ADVERTISEMENT

ಬಾರ್ ನಂಬಿದವರ ಬದುಕು ಅತಂತ್ರ, ಕೆಲಸ ಇಲ್ಲದಿರುವುದರಿಂದ ಕಾರ್ಮಿಕರಿಗೂ ತೊಂದರೆ

ಎಂ.ಮಹೇಶ
Published 24 ಆಗಸ್ಟ್ 2020, 19:30 IST
Last Updated 24 ಆಗಸ್ಟ್ 2020, 19:30 IST
   

ಬೆಳಗಾವಿ: ಜಿಲ್ಲೆಯಲ್ಲಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಪಾರ್ಸಲ್‌ಗೆ ಮಾತ್ರವೇ ಸರ್ಕಾರ ಅವಕಾಶ ನೀಡಿರುವುದರಿಂದಾಗಿ, ಆ ಉದ್ಯಮವನ್ನೇ ನಂಬಿರುವವರ ಬದುಕು ಅತಂತ್ರವಾಗಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಜಾರಿಯಾಗಿತ್ತು. ಆಗ, ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಮೇ ಮೊದಲ ವಾರದಿಂದ ಮದ್ಯದ ಅಂಗಡಿಗಳಲ್ಲಿ ಪಾರ್ಸಲ್‌ಗೆ ಮಾತ್ರವೇ ಅವಕಾಶ ನೀಡಲಾಗಿದೆ. ಆದರೆ, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಕುಳಿತು ಮದ್ಯ ಸೇವಿಸಲು ನಿರ್ಬಂಧ ಮುಂದುವರಿದಿದೆ. ಪರಿಣಾಮ, ವಹಿವಾಟು ಪ್ರಮಾಣದಲ್ಲಿ ಚೇತರಿಕೆ ಕಂಡಿಲ್ಲ. ಹೀಗಾಗಿ ನಷ್ಟ ಅನುಭವಿಸುತ್ತಿದ್ದೇವೆ ಎನ್ನುವುದು ಮಾಲೀಕರ ಅಳಲಾಗಿದೆ.

‘ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಚಿಲ್ಲರೆ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಮೂಲಕ ನಮಗೆ ಆಗುತ್ತಿರುವ ನಷ್ಟ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ. ಇದರಿಂದಾಗಿ ಹಲವು ತಿಂಗಳಿಂದಲೂ ನಷ್ಟದ ಸುಳಿಗೆ ಸಿಲುಕಿದ್ದೇವೆ’ ಎನ್ನುತ್ತಾರೆ ಈ ಉದ್ಯಮಿಗಳು.

ADVERTISEMENT

ಅಲ್ಲೇ ಸೇವಿಸುವಂತಿದ್ದರೆ:

‘ರೆಸ್ಟೋರೆಂಟ್‌ಗಳಲ್ಲಿ ಆಹಾರದ ಜೊತೆ ಮದ್ಯ ಸೇವನೆಗೆ ಅವಕಾಶವಿದ್ದರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇಲ್ಲವಾದಲ್ಲಿ ಕಡಿಮೆ ಇರುತ್ತಾರೆ. ಪಾರ್ಸಲ್‌ ತೆಗೆದುಕೊಂಡು ಹೋದರೆ ಸೇವಿಸುವುದು ಎಲ್ಲಿ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಮನೆಗಳಲ್ಲಿ ಅಥವಾ ಹೊರಗಡೆ ರೆಸ್ಟೋರೆಂಟ್‌ನಂತಹ ವಾತಾವರಣ ಇರುವುದಿಲ್ಲ. ಅಲ್ಲಾದರೆ ಗ್ರಾಹಕರು ಮದ್ಯ ಸೇವಿಸುವ ಪ್ರಮಾಣವೂ ಹೆಚ್ಚಿರುತ್ತದೆ. ಇದರಿಂದ ವ್ಯಾಪಾರವೂ ಚೆನ್ನಾಗಿ ಆಗುತ್ತದೆ. ನಿರ್ವಹಣಾ ವೆಚ್ಚವನ್ನು ಸರಿದೂಗಿಸಬಹುದು’ ಎನ್ನುತ್ತಾರೆ ಮಾಲೀಕರು.

