ADVERTISEMENT

ಬೆಳಗಾವಿ: ಅನಿಷ್ಠ ಪದ್ಧತಿಗಳ ವಿರುದ್ಧ ನಿಂತ ಶ್ರೇಷ್ಠ ಸಂವಿಧಾನ

ಸಂವಿಧಾನ ದಿನಾಚರಣೆ, ನಗರದಲ್ಲಿ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 5:49 IST
Last Updated 27 ನವೆಂಬರ್ 2025, 5:49 IST
ಬೆಳಗಾವಿಯಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಅಂಗವಾಗಿ ಶಾಲೆ– ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು
ಬೆಳಗಾವಿಯಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಅಂಗವಾಗಿ ಶಾಲೆ– ಕಾಲೇಜು ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು   

ಬೆಳಗಾವಿ: ‘ಭಾರತದ ಸಾಂಸ್ಕೃತಿಕ ಇತಿಹಾಸ ಓದಿದಾಗ ನಮ್ಮ ಸಂವಿಧಾನ ಎಷ್ಟು ಶ್ರೇಷ್ಠವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಯಾರಿಗೆ ಭಾರತದ ಸಾಂಸ್ಕೃತಿಕ ಇತಿಹಾಸದ ಅರಿವು ಇರುತ್ತದೆಯೊ ಅಂತಹವರಿಗೆ ಸಂವಿಧಾನ ಅರ್ಥವಾಗುತ್ತದೆ’ ಎಂದು ನಿವೃತ್ತ ಶಿಕ್ಷಕ ಬಿ.ಎಸ್.ನಾಡಕರ್ಣಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

‘ನಮ್ಮ ಭಾರತದ ಸಂವಿಧಾನ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಎರಡು ಹಕ್ಕುಗಳನ್ನು ಕೊಟ್ಟಿದೆ ಒಂದು ಮದುವೆ ಹಕ್ಕು, ಇನ್ನೊಂದು ಮತದಾನದ ಹಕ್ಕು. ಇವುಗಳಲ್ಲಿ ವಿಶೇಷ ಎಂದರೆ ಮದುವೆಯ ಹಕ್ಕಿನಿಂದಾಗಿ ಕೇವಲ ತನ್ನ ಕುಟುಂಬದ ಜವಾಬ್ದಾರಿಗಳನ್ನು ಮಾತ್ರ ನೋಡಿಕೊಳ್ಳಬಹುದು. ಆದರೆ ಮತದಾನದ ಹಕ್ಕಿನಿಂದಾಗಿ ರಾಷ್ಟ್ರ ನಡೆಸಬಹುದು’ ಎಂದರು.

ADVERTISEMENT

‘ಮನುಸ್ಮೃತಿಯನ್ನು ಎಲ್ಲರೂ ಓದಿ. ಏಕೆಂದರೆ ಆ ಮನುಸ್ಮೃತಿಯಲ್ಲಿ ಮಹಿಳೆಯರ ಮೇಲೆ ಇದ್ದಂತಹ ಅನಿಷ್ಠ ಪದ್ದತಿಗಳ ಬಗ್ಗೆ ತಿಳಿದುಕೊಂಡಾಗ ನಮ್ಮ ಭಾರತದ ಸಂವಿಧಾನ ಹೆಣ್ಣುಮಕ್ಕಳಿಗೆ ಎಂತಹ ಬಲಿಷ್ಠ ಹಕ್ಕುಗಳನ್ನು ಕೊಟ್ಟಿದೆ ಎಂಬುದು ತಿಳಿಯುತ್ತದೆ. ಬಲಿಷ್ಠ ಹಕ್ಕುಗಳಿಂದಾಗಿ ಈಗ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ’ ಎಂದೂ ಹೇಳಿದರು.

ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಹರ್ಷ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಸವರಾಜ ಕುರಿಹುಲಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾಂತೇಶ ಚಿವಟಗುಂಡಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಚಣ್ಣನವರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ರಾಯವ್ವಗೋಳ, ಭೀಮರಾವ್ ಪವಾರ, ಮಲ್ಲೇಶ ಚೌಗಲೆ ಪಾಲ್ಗೊಂಡರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಜರುಗಿತು. ಪ್ರಾದೇಶಿಕ ಆಯುಕ್ತೆ ಜಾನಕಿ ಚಾಲನೆ ನೀಡಿದರು. ಜಾಗೃತಿ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭಗೊಂಡು ಚನ್ನಮ್ಮ ವೃತ್ತದ ಮಾರ್ಗವಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಉದ್ಯಾನ ಬಂದು ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.