
ಖಾನಾಪುರ: ದಾಂಡೇಲಿ ಅರಣ್ಯದಿಂದ ತಾಲ್ಲೂಕಿನ ನೀಲಾವಡೆ ಭಾಗಕ್ಕೆ ಪ್ರತಿ ವರ್ಷದಂತೆ ಈ ವರ್ಷವೂ ಆಹಾರ ಅರಸಿ 10-15 ಕಾಡಾನೆಗಳ ಹಿಂಡು ಬಂದಿದೆ.
ಈ ಕಾಡಾನೆಗಳ ಪೈಕಿ ಒಂದು ಆನೆಗೆ ನೀಲಾವಡೆ ಅರಣ್ಯದಲ್ಲಿ ಹೆರಿಗೆಯಾಗಿ ಮರಿ ಜನಿಸಿದ್ದರಿಂದ ಮರಿಯ ಸಂರಕ್ಷಣೆಗಾಗಿ ಆನೆಗಳು ಇಲ್ಲಿಯೇ ತಂಗಿವೆ.
ಕಾಡಾನೆಗಳಿಂದ ಬೆಳೆನಾಶ: ನೀಲಾವಡೆ ಗ್ರಾಮದ ಬಳಿ ಮಲಪ್ರಭಾ ನದಿತೀರದಲ್ಲಿ ಕಳೆದ ಹಲವು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಸೋಮವಾರ ರಾತ್ರಿ ನೀಲಾವಡೆ ಹಾಗೂ ಅಕ್ಕಪಕ್ಕದ ಗ್ರಾಮಗಳ ಕೃಷಿ ಜಮೀನುಗಳಲ್ಲಿ ಸಂಚರಿಸಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿ ಉಂಟುಮಾಡಿವೆ.
ಕಾಡಾನೆಗಳ ಕಾಲ್ತುಳಿತಕ್ಕೆ ನೀಲಾವಡೆಯ ರೈತ ರಮೇಶ ನಾಯಕ ಅವರ ಬಾಳೆ-ಅಡಿಕೆ ತೋಟ ಸಂಪೂರ್ಣ ಬಲಿಯಾಗಿದೆ.
’ಆನೆಗಳ ಉಪಟಳದಿಂದ ಬೆಳೆಯನ್ನು ಸಂರಕ್ಷಿಸಬೇಕು. ಈಗಾಗಲೇ ಉಂಟಾಗಿರುವ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ನೀಲಾವಡೆ ಹಾಗೂ ಅಕ್ಕಪಕ್ಕದ ಗ್ರಾಮಗಳ ರೈತರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ತಾಲ್ಲೂಕಿನ ಕಾನನದಂಚಿನ ಪ್ರದೇಶಗಳಲ್ಲಿ ಸಂಚರಿಸಿ ರೈತರ ಬೆಳೆಹಾನಿ ಮಾಡುತ್ತಿರುವ ಗಜಪಡೆ ನೀಲಾವಡೆ ಗ್ರಾಮದ ಬಳಿ ಆಗಮಿಸಿ ಐದಾರು ವಾರಗಳು ಕಳೆದಿವೆ. ಇದೇ ಸಂದರ್ಭದಲ್ಲಿ ಗಜಪಡೆಯಲ್ಲಿದ್ದ ಒಂದು ಹೆಣ್ಣಾನೆಗೆ ಹೆರಿಗೆಯಾಗಿ ಮರಿಯಾನೆ ಜನಿಸಿದೆ. ತಮ್ಮೊಡನೆ ಮರಿ ಇರುವ ಕಾರಣ ಆನೆಗಳ ಹಿಂಡು ನೀಲಾವಡೆ ಪ್ರದೇಶವನ್ನು ಬಿಟ್ಟು ಬೇರೆಡೆ ಕದಲುತ್ತಿಲ್ಲ. ಹಗಲು ಹೊತ್ತು ಮರಿಯಾನೆಯ ರಕ್ಷಣೆ ಮಾಡುವ ಆನೆಗಳು ರಾತ್ರಿಯ ಹೊತ್ತು ಈ ಭಾಗದ ಕೃಷಿ ಜಮೀನುಗಳಿಗೆ ನುಗ್ಗಿ ದಾಂದಲೆ ಮಾಡುತ್ತಿವೆ.
ಕಬ್ಬು, ಅಡಿಕೆ, ಬಾಳೆ, ಗೋಡಂಬಿ ತೋಟಗಳು ಮತ್ತು ಭತ್ತದ ಗದ್ದೆಗಳಲ್ಲಿ ಸಂಚರಿಸಿ ಹಾನಿ ಮಾಡುತ್ತಿವೆ. 10 ರಿಂದ 15 ಆನೆಗಳ ಹಿಂಡು ಈ ಭಾಗದಲ್ಲಿ ತಂಗಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗ ಆತಂಕಗೊಂಡಿದೆ.
’ಆನೆಗಳನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆ ಕೈಗೊಂಡಿರುವ ಪ್ರಯತ್ನಗಳೂ ವಿಫಲವಾಗಿವೆ. ನೀಲಾವಡೆ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಹಿಂಡು ಸಂಚರಿಸಿ ರೈತರ ಬೆಳೆಹಾನಿ ಮಾಡುತ್ತಿದ್ದು, ಆನೆಗಳ ಭಯದಿಂದ ನಮ್ಮ ಭಾಗದ ರೈತರು ಹಿಂಗಾರು ಬೆಳೆಯನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ನೀಲಾವಡೆ ಗ್ರಾಪಂ ಸದಸ್ಯ ವಿನಾಯಕ ಮುತಗೇಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೆಗಳನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆಯಿಂದ ಪ್ರಯತ್ನ ನಡೆದಿದೆ. ಇತ್ತ ರೈತರ ಬೆಳೆಹಾನಿಗೆ ಪರಿಹಾರ ನೀಡುವ ಕೆಲಸವೂ ಪ್ರಗತಿಯಲ್ಲಿದೆ. ರೈತರು ಆತಂಕ ಪಡಬಾರದು. ಇಲಾಖೆಯೊಂದಿಗೆ ಸಹಕರಿಸಬೇಕು
ಸುನೀತಾ ನಿಂಬರಗಿ, ಎಸಿಎಫ್. ಖಾನಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.