ADVERTISEMENT

ಸ್ವಂತ ಕಾಸು ಬಿಚ್ಚದ ರಾಜಕಾರಣಿಗಳು! ಜನಪ್ರತಿನಿಧಿಗಳ ಧೋರಣೆಗೆ ಟೀಕೆ

ಪಿಎಂ ಕೇರ್ಸ್‌ಗೆ ಕೊಟ್ಟಿದ್ದು ಸಂಸದರ ನಿಧಿಯ ಮೊತ್ತ:

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 3:23 IST
Last Updated 1 ಏಪ್ರಿಲ್ 2020, 3:23 IST
   

ಬೆಂಗಳೂರು: ಕೋವಿಡ್‌–19 ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಸಂಸದರು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ (ಎಂಪಿಎಲ್‌ಎಡಿ) ಹಣವನ್ನೇ ದೇಣಿಗೆಯಾಗಿ ನೀಡುತ್ತಿದ್ದಾರೆಯೇ ವಿನಾ ತಮ್ಮ ಸ್ವಂತ ಹಣ ಬಿಚ್ಚುತ್ತಿಲ್ಲ ಎಂಬ ಟೀಕೆಗಳು ಕೇಳಿ ಬಂದಿದೆ.

ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಹಣದಿಂದ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ಉಪಕರಣಗಳನ್ನು ಖರೀದಿಸುವಂತೆ ಈಗಾಗಲೇ ಕೆಲವು ಸಂಸದರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನೊಂದೆಡೆ ಪಿಎಂ ಕೇರ್ಸ್‌ ನಿಧಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳು ದೇಣಿಗೆ ನೀಡುತ್ತಿದ್ದಾರೆ.

‘ರಾಜ್ಯದಲ್ಲಿ ನೂರಾರು ಕೋಟಿ ಮತ್ತು ಸಾವಿರಾರು ಕೋಟಿ ಆಸ್ತಿ– ಪಾಸ್ತಿಯನ್ನು ಹೊಂದಿರುವ ಸಾಕಷ್ಟು ರಾಜಕಾರಣಿಗಳು ಇದ್ದು, ಯಾರೂ ತಮ್ಮ ಜೇಬಿನಿಂದ ದೇಣಿಗೆ ನೀಡಲು ಮುಂದಾಗಿಲ್ಲ. ಜನರ ತೆರಿಗೆ ಹಣವನ್ನೇ ಬಳಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರು ಮತ್ತು ಇತರ ಮಧ್ಯಮ ವರ್ಗದ ಜನತೆ ತಮ್ಮ ಕೈಯಲ್ಲಾದಷ್ಟು ಹಣವನ್ನು ನೀಡುತ್ತಿದ್ದಾರೆ.ದೇಶದ ಈಗಿನ ಪರಿಸ್ಥಿತಿಯನ್ನು ನಿಭಾಯಿಸಲು ಅಳಿಲು ಸೇವೆ ಸಲ್ಲಿಸುವುದು ನಾಗರಿಕರಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಕಾರಣಕ್ಕೆ ಒಂದು ದಿನದ ವೇತನವನ್ನು ಪ್ರಧಾನಿ ಕೇರ್‌ ನಿಧಿಗೆ ನೀಡಿದ್ದೇವೆ’ ಎಂದು ಬ್ಯಾಂಕ್‌ ಉದ್ಯೋಗಿ ಚಂದ್ರಶೇಖರ್ ರಾವ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ರಾಜ್ಯದ ಬಿಜೆಪಿ ಮತ್ತು ಕಾಂಗ್ರೆಸ್‌ನ ಕೆಲವು ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ತಲಾ ₹1 ಕೋಟಿಯಿಂದ ₹2 ಕೋಟಿಯನ್ನು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ತೆಗೆದು ಆಸ್ಪತ್ರೆಗಳಲ್ಲಿ ಕೋವಿಡ್‌–19 ಚಿಕಿತ್ಸೆಗೆ ಅಗತ್ಯವಿರುವ ಉಪಕರಣ ಬಳಸುವಂತೆ ಸೂಚಿಸಿ ಪ್ರಚಾರ ಪಡೆಯುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಅಜಿತ್ ಎಂಬುವರು ಪ್ರಶ್ನಿಸಿದ್ದಾರೆ.

ಕಂದಾಯ ಸಚಿವ ಆರ್.ಅಶೋಕ ಅವರು ತಮ್ಮ ಒಂದು ವರ್ಷದ ವೇತನ ನೀಡುವುದಾಗಿ ಪ್ರಕಟಿಸಿದ್ದಾರೆ.

