ಬೆಳಗಾವಿ: ‘ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರವಿಲ್ಲ. ಶಾಸಕ ಬಿ.ಆರ್.ಪಾಟೀಲ ನೀಡಿದ ಹೇಳಿಕೆ ಸತ್ಯ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ದುರ್ಬೀನು ಹಾಕಿ ನೋಡುವ ಅವಶ್ಯಕತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬಿ.ಆರ್.ಪಾಟೀಲ ಕರೆದು ಮಾತನಾಡಲು ಇದೇನೂ ಖಾಸಗಿ ವಿಷಯವಲ್ಲ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿನ ಮನೆ ಹಂಚಿಕೆ ಪ್ರಕರಣದ ಕುರಿತು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿ. ಇದಕ್ಕೂ ಮುನ್ನ, ವಸತಿ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ಪಡೆದುಕೊಳ್ಳಿ’ ಎಂದು ಆಗ್ರಹಿಸಿದರು.
‘ವಸತಿ ಇಲಾಖೆಯಷ್ಟೇ ಅಲ್ಲ; ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆದಿದೆ. ‘ಗ್ಯಾರಂಟಿ’ಗಳನ್ನು ಕೊಟ್ಟಿದ್ದೇವೆ ಎಂದರೆ, ಭ್ರಷ್ಟಾಚಾರಕ್ಕೆ ಪರವಾನಗಿ ತೆಗೆದುಕೊಂಡಿದ್ದೇವೆ ಎಂದು ಕಾಂಗ್ರೆಸ್‌ನವರು ತಿಳಿದಿದ್ದಾರೆ. ಯಾವುದೇ ಕೆಲಸಕ್ಕೂ ಲಂಚ ಪಡೆಯಲಾಗುತ್ತಿದೆ. ಹಾಗಾದರೆ ಸರ್ಕಾರಿ ಕಚೇರಿಗಳಲ್ಲಿ ಸಚಿವರು, ಶಾಸಕರು ಮತ್ತು ಅಧಿಕಾರಿಗೆ ಇಂತಿಷ್ಟು ಎಂದು ಲಂಚದ ರೇಟ್‌ಕಾರ್ಡ್ ಹಾಕಿಬಿಡಿ. ಆಗ ಲಂಚ ಶಾಸನಬದ್ಧವಾಗುತ್ತದೆ. ಲಂಚ ಕೊಡಲು ಜನರು ಮಾನಸಿಕವಾಗಿ ಸಿದ್ಧರಾಗುತ್ತಾರೆ’ ಎಂದು ಆರೋಪಿಸಿದರು.
ಕಾಗೆ ಸತ್ಯ ಹೇಳಿದ್ದಾರೆ: ‘ಲಂಚ ಕೊಟ್ಟವರಿಗಷ್ಟೇ ಮನೆ ಎನ್ನುವುದಕ್ಕಿಂತ ಪಾಪದ ಕೃತ್ಯ ಮತ್ತೊಂದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ನಾವು ಸದನಗಳಲ್ಲಿ ಆರೋಪಿಸಿದ್ದೆವು. ಆದರೆ, ಈ ಸರ್ಕಾರದಲ್ಲಿ ಯಾವ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ನಾವು ಹೆಸರಿಗಷ್ಟೇ ಶಾಸಕರಾಗಿದ್ದೇವೆ ಎಂದು ಕಾಂಗ್ರೆಸ್‌ನ ಶಾಸಕ ರಾಜು ಕಾಗೆ ಸತ್ಯವನ್ನೇ ಹೇಳಿದ್ದಾರೆ. ಅವರ ಮಾತಿನಲ್ಲಿ ಹೊಸದೇನೂ ಇಲ್ಲ’ ಎಂದು ವ್ಯಂಗ್ಯವಾಡಿದರು.
‘ಈ ಸರ್ಕಾರದಲ್ಲಿ ಅಭಿವೃದ್ಧಿ ಎಂಬುದು ನಿಂತುಹೋಗಿದೆ. ಭ್ರಷ್ಟಾಚಾರವಷ್ಟೇ ನಡೆಯುತ್ತಿದೆ. ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಸಿದ್ದೇ ಈ ಸರ್ಕಾರದ ದೊಡ್ಡ ಕೆಲಸ’ ಎಂದರು.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ₹26 ಕೋಟಿ ನೀಡಿದ್ದೇವೆ ಎಂದಿದ್ದಾರೆ. ಆದರೆ, ಕಾರ್ಯಾದೇಶವನ್ನೇ ಕೊಟ್ಟಿಲ್ಲ. ಅದರಲ್ಲೂ ಪರ್ಸೆಂಟೇಜ್ ಕಾಟ’ ಎಂದು ಆರೋಪಿಸಿದ ರವಿ, ‘ಸತ್ಯ ಹೇಳಿದ್ದಕ್ಕಾಗಿ ಬಿ.ಆರ್.ಪಾಟೀಲ ಮತ್ತು ರಾಜು ಕಾಗೆ ಸರ್ಕಾರದಿಂದ ಏನೇನು ಅನುಭವಿಸಬೇಕಾಗುತ್ತದೆಯೋ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು.
‘ನಿಮಗೆ ಇನ್ನೂ ಮೂರು ವರ್ಷಗಳ ಅಧಿಕಾರವಧಿ ಇದೆ. ಹಾಗಾಗಿ ತಮ್ಮ ಸರ್ಕಾರದ ಕಾರ್ಯವೈಖರಿ ಬಗ್ಗೆ ಅವಲೋಕನ ಮಾಡಿಕೊಳ್ಳಿ. ಸರ್ಕಾರದ ವಿರುದ್ಧ ನಾವು ಹೇಳಿಕೆ ಕೊಟ್ಟಿದ್ದರೆ, ಪೂರ್ವಾಗ್ರಹವಾಗಿ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳುತ್ತಿದ್ದರು. ಈಗ ಹಾಗೆ ಹೇಳಲು ಬರಲ್ಲ. ವಸತಿ ನಿಗಮದಲ್ಲಿ ನಿಯಮ ಬಾಹಿರತವಾಗಿ ಮನೆ ಹಂಚಿಕೆ ವಿರುದ್ಧ ಗ್ರಾಮ ಪಂಚಾಯಿತಿ, ತಾಲ್ಲೂಕು, ಜಿಲ್ಲಾ ಹಂತದಲ್ಲಿ ಪ್ರತಿಭಟಿಸುತ್ತೇವೆ. ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.