ADVERTISEMENT

‘ಪರಿಸರ ರಕ್ಷಣೆ ಕೆಲಸಕ್ಕೆ ಬೆಲೆ ಕಟ್ಟಲಾಗದು’

ಮರಗಳ ಸ್ಥಳಾಂತರ; ಜಿಲ್ಲಾಧಿಕಾರಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 12:53 IST
Last Updated 8 ಜುಲೈ 2019, 12:53 IST
ಬೆಳಗಾವಿ ತಾಲ್ಲೂಕಿನ ಪೀರನವಾಡಿ ಕೆರೆಯನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ (ಎಡದಿಂದ 3ನೇಯವರು) ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು
ಬೆಳಗಾವಿ ತಾಲ್ಲೂಕಿನ ಪೀರನವಾಡಿ ಕೆರೆಯನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ (ಎಡದಿಂದ 3ನೇಯವರು) ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು   

ಬೆಳಗಾವಿ: ರಸ್ತೆ ವಿಸ್ತರಣೆ ವೇಳೆ ಮರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ತಾಲ್ಲೂಕಿನ ಪೀರನವಾಡಿ ಕೆರೆಯ ಸುತ್ತಲೂ ನೆಟ್ಟು ಅವುಗಳನ್ನು ಪೋಷಿಸುತ್ತಿರುವುದನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಸೋಮವಾರ ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಮರಗಳ ಸ್ಥಳಾಂತರ ಮತ್ತು ಅವುಗಳ ಪೋಷಣೆ ಕುರಿತು ಮಾಹಿತಿ ಪಡೆದರು. ‘ಅಭಿವೃದ್ಧಿಯ ನಾಗಾಲೋಟದ ಪ್ರಸ್ತುತ ದಿನಗಳಲ್ಲಿ ರಸ್ತೆ ವಿಸ್ತರಣೆ ಮೊದಲಾದ ಅಭಿವೃದ್ಧಿ ಕೆಲಸಕ್ಕೆ ಮರಗಳನ್ನು ಕಡಿಯಲಾಗುತ್ತಿದೆ. ಆದರೆ, ಅನಿವಾರ್ಯವಾಗಿ ತೆರವುಗೊಳಿಸಬೇಕಾದ ಮರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ಈ ನಿಟ್ಟಿನಲ್ಲಿ, ಲೋಕೋಪಯೋಗಿ ಇಲಾಖೆ ಮತ್ತು ವಿವಿಧ ಸಂಘ-ಸಂಸ್ಥೆಗಳು ಪರಿಸರ ಕಾಳಜಿ ಪ್ರದರ್ಶಿಸಿವೆ. ಪರಿಸರ ಸಂರಕ್ಷಣೆಯ ಕೆಲಸಕ್ಕೆ ಬೆಲೆ ಕಟ್ಟಲಾಗದು’ ಎಂದು ಹೇಳಿದರು.

ಜಲ ಮೂಲ ರಕ್ಷಣೆಗೆ ಸೂಚನೆ:

ADVERTISEMENT

ಪೀರನವಾಡಿ ಕೆರೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದ ಅವರು, ‘ಜಲ ಮೂಲ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ದಂಡೆಯಲ್ಲಿ ನಳನಳಿಸುತ್ತಿರುವ ಮರಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಕೆರೆ ಅಭಿವೃದ್ಧಿ ಜೊತೆಗೆ ಮಳೆಗಾಲದಲ್ಲಿ ಕೆರೆಗೆ ನೀರು ಸರಾಗವಾಗಿ ಹರಿದು ಬರುವಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆರೆಯ ಸುತ್ತಲೂ ಉದ್ಯಾನ ಹಾಗೂ ವಾಕಿಂಗ್ ಪಥ ನಿರ್ಮಿಸುವಂತೆ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಆರ್. ಮುನವಳ್ಳಿ ಹಾಗೂ ಸಹಾಯಕ ಎಂಜಿನಿಯರ್ ಎಸ್.ಕೆ. ಎಂಟೆತ್ತನವರ, ಮರಗಳ ಸ್ಥಳಾಂತರ ಕುರಿತು ವಿವರಿಸಿದರು. ಬಾಕ್ಸೈಟ್ ರಸ್ತೆ ವಿಸ್ತರಣೆಗೆ ಒಟ್ಟು 30 ಮರಗಳನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತ್ತು. ಆ ಪ್ರಕಾರ 19 ಮರಗಳನ್ನು ಪೀರನವಾಡಿ ಕೆರೆಯ ದಂಡೆಗೆ ಸ್ಥಳಾಂತರಿಸಲಾಗಿದೆ.

ಪೋಷಣೆಗೆ ನಿಗಾ:

ಮರಗಳ ಸ್ಥಳಾಂತರಕ್ಕೆ ಅಗತ್ಯವಾದ ಜೆಸಿಬಿ, ಲಾರಿ ಮತ್ತಿತರ ಸಲಕರಣೆಗಳು ಹಾಗೂ ಸಾರಿಗೆ ವೆಚ್ಚ ಸೇರಿದಂತೆ ಪ್ರತಿ ಮರದ ಸ್ಥಳಾಂತರಕ್ಕೆ ₹ 18ಸಾವಿರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.

‘ಪರಿಸರ ಪ್ರೇಮಿ ಧಾರವಾಡದ ಅಸ್ಲಂ ಅಬ್ಬಿಹಾಳ ನೇತೃತ್ವದಲ್ಲಿ ‌ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳಾಂತರ ಕಾರ್ಯ ಕೈಗೊಳ್ಳಲಾಗಿತ್ತು. ನಿರೀಕ್ಷೆಯಂತೆ ಎಲ್ಲ ಮರಗಳೂ ಬೆಳೆಯುತ್ತಿದ್ದು, ಅವುಗಳ ಪೋಷಣೆ ಬಗ್ಗೆ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ’ ಎಂದು ಎಸ್.ಕೆ. ಎಂಟೆತ್ತನವರ ವಿವರಿಸಿದರು.

ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಪರಿಸರ ಪ್ರೇಮಿ ಧಾರವಾಡದ ಅಸ್ಲಂ ಅಬ್ಬಿಹಾಳ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.