ಕಾಂಗ್ರೆಸ್‌ನ ಪ್ರತಿಯೊಬ್ಬ ಶಾಸಕರು ತಮ್ಮ ಕೈಯಿಂದ ₹1 ಲಕ್ಷ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಪಿಎಂ ಕೇರ್‌ ಫಂಡ್‌ ಉದ್ದೇಶವೇನು?
ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್‌) ಮತ್ತು ಪಿಎಂ ಕೇರ್ ಫಂಡ್‌ಗೆ ವ್ಯತ್ಯಾಸವಿದೆ. ಪಿಎಂ ರಾಷ್ಟ್ರೀಯ ಪರಿಹಾರ ನಿಧಿ ರಾಷ್ಟ್ರೀಯ ಪ್ರಾಕೃತಿಕ ದುರಂತಗಳಿಗೆ ಸಂಬಂಧಿಸಿದ ನಿಧಿ. ಈ ನಿಧಿ ಸ್ಥಾಪಿಸಿದ್ದು 1948 ರಲ್ಲಿ. ಭೂಕಂಪ, ಚಂಡಮಾರುತ ಮತ್ತು ಪ್ರವಾಹ ಸೇರಿ ಹಲವು ಬಗೆಯ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ತುರ್ತು ಕಾರ್ಯಗಳಿಗೆ ಬಳಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಪಿಎಂ ಕೇರ್‌ ನಿಧಿ ಸ್ಥಾಪಿಸಲು ಮುಖ್ಯ ಕಾರಣ ಈಗ ದೇಶ ವ್ಯಾಪಿ ಹರಡುತ್ತಿರುವ ಸಾಂಕ್ರಾಮಿಕ ಕೋವಿಡ್‌–19 ತಡೆಗೆ ಬಳಸಲು ಮತ್ತು ಭವಿಷ್ಯದಲ್ಲಿ ಆರೋಗ್ಯದ ತುರ್ತುಸ್ಥಿತಿ ಸಂದರ್ಭ ಬಂದರೆ ಪರಿಸ್ಥಿತಿ ನಿಭಾಯಿಸಲು ಸ್ಥಾಪಿಸಿರುವ ಆರೋಗ್ಯ ಆರೈಕೆ ನಿಧಿ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಕಾರ್ಪೊರೇಟ್‌ ಕಂಪನಿಗಳು ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು(ಸಿಎಸ್‌ಆರ್‌) ಇದಕ್ಕೆ ಬಳಸಬಹುದು. ಪಿಎಂ ಕೇರ್‌ಗೆ ₹10 ಮತ್ತು ಅದಕ್ಕಿಂತ ಮಿಗಿಲಾಗಿ ಎಷ್ಟು ಹಣವನ್ನು ಬೇಕಾದರೂ ದೇಣಿಗೆ ನೀಡಬಹುದು. ಪಿಎಂಕೇರ್‌ ಫಂಡ್‌ ಸ್ಥಾಪಿಸಿರುವುದನ್ನು ಕೆಲವು ರಾಜಕೀಯ ಪಕ್ಷಗಳ ನಾಯಕರು ಮತ್ತು ಇತರರು ಪ್ರಧಾನಿ ಮೋದಿಯವರನ್ನು ಟೀಕಿಸಿದ್ದಾರೆ.

ಸಂಸದರ ನಿಧಿ ಪೂರ್ಣ ಬಳಸಿ
ಕೋವಿಡ್‌–19 ತಡೆಗೆ ಮತ್ತು ಆ ಬಳಿಕ ಉದ್ಭವಿಸುವ ಸಾಮಾಜಿಕ– ಆರ್ಥಿಕ ಸಮಸ್ಯೆ ನಿಭಾಯಿಸಲು ಎಲ್ಲ ಸಂಸದರ, ರಾಜ್ಯಸಭಾ ಸದಸ್ಯರ ‘ಸಂಸದರ ನಿಧಿ’ ಮತ್ತು ಎಲ್ಲ ರಾಜ್ಯಗಳ ‘ಶಾಸಕರ ನಿಧಿ’ಯ ಹಣವನ್ನು ಪೂರ್ಣವಾಗಿ ಬಳಸಬೇಕು ಎಂದು ಮಾಜಿ ಸಚಿವ ಜಯಪ್ರಕಾಶ್‌ ಹೆಗ್ಡೆ ಸಲಹೆ ನೀಡಿದ್ದಾರೆ.

ದೇಶದ ಎಲ್ಲ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಸಂಸದರ ನಿಧಿಯ ಒಟ್ಟು ಮೊತ್ತ ₹3,900 ಕೋಟಿ ಆಗುತ್ತದೆ. ಕರ್ನಾಟಕದಲ್ಲಿ ಶಾಸಕರು ಮತ್ತು ಮೇಲ್ಮನೆ ಸದಸ್ಯರ ಶಾಸಕರ ನಿಧಿಯ ಒಟ್ಟು ಮೊತ್ತ ₹595 ಕೋಟಿ ಆಗುತ್ತದೆ. ಆ ಹಣವನ್ನೂ ಸಂಪೂರ್ಣ ಬಳಸಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಹೆಗ್ಡೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.