ತೋರಾಳಿ(ಖಾನಾಪುರ ತಾಲ್ಲೂಕು): ‘ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ದೇಶದ ಆಂತರಿಕ ಭದ್ರತಾ ವ್ಯವಸ್ಥೆಯ ಬೆನ್ನೆಲುಬು. ನಕ್ಸಲಿಸಂ, ಭಯೋತ್ಪಾದನೆ, ದಂಗೆ ಅಥವಾ ಯಾವುದೇ ವಿಪತ್ತು ಸಂಭವಿಸಿದರೂ, ಸೇವೆಗೆ ಸಿದ್ಧವಿರುವ ನಮ್ಮ ಸೈನಿಕರಿಗೆ ತರಬೇತಿ, ಜ್ಞಾನ ಮತ್ತು ಸಿದ್ಧತೆ ಮುಖ್ಯ’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯಕುಮಾರ್ ಹೇಳಿದರು.
ಖಾನಾಪುರ ತಾಲ್ಲೂಕು ತೋರಾಳಿ ಗ್ರಾಮದ ಕೋಬ್ರಾ ಸ್ಕೂಲ್ ಆಫ್ ಜಂಗಲ್ ವಾರ್‌ಫೇರ್ ಆ್ಯಂಡ್ ಟ್ಯಾಕ್ಟಿಕ್(ಸಿಎಸ್‌ಜೆಡಬ್ಲ್ಯುಟಿ)ನಲ್ಲಿ ನಿರ್ಮಿಸಿದ ಮೂರು ಕಟ್ಟಡಗಳು, ತರಬೇತಿ ಮತ್ತು ಎ.ವಿ ಕೊಠಡಿ, ಅಧೀನ ಅಧಿಕಾರಿಗಳ ಮೆಸ್ ಹಾಗೂ 180 ಪುರುಷರ ಬ್ಯಾರಕ್ ಅನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘2020–25ನೇ ಸಾಲಿನಲ್ಲಿ ಕೈಗೆತ್ತಿಕೊಂಡ ಈ ಯೋಜನೆಗಳಿಗೆ ಗೃಹ ಸಚಿವಾಲಯ ಅನುಮೋದನೆ ಕೊಟ್ಟಿತ್ತು. 2020ರ ಜೂನ್ 16, ಅಕ್ಟೋಬರ್ 10 ಮತ್ತು 2022ರ ಜುಲೈ 21ರಂದು ವಿವಿಧ ಕಾಮಗಾರಿ ಆರಂಭವಾಗಿದ್ದವು. ಇವುಗಳಿಗೆ ಸುಮಾರು ₹36 ಕೋಟಿ ವೆಚ್ಚವಾಗಿದ್ದು, ಸಿಎಸ್‌ಜೆಡಬ್ಲ್ಯುಟಿಯ ತರಬೇತಿ ಸೌಲಭ್ಯಗಳಿಗೆ ನವೀನ ಸ್ಪರ್ಶ ಸಿಗಲಿದೆ’ ಎಂದರು.
‘ಈಗ ನಿರ್ಮಾಣವಾಗಿರುವುದು ಕೇವಲ ಕಟ್ಟಡಗಳಲ್ಲ. ಬದಲಿಗೆ ನಮ್ಮ ಭವಿಷ್ಯದ ಸಿದ್ಧತೆ, ಭದ್ರತೆ ಮತ್ತು ಧೈರ್ಯಶಾಲಿ ಸೈನಿಕರ ಆತ್ಮಾವಿಶ್ವಾಸದ ಆಧಾರವಾಗಿವೆ. 180 ಜನರ ಬ್ಯಾರಕ್‌ನಲ್ಲಿ ಸುಸಜ್ಜಿತ ಕೊಠಡಿಗಳು, ಊಟದ ಕೊಠಡಿ, ಅಡುಗೆಮನೆ, ಆಧುನಿಕ ಸೌಲಭ್ಯ ಇರಲಿವೆ’ ಎಂದು ತಿಳಿಸಿದರು.
‘ತರಗತಿ ಕೊಠಡಿ ಮತ್ತು ಎ.ವಿ ಕೊಠಡಿ ಕಟ್ಟಡವು ಆಧುನಿಕ ಸಭಾಂಗಣ, ಸೆಮಿನಾರ್ ಹಾಲ್‌ಗಳು, ಆಡಿಯೊ-ವಿಶ್ಯುವಲ್ ಕೊಠಡಿ, ಐಇಡಿ ಮಾದರಿ ಕೊಠಡಿ ಮತ್ತು ತರಬೇತಿಗೆ ಸಂಬಂಧಿಸಿದ ಇತರೆ ಮೂಲಸೌಕರ್ಯ ಹೊಂದಿದೆ. ಇದರಿಂದ ಇನ್ನಷ್ಟು ಪರಿಣಾಮಕಾರಿಯಾಗಿ ತರಬೇತಿ ನೀಡಬಹುದು’ ಎಂದರು.
‘ಸಿಆರ್‌ಪಿಎಫ್ ಹೊರತಾಗಿ, ದೇಶದಲ್ಲಿ ಎಲ್ಲಿಯೂ ಚುನಾವಣೆ ನಡೆಸಲಾಗದು. ವಿವಿಧ ರಾಜ್ಯಗಳಿಗೆ ಕೇಂದ್ರ ಪಡೆಗಳ ಅಗತ್ಯವಿದ್ದಾಗ, ಮೊದಲ ಆದ್ಯತೆಯೇ ಸಿಆರ್‌ಪಿಎಫ್. ನಿಮ್ಮ ಪರಿಶ್ರಮದಿಂದ ದೇಶದ ಜನರು ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ’ ಎಂದರು.
‘ಕೋಬ್ರಾ’ ಘಟಕವು ನಕ್ಸಲಿಸಂ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರಧಾನಿ, ಗೃಹ ಸಚಿವರ ನೇತೃತ್ವದಲ್ಲಿ ಮುಂದಿನ ವರ್ಷದ ಮಾರ್ಚ್ ವೇಳೆಗೆ ನಕ್ಸಲಿಸಂ ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು. ಸೈನಿಕರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ನಿಮ್ಮ ಬೆನ್ನಿಗೆ ಸದಾ ಇರುತ್ತೇವೆ’ ಎಂದೂ ಭರವಸೆ ನೀಡಿದರು.
ಶಾಸಕ ಅಭಯ ಪಾಟೀಲ, ಸಿಆರ್‌ಪಿಎಫ್ ದಕ್ಷಿಣ ವಲಯದ ಎಡಿಜಿ ರವಿದೀಪ್ ಸಿಂಗ್, ಕರ್ನಾಟಕ–ಕೇರಳ ಸೆಕ್ಟರ್‌ನ ಐಪಿಜಿ ವಿಪುರ್‌ಕುಮಾರ, ಸಿಎಸ್‌ಜೆಡಬ್ಲ್ಯುಟಿಯ ಡಿಐಜಿ ರವೀಂದ್ರ ಎಂ.ಎಲ್., ಉತ್ತರ ವಲಯ ಐಜಿಪಿ ಚೇತನ್‌ಸಿಂಗ್ ರಾಠೋರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.