ADVERTISEMENT

ಬೆಳಗಾವಿ ಭತ್ತಕ್ಕೆ ಬಳ್ಳಾರಿ ನಾಲೆಯದ್ದೇ ಚಿಂತೆ

ನಿರಂತರ ಮಳೆ, ನಾಲೆಯ ಹಿನ್ನೀರು ನುಗ್ಗಿ ಜಲಾವೃತವಾದ ಗದ್ದೆಗಳು, ಆತಂಕದಲ್ಲಿ ರೈತರು

ಸಂತೋಷ ಈ.ಚಿನಗುಡಿ
Published 30 ಜೂನ್ 2025, 5:03 IST
Last Updated 30 ಜೂನ್ 2025, 5:03 IST
ಬೆಳಗಾವಿ ತಾಲ್ಲೂಕಿನ ಯಳ್ಳೂರು ಗ್ರಾಮದ ಭತ್ತದ ಗದ್ದೆಗಳಿಗೆ ನಿಗ್ಗಿದ ಬಳ್ಳಾರಿ ನಾಲೆಯ ನೀರು  ಪ್ರಜಾವಾಣಿ ಚಿತ್ರ
ಬೆಳಗಾವಿ ತಾಲ್ಲೂಕಿನ ಯಳ್ಳೂರು ಗ್ರಾಮದ ಭತ್ತದ ಗದ್ದೆಗಳಿಗೆ ನಿಗ್ಗಿದ ಬಳ್ಳಾರಿ ನಾಲೆಯ ನೀರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಸಂಪ್ರದಾಯ’ ಎಂಬಂತೆ ಬಳ್ಳಾರಿ ನಾಲೆಯ ನೀರು ಈ ಬಾರಿಯೂ ಆತಂಕ ಸೃಷ್ಟಿ ಮಾಡಿದೆ. ನಾಲೆಯ ಜಲಾನಯನ ಪ್ರದೇಶದಲ್ಲಿ ಬೆಳೆದ ಬಾಸುಮತಿ ಭತ್ತ ಜಲಾವೃತವಾಗಿದೆ. ಮಳೆ ಹೀಗೇ ಮುಂದುವರಿದರೆ ಸಾವಿರಾರು ಎಕರೆಯಲ್ಲಿ ಬೆಳೆದ ಭತ್ತಕ್ಕೆ ಕಂಟಕ ಎದುರಾಗುವ ಸಾಧ್ಯತೆ ಇದೆ ಎಂದು ರೈತರು ಆತಂಕಗೊಂಡಿದ್ದಾರೆ.

‘ಬೆಳಗಾವಿ ಬಾಸುಮತಿ’ ತಳಿಗೆ ರಾಜ್ಯದೆಲ್ಲೆಡೆ ಬೇಡಿಕೆ ಇದೆ. ಬೆಳಗಾವಿ ತಾಲ್ಲೂಕು, ಖಾನಾಪುರ ಹಾಗೂ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ರೈತರು ಇದೇ ತಳಿ ನಂಬಿಕೊಂಡಿದ್ದಾರೆ. ಈ ಬಾರಿ ಮುಂಗಾರು ಹದವಾಗಿ ಬಿದ್ದಿದ್ದರಿಂದ ಬಹುಪಾಲು ರೈತರು ಅವಧಿಗೂ ಮುನ್ನವೇ ಬಿತ್ತನೆ, ನಾಟಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಅಂದಾಜು 60 ಸಾವಿರ ಹೆಕ್ಟೆರ್‌ಗೂ ಅಧಿಕ ಪ್ರದೇಶದಲ್ಲಿ ಈ ಬಾರಿ ಭತ್ತ ಬೆಳೆಯಲಾಗಿದೆ. ಕೃಷಿ ತಜ್ಞರು ಹೇಳುವಂತೆ ಭತ್ತಕ್ಕೆ ಅತ್ಯಧಿಕ ನೀರು ಬೇಕೇಬೇಕು. ಆದರೆ, ಸಸಿಯ ಸುಳಿ (ನೆತ್ತಿಭಾಗ) ತುಸು ಮೇಲಕ್ಕೆ ಚಿಗುರಿದರೆ ಮಾತ್ರ ನೀರಿನ ಎಷ್ಟೇ ಸಂಗ್ರವಹನ್ನೂ ತಾಳಿಕೊಳ್ಳುವ ಶಕ್ತಿ ಸಸಿಗೆ ಬರುತ್ತದೆ. ಒಂದು ವೇಳೆ ಸುಳೆ ಮೇಲೇಳುವ ಮುನ್ನವೇ ಗದ್ದೆ ಜಲಾವೃತವಾದರೆ ಸಂಕಷ್ಟ ತಪ್ಪಿದ್ದಲ್ಲ. 

