ADVERTISEMENT

ಮಲಪ್ರಭೆ ಪ್ರವಾಹದಿಂದ ಬೆಳೆ ಹಾನಿ

ರಾಮದುರ್ಗ: ರೈತರ ಬದುಕು ಅತಂತ್ರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 4:27 IST
Last Updated 9 ಆಗಸ್ಟ್ 2024, 4:27 IST
ರಾಮದುರ್ಗದ ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಿದ್ದು ಅವರಾದಿ ಗ್ರಾಮದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ
ರಾಮದುರ್ಗದ ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಿದ್ದು ಅವರಾದಿ ಗ್ರಾಮದಲ್ಲಿ ಬೆಳೆದ ಈರುಳ್ಳಿ ಬೆಳೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ   

ರಾಮದುರ್ಗ: ಉತ್ತಮ ಮಳೆಯಾಗಿದೆ ಎಂದು ಸಾಲ ಮಾಡಿ ಬೆಳೆದಿದ್ದ ಬೆಳೆ ಮಲಪ್ರಭೆಯ ಪ್ರವಾಹಕ್ಕೆ ಸಿಕ್ಕು ಹಾನಿಯಾಗಿದೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಪಶ್ಚಿಮ ಘಟದಲ್ಲಾದ ಭಾರಿ ಮಳೆಯಿಂದಾಗಿ ಸವದತ್ತಿಯ ನವಿಲುತೀರ್ಥ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ನದಿಗೆ ಸುಮಾರು 15 ಸಾವಿರ ಕ್ಯೂಸೆಕ್‌ ನೀರು ಹರಿಸಿ ನದಿ ಪಕ್ಕದ ಪೈರುಗಳು ನೀರುಪಾಲಾಗಿವೆ. ಮಳೆ ಇಲ್ಲದಿದ್ದರೂ ಕೊಳವೆ ಬಾವಿಯ ನೀರನ್ನು ಬಳಸಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದ ರೈತರ ಬದುಕು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿಸಿದೆ.

ಮಲಪ್ರಭಾ ನದಿ ದಂಡೆಯ ಜಮೀನುಗಳಲ್ಲಿ ಬೆಳೆದ ಕಬ್ಬು, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಹೆಸರು, ಬಾಳೆ, ಈರುಳ್ಳಿ ಬೆಳೆಗಳು ನೀರಲ್ಲಿ ಮುಳುಗಿ ಹಾನಿ ಎದುರಾಗಿದೆ. ಇದರಿಂದ ನಾಗರ ಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಮಲಪ್ರಭೆಯ ಪ್ರವಾಹಕ್ಕೆ 350 ಹೆಕ್ಟೇರ್‌ ಹೆಸರು, 240 ಹೆಕ್ಟೇರ್‌ ಗೋವಿನಜೋಳ, 270 ಹೆಕ್ಟೇರ್‌ ಹತ್ತಿ, 178 ಹೆಕ್ಟೇರ್‌ ಸೂರ್ಯಕಾಂತಿ, 300 ಹೆಕ್ಟೇರ್‌ ಕಬ್ಬು ಬೆಳೆ ಹಾಳಾಗದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್. ಎಫ್. ಬೆಳವಟಗಿ ತಿಳಿಸಿದರು.

10 ಎಕರೆ ಬಾಳೆ, 59 ಹೆಕ್ಟೇರ್‌ ಈರುಳ್ಳಿ, 31 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಹೂವು ಮತ್ತು ತರಕಾರಿ ಬೆಳೆ ಪ್ರದೇಶಕ್ಕೆ ನೀರು ಆವೃತಗೊಂಡು ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಸಂಗೀತಾ ಕುರೇರ ಹೇಳಿದರು.

ನದಿಗೆ 15 ಸಾವಿರ ನೀರು ಬಿಟ್ಟಿದ್ದರಿಂದ ಮನೆಗಳಿಗೆ ನೀರು ನುಗ್ಗಿಲ್ಲ. ಬೆಳೆಗಳು ಜಲಾವೃತಗೊಂಡಿವೆ. ಅವುಗಳ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಪ್ರಕಾಶ ಹೊಳೆಪ್ಪಗೋಳ

ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.