ಅಥಣಿ: ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು, ಕೃಷಿ ಜೊತೆಗೆ ಹೈನುಗಾರಿಕೆಯನ್ನು ಕೂಡ ರೈತರು ಅಳವಡಿಸಿಕೊಳ್ಳಬೇಕು, ಹೈನುಗಾರಿಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಸಲಹೆ ನೀಡಿದರು .
ಅವರು ಪಟ್ಟಣದ ಅಥಣಿ ಗ್ರಾಮೀಣ ಹಾಲು ಉತ್ಪಾದಕರ ಸಹಕಾರಿ ಸಂಘದ (ಬಿ.ಎಂ.ಸಿ.) ಘಟಕ ಉದ್ಘಾಟಿಸಿ ಮಾತನಾನಾಡಿದರು. ಗ್ರಾಮೀಣ ರೈತರ ಹಾಲಿಗೆ ನ್ಯಾಯಯುತ ಬೆಲೆ ಸಿಗಬೇಕು ಎಂಬ ಸದುದ್ದೇಶದಿಂದ ಈ ಸಂಘವನ್ನು ಉದ್ಘಾಟಿಸಲಾಗಿದೆ, ಸಂಘಟನೆ ಪ್ರಾರಂಭಿಸುವುದು ಸುಲಭ, ಆದರೆ ಅದನ್ನು ಕಟ್ಟಿ ಬೆಳೆಸುವುದು ಕಷ್ಟದ ಕೆಲಸ. ಸಂಘವು ಪ್ರಗತಿ ಸಾಧಿಸಬೇಕಾದರೆ ಸಂಘಟಿಕರ ಪರಿಶ್ರಮ, ಪ್ರಾಮಾಣಿಕತೆ ಮತ್ತು ದೂರದೃಷ್ಟಿ ಅತಿ ಮುಖ್ಯ ಎಂದು ಹೇಳಿದರು.
ಅಥಣಿ ತಾಲೂಕಿನಲ್ಲಿ ಪ್ರತಿದಿನ 40 ರಿಂದ 60 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ, ನೀರಾವರಿ ಸೌಲಭ್ಯ ಹೆಚ್ಚಾಗಿರುವುದರಿಂದ ಮುಂದಿನ ದಿನಗಳಲ್ಲಿ 1 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗಬಹುದು ಎಂದರು . ಕೆಎಂಎಫ್ ಆಡಳಿತ ಮಂಡಳಿಯವರು ಎಮ್ಮೆ ಮತ್ತು ಹಸುವಿನ ಹಾಲಿಗೆ ಪ್ರತ್ಯೇಕ ದರ ನಿಗದಿಪಡಿಸಿ ಸಂಗ್ರಹಿಸಬೇಕು,ಇದರಿಂದ ಎಮ್ಮೆ ಹಾಲು ಉತ್ಪಾದಿಸುವ ರೈತರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ ಎಂದು ಸವದಿ ಸಲಹೆ ನೀಡಿದರು.
ಮುಖಂಡ ಶಿವಾನಂದ ದಿವಾನಮಳ ಸ್ವಾಗತಿಸಿದರು . ಶೆಟ್ಟರ್ ಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ರಾಜು ಹಳದಮಳ, ಕೆಎಂಎಫ್ ನಿರ್ದೇಶಕ ಮಹಾದೇವ ಬಿಳಿಕುರಿ, ವಿ.ಎನ್. ಶ್ರೀಕಾಂತ, ಸದಾಶಿವ ಬುಟಾಳಿ, ಮಹಾದೇವ ಹೊನ್ನೋಳಿ, ಮಲ್ಲಿಕಾರ್ಜುನ ಗೂಟಕಿಂಡಿ, ಅಭಯ ಪಾಟೀಲ, ಡಾ. ರಾಕೇಶ. ಸಿ. ಎಂ, ಯಾಸೀನ್ ಮುಲ್ಲಾ, ಡಾ. ಶ್ರೀನಿವಾಸ್ ಜಾಧವ್, ಗಿರೀಶ ದಿವಾನಮಳ. ಶ್ರೀಶೈಲ ಹಳದಮಳ್ಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.