಸಮಸ್ಯೆಗಳ ಕುರಿತು ಭಾಷಣ ಮಾಡಿದ್ದಾರೆ.

ಕರ್ನಾಟಕದ ಗಡಿಯೊಳಗೆ ಇರುವ ಐದು ಜಿಲ್ಲೆಗಳ 865 ಹಳ್ಳಿ–ಪಟ್ಟಣಗಳಲ್ಲಿ ಮರಾಠಿಗರು ಇದ್ದಾರೆ. ಅವರಿಗೆ ಮಹಾರಾಷ್ಟ್ರ ಸರ್ಕಾರದ ಉದ್ಯೋಗ ಪಡೆಯಲು ಅವಕಾಶ ನೀಡಬೇಕಿದೆ. ಇದಕ್ಕಾಗಿ ಈ ವರ್ಷದಿಂದ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕೊಡಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಮುಖ್ಯವಾಗಿ, ಮಹಾರಾಷ್ಟ್ರದ ಗಡಿಯ ಗ್ರಾಮ ಪಂಚಾಯಿತಿಗಳಲ್ಲಿ ‘ತಲಾಠಿ’ ಹುದ್ದೆ ನೇಮಕಾತಿ ನಡೆದಿದೆ. ಇದಕ್ಕೆ ಕರ್ನಾಟಕದೊಳಗಿನ ಮರಾಠಿಗರನ್ನು ಪರಿಗಣಿಸಲಾಗುವುದು. 2023ರಲ್ಲಿ ಕೂಡ 391 ಯುವಜನರು ತಲಾಠಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ನಿಯಮಗಳು ಅಡ್ಡಿಬಂದ ಕಾರಣ ಉದ್ಯೋಗ ವಂಚಿತರಾಗಿದ್ದಾರೆ. ಈಗ ಅವರನ್ನೂ ಮಹಾರಾಷ್ಟ್ರದ ಭಾಗ ಮಾಡಿಕೊಳ್ಳುವ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ವಿಧಾನ ಪರಿಷತ್‌ ಸದಸ್ಯ ನಿರಂಜನ್ ಧವಕರೆ ಅಧಿವೇಶನದಲ್ಲಿ ಈ ಪ್ರಶ್ನೆ ಎತ್ತಿದ್ದರು. ಗಡಿಯಲ್ಲಿನ ಆಕಾಂಕ್ಷಿಗಳಿಗಾಗಿ ಪರೀಕ್ಷಾ ಕೇಂದ್ರ, ಕೌಶಲ ಅಭಿವೃದ್ಧಿ ಕೇಂದ್ರ ತೆರೆಯುವ ಕುರಿತೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಸಚಿವ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಏನೇನು ಸೌಲಭ್ಯ?:

ವಿವಾದಕ್ಕೆ ಒಳಪಟ್ಟ ಪ್ರದೇಶದ ಜನರಿಗಾಗಿ ಕಳೆದ ವರ್ಷ ಮಹಾರಾಷ್ಟ್ರ ಸರ್ಕಾರ ₹5 ಲಕ್ಷ ವೆಚ್ಚದ ‘ಜನಾರೋಗ್ಯ ವಿಮೆ’ ಜಾರಿಗೊಳಿಸಿದೆ. ಈ ವಿಮೆಗೆ ‘ನಾನು ಮರಾಠಿಗ’ ಎಂದು ಮುಚ್ಚಳಿಕೆ ಬರೆದು ಕೊಡುವುದನ್ನು ಕಡ್ಡಾಯ ಮಾಡಿದೆ. ಜನ ಮುಚ್ಚಳಿಕೆ ಬರೆದುಕೊಟ್ಟು ಆರೋಗ್ಯ ವಿಮೆ ಪಡೆಯುತ್ತಲೇ ಇದ್ದಾರೆ. 

ಶಿಕ್ಷಣದಲ್ಲಿ ಮೀಸಲಾತಿ, ಪದವಿ, ವಿಶ್ವವಿದ್ಯಾಲಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್‌ ಸೌಲಭ್ಯವನ್ನೂ ಈ ಹಿಂದೆಯೇ ಜಾರಿಗೊಳಿಸಲಾಗಿದೆ.

‘ಈಗ ಮತ್ತೊಂದು ಹೆಜ್ಜೆ ಮುಂದೆ ಬಂದು ಉದ್ಯೋಗ ನೇಮಕಾತಿಗೆ ಕೈ ಹಾಕಲಾಗಿದೆ. ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ ಸೇರಿದಂತೆ ಈ ನಾಲ್ಕೂ ಮೂಲ ಸೌಕರ್ಯಗಳನ್ನು ಮಹಾರಾಷ್ಟ್ರ ಸರ್ಕಾರವೇ ಪೂರೈಕೆ ಮಾಡುತ್ತಿದೆ ಎಂಬ ದಾಖಲೆ ಸೃಷ್ಟಿಸುವುದು ಇದರ ಹಿಂದಿನ ಕುತಂತ್ರ’ ಎಂಬುದು ಕನ್ನಡ ಹೋರಾಟಗಾರರ ಅನಿಸಿಕೆ.

ಬಾಯಿ ಮುಚ್ಚಿಕೊಂಡು ಕುಳಿತ ‘ಅಧ್ಯಕ್ಷರು’

‘ಮಹಾರಾಷ್ಟ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕಣ್ಣಿಗೆ ಕಾಣದಂತೆ ಆಕ್ರಮಣ ನಡೆಸಿದೆ. ಆದರೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಗಡಿ ಸಂರಕ್ಷಣಾ ಆಯೋಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳು ಇದ್ದರೂ ಇಲ್ಲದಂತಾಗಿದೆ. ಇವುಗಳ ಅಧ್ಯಕ್ಷರು ಯಾವುದನ್ನೂ ಗಂಭಿರವಾಗಿ ಪರಿಗಣಿಸುತ್ತಿಲ್ಲ. ಮಹಾರಾಷ್ಟ್ರದ ನಡೆಯನ್ನು ಪ್ರಶ್ನಿಸುವವರೇ ಇಲ್ಲವಾಗಿದೆ’ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಪ್ರತಿಕ್ರಿಯಿಸಿದ್ದಾರೆ.

‘ಮಹಾರಾಷ್ಟ್ರದ ನಾಗರಿಕರಿಗೆ ಸಿಗುವ ಎಲ್ಲ ಸೌಕರ್ಯಗಳನ್ನೂ ಕರ್ನಾಟಕದ ಗಡಿಯೊಳಗಿನ ಮರಾಠಿಗರಿಗೂ ನೀಡಲಾಗುತ್ತಿದೆ. ಸುಪ್ರೀಂಕೋರ್ಟ್‌ ಇದನ್ನೇ ದಾಖಲೆ ಎಂದು ಪರಿಗಣಿಸಿದರೆ, ಅಪಾಯ ತಪ್ಪಿದ್ದಲ್ಲ’ ಎಂದೂ ಹೇಳಿದರು.

‘ಬೆಳಗಾವಿಯಲ್ಲಿ ಮಹಾರಾಷ್ಟ್ರ ನಾಡಗೀತೆ ಹಾಡಿದ್ದಕ್ಕೆ ಎಫ್‌ಐಆರ್‌ ದಾಖಲಿಸಲಾಗಿದೆ. ಈ ವಿಚಾರವನ್ನೂ ಎಂಇಎಸ್‌ ನಾಯಕರು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆ, ನೈತಿಕ ಬೆಂಬಲ ಕೋರಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.