ADVERTISEMENT

ಕಳೆದೊಂದು ವಾರದಿಂದ ಸುರಿದ ಮಳೆಯಿಂದ ಮೊಣಕಾಲುದ್ದ ನೀರು ಭತ್ತದ ಗದ್ದೆಗಳಲ್ಲಿ ನಿಂತಿದೆ. ಇದರಿಂದ ಏನೂ ಆತಂಕ ಬಂದಿಲ್ಲ. ನಿಜವಾದ ಆತಂಕ ಎದುರಾಗಿದ್ದು, ಬಳ್ಳಾರಿ ನಾಲೆಯ ನೀರು ಉಕ್ಕೇರಿದ್ದರಿಂದ. ಇದರಿಂದ ಪ್ರತಿ ವರ್ಷವೂ 2,000 ಎಕರೆಗೂ ಅಧಿಕ ಕ್ಷೇತ್ರದ ಭತ್ತ ಸಂಕಷ್ಟಕ್ಕೆ ಎದುರಾಗುತ್ತದೆ. ಒಮ್ಮೆ ನಾಟಿ ಮಾಡಿದ ರೈತರು ಅದನ್ನು ತೆಗೆದು ಮರು ಬಿತ್ತನೆ ಮಾಡುವುದು ಅನಿವಾರ್ಯವಾಗುತ್ತದೆ. ಅಂಥ ಸಂದರ್ಭದಲ್ಲೂ ಬಿತ್ತನೆ ದಿನಗಳು ಇರದ ಕಾರಣ ಇಳುವರಿಯೂ ಕುಸಿಯುತ್ತದೆ. ಬೆಳೆ ರೋಗಗ್ರಸ್ಥವಾಗುತ್ತದೆ. ಒಂದು ಬಳ್ಳಾರಿ ನಾಲೆ ತಲೆ ತಲಾಂತರಗಳಿಗೂ ಸಮಸ್ಯೆಯನ್ನು ಬಳುವಳಿಯಾಗಿ ಕೊಡುತ್ತಲೇ ಬಂದಿದೆ.

ವರವಾಗಿದ್ದ ನಾಲೆ ಶಾಪವಾಗಿದ್ದು ಏಕೆ?: ಕೆಲವೇ ವರ್ಷಗಳ ಹಿಂದೆ ಬಳ್ಳಾರಿ ನಾಲೆ ರೈತರಿಗೆ ವರದಾನವಾಗಿತ್ತು. ಈ ನಾಲೆಯ ನೀರನ್ನು ನಂಬಿಯೇ ರೈತರ ಬಾಸುಮತಿ ಭತ್ತ ಬೆಳೆಯುವ ರೂಢಿ ಮುಂದುವರಿಸಿದರು. ಆದರೆ, ಮಿತಿ ಇಲ್ಲದ ನಗರೀಕರಣ, ನಾಲೆಯ ಅತಿಕ್ರಮಣ, ನಗರದ ದ್ರವತ್ಯಾಜ್ಯ ಸೇರ್ಪಡೆ, ಅಪಾರ ಪ್ರಮಾಣದಲ್ಲಿ ತುಂಬಿದ ಹೂಳು, ಬೈಪಾಸ್‌ ರಸ್ತೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ಅವೈಜ್ಞಾನಿಕ ಅಂಡರ್‌ಪಾಸ್‌... ಇವೆಲ್ಲವುಗಳ ಕಾರಣ ನಾಲೆ ತನ್ನ ಗತಿಯನ್ನೇ ಬದಲಾಯಿಸಿಕೊಂಡಿದೆ.