‘ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ವಹಿವಾಟು ಕಡಿಮೆ ಆಗಿರುವುದರಿಂದ ಕೆಲಸವೂ ಕಡಿಮೆ ಇದೆ. ಹೀಗಾಗಿ, ಕಾರ್ಮಿಕರಿಗೆ ಸಂಬಳ ಕೊಡುವುದು ಹೊರೆಯಾಗಿ ಪರಿಣಮಿಸಿದೆ. ಆದ್ದರಿಂದ ಬಹುತೇಕ ಕಡೆಗಳಲ್ಲಿ ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದರಿಂದ ಹಲವರು ಕೆಲಸ ಕಳೆದುಕೊಂಡಿದ್ದಾರೆ. 50 ಮಂದಿ ಇದ್ದ ಕಡೆಗಳಲ್ಲಿ ಸರಾಸರಿ 20ಕ್ಕೆ ಕಡಿತಗೊಳಿಸಲಾಗಿದೆ. ಕೆಲವು ಮಾಲೀಕರು ಸನ್ನದು ಮಾರಾಟಕ್ಕೂ ಮುಂದಾಗಿದ್ದಾರೆ’ ಎನ್ನುತ್ತಾರೆ ಅವರು.

ಜಿಲ್ಲೆಯಲ್ಲಿ 66 ಎಂಎಸ್‌ಐಎಲ್‌ ಮಳಿಗೆ ಸೇರಿ 641 ಮದ್ಯದ ಅಂಗಡಿಗಳಿವೆ. 220ಕ್ಕೂ ಹೆಚ್ಚಿನ ಬಾರ್‌ ಅಂಡ್ ರೆಸ್ಟೋರೆಂಟ್‌ಗಳಿವೆ.

ಸರ್ಕಾರದಿಂದ ನೆರವಿಲ್ಲ:

‘ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಶೇ 20ರಷ್ಟು ಮಾತ್ರವೇ ವ್ಯಾಪಾರ ಆಗುತ್ತಿದೆ. ಅಲ್ಲೇ ಕುಳಿತು ಮದ್ಯ ಸೇವಿಸಲು ಅವಕಾಶ ಇಲ್ಲದಿರುವುದರಿಂದಾಗಿ ಶೇ 80ರಷ್ಟು ಗ್ರಾಹಕರು ಸುಳಿಯುತ್ತಿಲ್ಲ. ಬಾಡಿಗೆ, ಪರವಾನಗಿ ನವೀಕರಣ, ಕಾರ್ಮಿಕರ ಸಂಬಳ ಪಾವತಿಸುವುದು, ನಿರ್ವಹಣಾ ವೆಚ್ಚಕ್ಕೆ ಹಣ ಹೊಂದಿಸಬೇಕಾಗಿರುವುದರಿಂದ ನಮ್ಮ ಬದುಕು ದುಸ್ತರವಾಗಿದೆ. ಬಹಳ ನಷ್ಟವಾಗುತ್ತಿದೆ. ಸರ್ಕಾರದಿಂದ ನಮಗೆ ಯಾವುದೇ ನೆರವು ದೊರೆತಿಲ್ಲ. ಬದಲಿಗೆ ಪರವಾನಗಿ ನವೀಕರಣ ಶುಲ್ಕವನ್ನು ಕಟ್ಟಿಸಿಕೊಳ್ಳಲಾಗುತ್ತಿದೆ. ಪಾರ್ಸಲ್‌ಗೆ ಮಾತ್ರವೇ ಅವಕಾಶ ಮುಂದುವರಿಸಿರುವುದು ಮಾರಕವಾಗಿ ಪರಿಣಮಿಸಿದೆ’ ಎಂದು ಟಾಪ್ ಅಂಡ್ ಟೌನ್‌ ಬಾರ್‌ ಮಾಲೀಕ ವಿಜಯ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.