ನಾಲೆಯಲ್ಲಿ ಸಾಕಷ್ಟು ಹೂಳು ತುಂಬಿದೆ. ನೀರು ಸರಾಗವಾಗಿ ಹರಿದುಹೋಗುತ್ತಿಲ್ಲ. ಅದರೊಂದಿಗೆ ನಗರದ ದ್ರವತ್ಯಾಜ್ಯವೂ ಬೆರೆತು ಹೆಚ್ಚಿನ ಪ್ರಮಾಣದಲ್ಲಿ ಹರವು ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವವರೆಗೂ ನೀರು ಸರಾಗವಾಗಿ ಹರಿದುಹೋಗುತ್ತಿತ್ತು. ಆದರೆ, ರಾಷ್ಟ್ರೀಯ ಹೆದ್ದಾರಿಗೆ ನಿರ್ಮಿಸಿದ ಸೇತುವೆಗಳು ಅವೈಜ್ಞಾನಿಕವಾದ ಕಾರಣ ನೀರು ಹರಿಯಲು ಅವಕಾಶ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ನೀರು ಹಿಂದಕ್ಕೆ ಚಿಮ್ಮಿ ಹೊಲಗದ್ದೆಗಳಿಗೆ, ಸುತ್ತಲಿನ ಮನೆಗಳಿಗೂ ನುಗ್ಗುವುದು ಸಾಮಾನ್ಯವಾಗಿದೆ.

ಭತ್ತ ಮಾತ್ರವಲ್ಲ; ಪರ್ಯಾಯವಾಗಿ ಗೆಣಸು, ಕೊತ್ತಂಬರಿ, ಮೆಂತ್ಯೆ, ಬದನೆಕಾಯಿ, ಸೌತೆಕಾಯಿ, ಮೆಣಸಿನಕಾಯಿ ಸೇರಿ ನಾನಾ ಬಗೆಯ ತರಕಾರಿ ಬೆಳೆಯಲಾಗುತ್ತದೆ. ಈಗ ಎಲ್ಲ ಬೆಳೆಗಳೂ ಹಾಳಾಗುವ ಆತಂಕ ಎದುರಾಗಿದೆ. 

ಬೆಳಗಾವಿ ತಾಲ್ಲೂಕಿನ ಯಳ್ಳೂರು ಗ್ರಾಮದ ಭತ್ತದ ಗದ್ದೆಗಳಿಗೆ ನಿಗ್ಗಿದ ಬಳ್ಳಾರಿ ನಾಲೆಯ ನೀರು  ಪ್ರಜಾವಾಣಿ ಚಿತ್ರ

ಆತಂಕ ಎದುರಿಸುವ ಗ್ರಾಮಗಳು

ಬೆಳಗಾವಿ ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯ ಪ್ರದೇಶ ಬಳ್ಳಾರಿ ನಾಲಾ ಸುತ್ತಲಿನ ಯಳ್ಳೂರು ಧಾಮಣೆ ಹಲಗಾ ಉಚಗಾವಿ ಅಲಾರವಾಡ ಸುಳಗಾ ದೇಸೂರು ಸಾಂಬ್ರಾ ಬಸವನಕುಡಚಿ ಮುಚ್ಚಂಡಿ ಅಷ್ಟೆ ಚಂದಗಡ ಮುತಗಾ ಸಾಂಬ್ರಾ ಮೋದಗಾ ಸುಳೇಭಾವಿ ಮೊದಲಾದ ಕಡೆಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಬಾಸುಮತಿ ತಳಿಯ ಭತ್ತ ಬೆಳೆಯಲಾಗುತ್ತದೆ. ಬೆಳಗಾವಿ ತಾಲ್ಲೂಕಿನಾದ್ಯಂತ 25 ಸಾವಿರ ಹೆಕ್ಟೆರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಭತ್ತ ಹಾಕಲಾಗಿದೆ. ಈ ಎಲ್ಲ ಗ್ರಾಮಗಳ ರೈತರಿಗೆ ಬಳ್ಳಾರಿ ನಾಲೆಯ ನೀರೇ ವರ; ಅದುವೇ ಶಾಪವಾಗಿದೆ. ಅತಿವೃಷ್ಟಿಯಾದರಂತೂ ನಾಲೆಯ ಇಕ್ಕೆಲಗಳಲ್ಲಿರುವ ಮನೆಗಳಿಗೂ ನೀರು ನುಗ್ಗುವುದು ಖಚಿತ.

ಏನೂ ಮಾಡಲು ಆಗದು ಎಂದ ಸಚಿವ

ಬಳ್ಳಾರಿ ನಾಲೆಯ ಸಮಸ್ಯೆ ಕುರಿತು ಮಾಧ್ಯಮ ಸಂವಾದದಲ್ಲಿ ಚರ್ಚಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ‘ಇದರ ಪರಿಹಾರಕ್ಕೆ ಏನು ಮಾಡುವುದಕ್ಕೂ ಆಗದ ಸ್ಥಿತಿ ಇದೆ’ ಎಂಬ ಮಾತು ಹೇಳಿದರು. ಇದು ನಾಲಾ ಪ್ರದೇಶದ ಸಂತ್ರಸ್ತರನ್ನು ಮತ್ತಷ್ಟು ಚಿಂತೆಗೆ ತಳ್ಳಿದೆ.

‘ನಾಲೆ ನೀರು ಹರಿದುಹೋಗಲು ಎಲ್ಲೂ ಜಾಗವಿಲ್ಲ. ವರ್ಷದಿಂದ ವರ್ಷಕ್ಕೆ ಒತ್ತುವರಿ ಹೆಚ್ಚಾಗುತ್ತ ಸಾಗಿದೆ. ಎಂಜಿನಿಯರ್‌ಗಳು ಏನಾದರೂ ಇದಕ್ಕೆ ಪರ್ಯಾಯ ಉಪಾಯ ಕಂಡುಕೊಳ್ಳಬೇಕು’ ಎಂದೂ ಸಚಿವ ಹೇಳಿದ್ದರು.

‘ನಾಲಾ ಸಮಸ್ಯೆ ನಿವಾರಣೆಗೆ ಯತ್ನ ನಡೆದಿದೆ’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಹೇಳಿದಾಗ ರೈತರು ತುಸು ನಿಟ್ಟುಸಿರು ಬಿಟ್ಟಿದ್ದರು. ಆದರೆ ಸಚಿವರು ಅದಕ್ಕೆ ಪರಿಹಾರ ಮಾರ್ಗವೇ ಇಲ್ಲ ಎಂದ ತಕ್ಷಣ ಮತ್ತಷ್ಟು ಚಿಂತೆಗೀಡಾಗಿದ್ದಾರೆ.

ಇವರೇನಂತಾರೆ?
ಈ ವರ್ಷ ಎರಡೂವರೆ ಎಕರೆಯಲ್ಲಿ ಭತ್ತ ಬಿತ್ತಿದ್ದೇವೆ. ಕಳೆದ ಹತ್ತು ದಿನಗಳಿಂದ ಬೆಳೆ ಮುಳುಗುವಷ್ಟು ನೀರು ನಿಂತಿದೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಎದುರಾಗಿ ಎರಡನೇ ಬಾರಿ ಬಿತ್ತನೆ ಮಾಡಿದ್ದೇವು. ಈಗ ಮತ್ತೆ ಅದೇ ಪರಿಸ್ಥಿತಿ ಎದುರಾಗಿದೆ.
– ಮನೋಹರ ಧಾಮನೆ ರೈತ
ಬಳ್ಳಾರಿ ನಾಲೆ ನಂಬಿಕೊಂಡೇ ನಾವು ಕೃಷಿ ಮಾಡುತ್ತ ಬಂದಿದ್ದೇವೆ. ಅವೈಜ್ಞಾನಿಕ ಕಾಮಗಾರಿ ಮಾಡಿದ ಪರಿಣಾಮ ರೈತರು ಸಂಕಷ್ಟ ಎದುರಿಸುವಂತಾಗಿದೆ. ಈ ವರ್ಷವೂ 2000 ಎಕರೆಗೂ ಹೆಚ್ಚು ಪ್ರದೇಶ ನೀರಿನಲ್ಲಿ ನಿಂತಿದೆ. ಇದೆಲ್ಲಕ್ಕೂ ಸರ್ಕಾರವೇ ಹೊಣೆ. ಕೂಡಲೇ ಪರಿಹಾರ ನೀಡಬೇಕು.
– ಸುರೇಶಪ್ಪ ಕಡಬಿ ರೈತ
ಬಳ್ಳಾರಿ ನಾಲೆಯ ಹಿನ್ನೀರಿನಿಂದ 34 ಹೆಕ್ಟೆರ್‌ ಪ್ರದೇಶದಲ್ಲಿ ನೀರು ನಿಂತಿದೆ. ಜಲಾವೃತವಾದ ಗದ್ದೆಯಲ್ಲಿ ಸುಳಿಯ ಒಳಗೆ ನೀರು ಹೋಗಬಾರದು. ಈಗಾಗಲೇ ಮಳೆ ತುಸು ಬಿಡುವು ನೀಡಿದ್ದು ಭತ್ತದ ಬೆಳೆ ಅಪಾಯದಿಂದ ಪಾರಾಗುವ ಸಾಧ್ಯತೆ ಇದೆ. ರೈತರು ಆತಂಕ ಪಡಬೇಕಾಗಿಲ್ಲ. ಕೂರಿಗೆ ಬಿತ್ತನೆ ಮಾಡಿದವರ ಬೆಳೆ ಹಾಳಾದರೆ ಸೂಕ್ತ ಪರಿಹಾರ ಕೂಡ ಸಿಗಲಿದೆ.
– ಎಚ್‌.ಡಿ. ಕೋಳೇಕರ ಜಂಟಿ ಕೃಷಿ ನಿರ್ದೇಶಕ
ಭತ್ತಕ್ಕೆ ಹೆಚ್ಚಿನ ನೀರು ಬೇಕು. ಆದರೆ ಸುಳಿಯಲ್ಲಿ ನೀರು ಹೋದರೆ ಹಾಳಾಗುತ್ತದೆ. ಐದಾರು ದಿನಗಳ ಕಾಲ ಗದ್ದೆಯಲ್ಲಿ ನೀರು ಸಂಗ್ರಹವಾಗದಂತೆ ರೈತರು ಜರಿ ಮಾಡಿ ನೀರನ್ನು ಹರಿಸಬೇಕು. ಜುಲೈ 2ರವರೆಗೂ ಮಳೆ ಬಿಡುವು ನೀಡಲಿದೆ. ನಂತರ ಮತ್ತೆ ಜೋರಾಗಿ ಬೀಳುವ ಸಾಧ್ಯತೆ ಇದೆ.
– ಜಿ.ಬಿ.ವಿಶ್ವನಾಥ ಕೃಷಿ ವಿಜ್ಞಾನಿ ಐಸಿಆರ್– ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.